ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ, ವಿಚಾರಣೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ. ಮೇಕೆದಾಟು ಡ್ಯಾಂ ವಿವಾದವೂ ಇದೇ ಪೀಠದಲ್ಲಿ ವಿಚಾರಣೆ. 8000 ಕ್ಯು. ಅಲ್ಲ, ನಿತ್ಯ 15000 ಕ್ಯು. ನೀರು ಬಿಡಲು ಬೇಡಿಕೆ.

ನವದೆಹಲಿ (ಆ.22): ಕಳೆದ ಮೂರು ತಿಂಗಳಿನಿಂದ ಬಾಕಿ ಉಳಿದಿರುವ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದು ಆಗ್ರಹಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ವಿಚಾರಣೆ ನಡೆಸಲು ತ್ರಿಸದಸ್ಯ ಪೀಠ ರಚಿಸುವುದಾಗಿ ತಿಳಿಸಿದೆ. ಇದೇ ವೇಳೆ, ಕುಡಿಯುವ ನೀರು ಯೋಜನೆಗಾಗಿ ಮೇಕೆದಾಟು ಬಳಿ ಜಲಾಶಯ ನಿರ್ಮಿಸಲು ಅನುಮತಿ ಕೋರಿ ಕರ್ನಾಟಕ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನೂ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದೆ.

ಆಗಸ್ಟ್‌ 10ರಂದು ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ಕರ್ನಾಟಕ ಪ್ರತಿನಿತ್ಯ 15 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ, ಅದು ಕೇವಲ 8 ಸಾವಿರ ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡುತ್ತಿದೆ. ಕಳೆದ 3 ತಿಂಗಳಿಂದ ಐ-ತೀರ್ಪಿನನ್ವಯ ಕರ್ನಾಟಕ ನೀರು ಬಿಟ್ಟಿಲ್ಲ. ಹೀಗಾಗಿ, ಬಾಕಿ ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದು ಕೋರಿ ಸಿಜೆಐ ಪೀಠದ ಮುಂದೆ ತಮಿಳುನಾಡು ಅರ್ಜಿ ಸಲ್ಲಿಸಿತ್ತು.

ಕಳೆದ ವರ್ಷಕ್ಕಿಂತ ಈ ವರ್ಷ ತಮಿಳನಾಡಿಗೆ ಕಮ್ಮಿ ನೀರು ಬಿಡುಗಡೆ: ಜಲಸಂಪನ್ಮೂಲ ಇಲಾಖೆ ಮಾಹಿತಿ

ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಕರ್ನಾಟಕ, ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿದೆ. ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಶೇ.42ರಷ್ಟುಮಳೆ ಕೊರತೆ ಎದುರಾಗಿದೆ. ಹೀಗಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆ ಎದುರಾಗಿದೆ. ರಾಜ್ಯದಲ್ಲಿನ ಮಳೆ ಕೊರತೆಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ಗುರುತಿಸಿದೆ. ಶೇ.42ರಷ್ಟುಮಳೆ ಕೊರತೆಯ ನಡುವೆಯೂ 19.6 ಟಿಎಂಸಿಯಷ್ಟುನೀರನ್ನು ಕರ್ನಾಟಕ ಬಿಡುಗಡೆ ಮಾಡಿದೆ. ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಕೇವಲ 69 ಟಿಎಂಸಿಯಷ್ಟುನೀರಿದ್ದು, ನಮಗೆ ವರ್ಷವೊಂದಕ್ಕೆ 130ಕ್ಕೂ ಹೆಚ್ಚು ಟಿಎಂಸಿಯಷ್ಟುನೀರು ಬೇಕಿದೆ. ಸಂಕಷ್ಟದ ಈ ಕಾಲದಲ್ಲಿ ಹಳೆಯ ಆದೇಶದಂತೆ ನೀರು ಬಿಡುಗಡೆ ಸಾಧ್ಯವಿಲ್ಲ ಎಂದಿತು.

ಉಭಯ ರಾಜ್ಯಗಳ ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ, ಇಂದೇ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ತ್ರಿಸದಸ್ಯ ಪೀಠ ರಚಿಸುವುದಾಗಿ ತಿಳಿಸಿದರು. ತ್ರಿಸದಸ್ಯ ಪೀಠದ ಮುಂದೆ ವಾದ-ಪ್ರತಿವಾದ ಮಂಡಿಸಲು ಸೂಚಿಸಿದರು. ಶುಕ್ರವಾರ ಅಥವಾ ಮುಂದಿನ ಸೋಮವಾರ ತ್ರಿಸದಸ್ಯ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಡಿಎಂಕೆ ಒತ್ತಡಕ್ಕೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್‌: ರಾಜೀವ್‌ ಚಂದ್ರಶೇಖರ್‌

ಮೇಕೆದಾಟುಗೆ ಅರ್ಜಿ: ಇದೇ ವೇಳೆ, ಮೇಕೆದಾಟು ಬಳಿ ಕುಡಿಯುವ ನೀರಿಗಾಗಿ ಜಲಾಶಯ ನಿರ್ಮಿಸಲು ಅವಕಾಶ ಕೋರಿ ಕರ್ನಾಟಕ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಸಂಕಷ್ಟಅಥವಾ ಮಳೆ ಕೊರತೆ ಇರುವ ಸಂದರ್ಭಗಳಲ್ಲಿ ಮೇಕೆದಾಟು ಜಲಾಶಯ ಸಹಕಾರಿಯಾಗಲಿದೆ. ಹೆಚ್ಚುವರಿ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಬಹುದಾಗಿದ್ದು, ಸಂಗ್ರಹವಾದ ನೀರನ್ನು ಸಂಕಷ್ಟದ ಕಾಲದಲ್ಲಿ ಎರಡೂ ರಾಜ್ಯಗಳು ಬಳಸಬಹುದು. ಹೀಗಾಗಿ, ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ. ಈ ಅರ್ಜಿಯ ವಿಚಾರಣೆಯನ್ನು ಕೂಡ ಮುಖ್ಯ ನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದರು.

ಈ ಮಧ್ಯೆ, ಕಾವೇರಿ ತಗಾದೆ ಹೊತ್ತಿನಲ್ಲೇ ಮೇಕೆದಾಟು ಯೋಜನೆಯ ಪ್ರಸ್ತಾಪ ತರುವ ಮೂಲಕ ಕರ್ನಾಟಕ ಉತ್ತಮ ನಡೆ ಪ್ರದರ್ಶಿಸಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಹೇಳೋದೇನು?

- ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿದೆ

- ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಶೇ.42ರಷ್ಟುಮಳೆ ಕೊರತೆ

- ಹೀಗಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಾಕಷ್ಟುನೀರು ಇಲ್ಲ

- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೂ ಈ ವಿಷಯ ತಿಳಿದಿದೆ

- ಮಳೆ ಕೊರತೆಯಿದ್ದರೂ 19.6 ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ

- ಇನ್ನು ಕಾವೇರಿ ಡ್ಯಾಮ್‌ಗಳಲ್ಲಿ ಕೇವಲ 69 ಟಿಎಂಸಿ ನೀರು ಉಳಿದಿದೆ

- ನಮಗೇ ವರ್ಷಕ್ಕೆ 130 ಟಿಎಂಸಿ ಬೇಕು: ಹೀಗಾಗಿ ನೀರು ಬಿಡಲು ಸಾಧ್ಯವಿಲ್ಲ