*  ಈ ನೆಲದ ಮತ್ತು ಕಾನೂನಿನ ವಿರುದ್ಧ ನಿರಂತರ ಷಡ್ಯಂತ್ರ *  ತನಿಖೆಗೆ ಪೊಲೀಸರಿಗೆ ಸೂಚಿಸಿದ್ದೇನೆ, ವರದಿ ನಂತರ ಮುಂದಿನ ಕ್ರಮ *  ಅಲ್‌ಖೈದಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯಗೆ ಯಾಕೆ ಗಲಿಬಿಲಿ?

ಮೈಸೂರು(ಏ.08):  ಹಿಜಾಬ್‌(Hijab) ಗಲಾಟೆ ವೇಳೆ ‘ಅಲ್ಲಾ ಹು ಅಕ್ಬರ್‌’ ಘೋಷಣೆ ಕೂಗಿದ್ದ ಮಂಡ್ಯದ(Mandya) ಯುವತಿ ಮುಸ್ಕಾನ್‌(Muskan) ಬಗ್ಗೆ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಅಲ್‌ಖೈದಾ(Al-Qaeda)ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ ವಿಡಿ​ಯೋಗೆ ಸಂಬಂಧಿ​ಸಿ ತನಿಖೆಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೆಲದ ಮತ್ತು ಕಾನೂನಿನ ವಿರುದ್ಧ ನಿರಂತರ ಷಡ್ಯಂತ್ರ ನಡೆದಿವೆ. ಈ ಬಗ್ಗೆ ತನಿಖೆಗೆ ಪೊಲೀಸರಿಗೆ(Police) ಸೂಚಿಸಿದ್ದೇನೆ, ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಲ್‌ಖೈದಾ ಹೇಳಿಕೆ ಹಿಂದೆ ಆರ್‌ಎಸ್‌ಎಸ್‌(RSS) ಕೈವಾಡವಿದೆ ಎಂಬ ಪ್ರತಿ​ಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರೋಪಕ್ಕೆ ಮುಖ್ಯ​ಮಂತ್ರಿ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿ​ಕ್ರಿ​ಯಿ​ಸಿ​ದ​ರು. ಅಲ್‌ಖೈದಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯಗೆ ಯಾಕೆ ಗಲಿಬಿಲಿ? ಸಿದ್ದರಾಮಯ್ಯರದು ಆಧಾರವಿಲ್ಲದ, ಹೋಲಿಕೆಯಾಗದ ಹೇಳಿಕೆ ಎಂದು ಕುಟುಕಿದರು.

ಹಿಜಾಬ್‌ ವಿವಾದಕ್ಕೆ ಈಗ ಅಲ್‌ಖೈದಾ ಉಗ್ರ ಬೆಂಕಿ: 'ಅಲ್ಲಾ ಹು ಅಕ್ಬರ್‌’ ಎಂದ ಮಂಡ್ಯ ವಿದ್ಯಾರ್ಥಿನಿ ಭೇಷ್‌ ಎಂದ ಜವಾಹಿರಿ

ಅಲ್‌ ಜವಾಹಿರಿ ಯಾರೋ ಗೊತ್ತಿಲ್ಲ, ಇಂತಹ ಹೊಗಳಿಕೆ ಬೇಕಿರಲಿಲ್ಲ: ಮುಸ್ಕಾನ್‌ ಖಾನ್‌ ತಂದೆ ಆತಂಕ

ಮಂಡ್ಯ: ‘ಅಲ್‌ ಜವಾಹಿರಿ (Al Zawahiri) ಯಾರು ಅನ್ನುವುದೇ ನನಗೆ ಗೊತ್ತಿಲ್ಲ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿರಲಿಲ್ಲ’ ಎಂದು ಹಿಜಾಬ್‌-ಕೇಸರಿ ವಿವಾದದ ವೇಳೆ ಮಂಡ್ಯದಲ್ಲಿ ಅಲ್ಲಾ ಹೋ ಅಕ್ಬರ್‌ ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ ಅವರ ತಂದೆ ಮಹಮದ್‌ ಹುಸೇನ್‌ ಖಾನ್‌ ತಿಳಿಸಿದ್ದಾರೆ. ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಅಲ್‌ ಜವಾಹಿರಿ ತಮ್ಮ ಮಗಳನ್ನು ಹೊಗಳಿ ಕವಿತೆ ಬರೆದಿರುವ ಬಗ್ಗೆ ಬುಧವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಅಲ್‌ ಜವಾಹಿರಿ ಯಾರು ಅನ್ನುವುದೇ ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರ ಈ ವಿಚಾರ ತಿಳಿಯಿತು. ಅರಬ್ಬೀ ಭಾಷೆಯಲ್ಲಿ ಮಗಳನ್ನು ಹೊಗಳಿದ್ದಾರೆ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದೆಲ್ಲಾ ತಪ್ಪು. ಗೊಂದಲ ಮಾಡಿ ನಮ್ಮ ನಮ್ಮಲ್ಲಿ ಜಗಳ ತಂದಿಡಲು ಮಾಡುತ್ತಿದ್ದಾರೆ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿರಲಿಲ್ಲ ಎಂದು ಆತಂಕದಿಂದ ನುಡಿದರು.

ಹಿಜಾಬ್‌ ಇರುವ ಕಾಲೇಜಿಗೆ ಮುಸ್ಕಾನ್‌:

ಹಿಜಾಬ್‌ ಕಾರಣಕ್ಕಾಗಿಯೇ ಮಗಳ ಕಾಲೇಜು ಬದಲಿಸುತ್ತಿದ್ದೇವೆ ಎಂದು ಮುಸ್ಕಾನ್‌ ಖಾನ್‌ ಅವರ ತಂದೆ ಮಹಮದ್‌ ಹುಸೇನ್‌ ಖಾನ್‌ ತಿಳಿಸಿದರು. ಹಿಜಾಬ್‌ಗೆ ಅವಕಾಶವಿರುವ ಕಾಲೇಜು ಮೈಸೂರಿನಲ್ಲಿದ್ದು ಮುಸ್ಕಾನ್‌ಳನ್ನು ಅಲ್ಲಿಗೆ ದಾಖಲಿಸುತ್ತೇವೆ. ಹಿಜಾಬ್‌ ಅಥವಾ ವೇಲ್‌ ಹಾಕಿಕೊಳ್ಳಲು ಅವಕಾಶ ನೀಡಿದರೆ ಮಂಡ್ಯದಲ್ಲೇ ದಾಖಲಿಸುತ್ತೇವೆ ಎಂದು ಹೇಳಿದರು. 

ಅಲ್ ಖೈದಾ ಮುಖ್ಯಸ್ಥನ ವಿಡಿಯೋ ಕೂಡ RSS ಅವ್ರೆ ಕಳ್ಸೋದು ಎಂದ ಸಿದ್ಧರಾಮಯ್ಯ!

ಪಿಇಎಸ್‌ ಕಾಲೇಜಿನವರು ಹಿಜಾಬ್‌ಗೆ ಅವಕಾಶ ಕೊಡಲ್ಲ ಎಂದಿದ್ದಕ್ಕೆ ನಾನು ಬೇರೆ ಕಾಲೇಜಿಗೆ ಮಗಳನ್ನ ಸೇರಿಸುವ ನಿರ್ಧಾರ ಮಾಡಿದೆ. ಪರೀಕ್ಷೆ ಬರೆಯದೆ ಒಂದು ವರ್ಷ ವ್ಯರ್ಥವಾಗಿದ್ದಕ್ಕೆ ನನ್ನ ಮಗಳು ಈಗ ‘ಎಲ್‌ಕೆಜಿ ಫೇಲ್‌’ ಆಗಿದ್ದಾಳೆಂದು ತಿಳಿದಿದ್ದೇನೆ. ನಾನು ಓದಿಸುವವನು, ಅವಳು ಓದುವವಳು, ನಾನು ಮಗಳನ್ನು ಓದಿಸಿಕೊಳ್ಳುತ್ತೇನೆ ಎಂದು ಉತ್ತರಿಸಿದರು.

ಹೊಗಳಿಕೆ ಬೇಕಿರಲಿಲ್ಲ: 

ನಮಗೆ ಯಾರ ಹೊಗಳಿಕೆ, ಉಡುಗೊರೆ ಬೇಡ. ನಾವು ಎಲ್ಲರ ಜೊತೆ ಅಣ್ಣ-ತಮ್ಮಂದಿರ ಹಾಗೇ ಇದ್ದೇವೆ. ಕರ್ನಾಟಕದ ಜನ ಯಾರ ಮಾತನ್ನು ನಂಬಬೇಡಿ. ಉಗ್ರ ಸಂಘಟನೆ ಮುಖ್ಯಸ್ಥನ ಹೊಗಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.
ಬಿಕಾಂ ಪರೀಕ್ಷೆ ಬಿಟ್ಟು ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪರೀಕ್ಷೆ ಹಿಂದಿನ ದಿನ ಮಗಳ ಪಾಸ್‌ಪೋರ್ಟ್ ಪರಿಶೀಲನೆಗೆ ಹೋಗಿದ್ದೆವು. ರಂಜಾನ್‌ ತಿಂಗಳಲ್ಲಿ ಉಮ್ರಾ ಮಾಡಲು 3-4 ವರ್ಷಗಳ ಹಿಂದೆ ನಿರ್ಧರಿಸಿದ್ದೆವು. ಇದಕ್ಕಾಗಿ ಮುಸ್ಕಾನ್‌ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದೆವು. ಅದರ ಪರಿಶೀಲನೆಗೆ ಹೋಗಿದ್ದೆವು. ಈಗ ಆಕೆಯ ಪಾಸ್‌ಪೋರ್ಟ್ ಕೂಡ ಬಂದಿದೆ. ದೇವರ ಕೆಲಸಕ್ಕೆ ನಾವು ಉಮ್ರಾಗೆ ತೆರಳಲಿದ್ದೇವೆ ಎಂದರು.