ಲೋಕಾಯುಕ್ತ ಪೊಲೀಸರು ಕಂದಾಯ ಇಲಾಖೆ ಭ್ರಷ್ಟಅಧಿಕಾರಿಗಳ ಮೇಲೆ ದಾಳಿಗೆ ಮೊದಲು ಸೇವಾ ಹಿನ್ನೆಲೆಯ ಕಡತ ಪರಿಶೀಲಿಸುವ ವೇಳೆಯಲ್ಲೇ ಭ್ರಷ್ಟರಿಗೆ ಲೋಕಾಯುಕ್ತ ದಾಳಿ ಬಗ್ಗೆ ಮುನ್ಸೂಚನೆ ರವಾನೆಯಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದಿದ್ದು, ಇದರ ಬೆನ್ನಲ್ಲೇ ಕಂದಾಯ ಇಲಾಖೆಯಲ್ಲಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ.

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು (ಜು.3) : ಲೋಕಾಯುಕ್ತ ಪೊಲೀಸರು ಕಂದಾಯ ಇಲಾಖೆ ಭ್ರಷ್ಟಅಧಿಕಾರಿಗಳ ಮೇಲೆ ದಾಳಿಗೆ ಮೊದಲು ಸೇವಾ ಹಿನ್ನೆಲೆಯ ಕಡತ ಪರಿಶೀಲಿಸುವ ವೇಳೆಯಲ್ಲೇ ಭ್ರಷ್ಟರಿಗೆ ಲೋಕಾಯುಕ್ತ ದಾಳಿ ಬಗ್ಗೆ ಮುನ್ಸೂಚನೆ ರವಾನೆಯಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದಿದ್ದು, ಇದರ ಬೆನ್ನಲ್ಲೇ ಕಂದಾಯ ಇಲಾಖೆಯಲ್ಲಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ.

ಹೌದು. ಕಂದಾಯ ಇಲಾಖೆ(Department of Revenue)ಯಲ್ಲಿನ ಭ್ರಷ್ಟಅಧಿಕಾರಿಗಳ ಮೇಲೆ ದಾಳಿ(Lokayukta raid) ನಡೆಸುವ ಮೊದಲು ಲೋಕಾಯುಕ್ತ ಪೊಲೀಸರು ಇಲಾಖೆಯಲ್ಲಿ ಅವರ ಸೇವಾ ಹಿನ್ನೆಲೆ ದಾಖಲೆ ಕೇಳುತ್ತಾರೆ. ಸಂಬಂಧಪಟ್ಟಅಧಿಕಾರಿ ಎಷ್ಟುವರ್ಷ, ಯಾವ್ಯಾವ ಸ್ಥಳ ಹಾಗೂ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಈ ವೇಳೆ ಅವರು ಪಡೆದಿರುವ ಒಟ್ಟು ವೇತನ ಎಷ್ಟುಎಂಬಿತ್ಯಾದಿ ಮಾಹಿತಿ ಕಲೆ ಹಾಕಿ ಬಳಿಕ ದಾಳಿ ನಡೆಸುತ್ತಾರೆ.

Bengaluru: ಭ್ರಷ್ಟ ಅಧಿಕಾರಿ ಅಜಿತ್‌ ರೈ ಮನೆಯಲ್ಲಿ ಸಿಕ್ಕಿದ್ದೇನು? ನಗ, ನಾಣ್ಯ, ಲಕ್ಸುರಿ ವಸ್ತುಗಳು ನೋಡಿ..

ಈ ರೀತಿ ಪರಿಶೀಲನೆಗೆ ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದು 500 ಕೋಟಿ ರು.ಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿರುವ ತಹಸೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರ ದಾಖಲೆಗಳನ್ನೂ ಲೋಕಾಯುಕ್ತ ಪೊಲೀಸರು ಕೇಳಿದ್ದರು. ಆದರೆ ಕಂದಾಯ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿ ಅಧಿಕಾರಿಗಳು ಪರಸ್ಪರ ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಸರ್ವಿಸ್‌ ರೆಕಾರ್ಡ್‌ (ಸೇವಾ ದಾಖಲೆ) ನೀಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕಾಯುಕ್ತ ಪೊಲೀಸರನ್ನು ಸತಾಯಿಸಿದ್ದಾರೆ. ಜತೆಗೆ ಭ್ರಷ್ಟಅಧಿಕಾರಿಗೂ ಲೋಕಾಯುಕ್ತ ದಾಳಿ ಸಿದ್ಧತೆ ಬಗ್ಗೆ ಮಾಹಿತಿ ರವಾನಿಸಿರುವುದು ಬಹಿರಂಗಗೊಂಡಿದೆ.

ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಬಗ್ಗೆ ಮಾಹಿತಿ ಸೋರಿಕೆ ಮಾಡಿದ್ದರಿಂದ ತರಾತುರಿಯಲ್ಲಿ ನಿಗದಿತ ವೇಳೆಗಿಂತ ಒಂದು ವಾರ ಮೊದಲೇ ಲೋಕಾಯುಕ್ತ ಪೊಲೀಸರು ಅಧಿಕಾರಿಯ ಮೇಲೆ ದಾಳಿ ನಡೆಸಿದರು. ಆದಾಗ್ಯೂ 500 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ. ಸೇವಾ ದಾಖಲೆಗಳು ನಮ್ಮ ಬಳಿ ಇಲ್ಲ ಎಂದು ಈ ರೀತಿ ನುಣುಚಿಕೊಳ್ಳಲು ಕಂದಾಯ ಇಲಾಖೆಯಲ್ಲಿ ನಿರ್ದೇಶನಾಲಯ ಇಲ್ಲದಿರುವುದೇ ಕಾರಣ ಎಂಬುದು ಪತ್ತೆಯಾಗಿದೆ.

ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹೀಗೆ ಎಲ್ಲಾ ಇಲಾಖೆಗಳಲ್ಲೂ ಸಿಬ್ಬಂದಿ ಅಥವಾ ಅಧಿಕಾರಿಗಳ ದಾಖಲೆ ನಿರ್ವಹಣೆಗೆ ಕಾಯಂ ನಿರ್ದೇಶನಾಲಯ ಇರುತ್ತದೆ. ಕಂದಾಯ ಇಲಾಖೆಗೆ ನಿರ್ದೇಶನಾಲಯ ಇಲ್ಲದಿರುವುದರಿಂದಲೇ ಈ ಅವಾಂತರಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಒಂದು ತಿಂಗಳ ಒಳಗಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ:

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯಾ, ಕಂದಾಯ ಇಲಾಖೆಯಲ್ಲಿ ಸೇವಾ ದಾಖಲೆ ನಿರ್ವಹಣೆಗೆ ನಿರ್ದಿಷ್ಟವ್ಯಕ್ತಿಗಳಿಗೆ ಹೊಣೆಗಾರಿಕೆ ಇಲ್ಲ. ಕಂದಾಯ ಇಲಾಖೆಯಲ್ಲಿ ಐಎಎಸ್‌, ಕೆಎಎಸ್‌ನಂತಹ ವರ್ಗಾವಣೆಯಾಗುವ ಅಧಿಕಾರಿಗಳ ದಾಖಲೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಇರುತ್ತದೆ. ಆದರೆ ಗ್ರೂಪ್‌ ಬಿ, ಗ್ರೂಪ್‌ ಸಿ ತಹಸಿಲ್ದಾರ್‌, ಉಪತಹಸಿಲ್ದಾರ್‌, ಕಂದಾಯ ಪರಿವೀಕ್ಷಕರು ಇಂತಹವರ ದಾಖಲೆಗಳು ಒಂದೊಂದು ಬಾರಿ ಒಂದೊದು ಇಲಾಖೆ ಜತೆ ಇರುತ್ತವೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ಕಂಡುಬರುತ್ತಿದೆ. ಹೀಗಾಗಿ ಪ್ರತ್ಯೇಕ ನಿರ್ದೇಶನಾಲಯ ಮಾಡಲು ನಿರ್ಧರಿಸಲಾಗಿದೆ ಎಂದರು.

ಉದ್ದೇಶಪೂರ್ವಕ ವಿಳಂಬ ಸತ್ಯ:

ಲೋಕಾಯುಕ್ತ ಪೊಲೀಸರು ಮಾಹಿತಿ ಕೇಳಿದಾಗ ನೀಡದೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದನ್ನು ಒಪ್ಪುತ್ತೇನೆ. ಅಂತಹ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಂತಹವರನ್ನು ನಿಯಂತ್ರಿಸುವ ಸಲುವಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಸೇರಿದಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಸಚಿವರ ಜತೆ ಚರ್ಚಿಸಿ ಮಾಡುತ್ತೇವೆ ಎಂದು ಕಟಾರಿಯಾ ಹೇಳಿದರು.

ಬಡವರಿಗೆ ಅನ್ನ, ನೀರಿಗೂ ಕಷ್ಟಇರುವಾಗ ಒಬ್ಬ ಅಧಿಕಾರಿ ನೂರಾರು ಕೋಟಿ ಲೂಟಿ ಹೊಡೆಯುತ್ತಾರೆ. ಅವರ ಮೇಲಿನ ದಾಳಿ ತಡೆಯಲು ಕಂದಾಯ ಇಲಾಖೆಯ ಅಧಿಕಾರಿಗಳೂ ಉದ್ದೇಶಪೂರ್ವಕವಾಗಿ ದಾಖಲೆ ನೀಡಲು ವಿಳಂಬ ಮಾಡುತ್ತಾರೆ ಎಂದರೆ ಅದನ್ನು ಸಹಿಸಲು ಸಾಧ್ಯವಿಲ್ಲ. 20 ದಿನದಲ್ಲಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುತ್ತೇವೆ.

- ರಾಜೇಂದ್ರಕುಮಾರ್‌ ಕಟಾರಿಯಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಮಾಹಿತಿ ಸೋರಿಕೆ ಮಾಡಿದವರ ವಿರುದ್ಧ ಕ್ರಮಕ್ಕೆ ಸಿದ್ಧತೆ

ಅಜಿತ್‌ ಕುಮಾರ್‌ ರೈ(Ajit kumar rai) ಮೇಲಿನ ದಾಳಿ ಬಗ್ಗೆ ಮೊದಲೇ ಮಾಹಿತಿ ಸೋರಿಕೆ ಮಾಡಿದ ಕಂದಾಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಲೋಕಾಯುಕ್ತ ಪೊಲೀಸರು ತೀರ್ಮಾನಿಸಿದ್ದಾರೆ. ಅವರ ಮೇಲೂ ವಿಚಾರಣೆ ನಡೆಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಟಾರಿಯಾ, ತಪ್ಪಿತಸ್ಥರ ಬಗ್ಗೆ ಮಾಹಿತಿ ನೀಡಿದರೆ ಅವರನ್ನೂ ಸೇವೆಯಿಂದ ಅಮಾನತು ಮಾಡಿ ಲೋಕಾಯುಕ್ತ ಪೊಲೀಸರ ತನಿಖೆಗೆ ಸಹಕರಿಸಲಾಗುವುದು ಎಂದು ಹೇಳಿದ್ದಾರೆ.