ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ.

ಬೆಂಗಳೂರು : ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ.

‘ನಿರಂತರ’ ಯೋಜನೆಯಡಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಸೇರಿ 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರಿಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ. ಸುಮಾರು 5 ಕೋಟಿ ರು. ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆಎಸ್‌ಡಿಸಿ) ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್‌ ಕೂಡ ಸಿದ್ಧಪಡಿಸಲಾಗುತ್ತಿದೆ. ಇದು ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುತ್ತದೆ. ಪ್ರಸಕ್ತ ವರ್ಷದಿಂದಲೇ ಇ-ಹಾಜರಾತಿ ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.

ಸುಧಾರಣೆಗೆ ಸಹಕಾರಿ:

ಪ್ರತಿನಿತ್ಯ ತ್ವರಿತವಾಗಿ ನಿಖರ ಹಾಜರಾತಿಯಿಂದ ಸಂಬಂಧಿಸಿದ ಶಾಲೆಯ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪ್ರಸ್ತುತ ಕೈಯಿಂದ ಬರೆಯುವ ಹಾಜರಾತಿಯಲ್ಲಿನ ನ್ಯೂನತೆಗಳು, ನಕಲಿ ಹಾಜರಾತಿ ತಪ್ಪಿಸಬಹುದು. ನಿಖರವಾದ ಮಾಹಿತಿ ರಿಯಲ್‌ ಟೈಮ್‌ನಲ್ಲಿ ಲಭ್ಯವಾಗುವುದರಿಂದ ಮಕ್ಕಳ ಹಾಜರಾತಿಯ ಮೇಲ್ವಿಚಾರಣೆ ಸಾಧ್ಯವಾಗಲಿದೆ. ಹಾಜರಾತಿ ಹೆಸರಲ್ಲಿ ಅನಗತ್ಯ ಮತ್ತು ಹೆಚ್ಚುವರಿ ಅನುದಾನ ಹಂಚಿಕೆ ಕೂಡ ಗಣನೀಯವಾಗಿ ತಡೆಗಟ್ಟಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಇ-ಹಾಜರಾತಿ ಕಾರ್ಯ ನಿರ್ವಹಣೆ ಹೇಗೆ?

ಶಾಲೆಯ ಮೊದಲ ತರಗತಿಯಲ್ಲಿ ಹಾಜರಾತಿ ಪುಸ್ತಕ ತೆರೆದು ಹೆಸರು ಕೂಗಿ ಟಿಕ್ ಮಾಡಿಕೊಳ್ಳುವ ಬದಲು, ಶಿಕ್ಷಕರ ಮೊಬೈಲ್‌ಗೆ ಅಳವಡಿಸಲಾಗಿರುವ ಸಾಫ್ಟ್‌ವೇರ್‌ನಲ್ಲಿ ಮಕ್ಕಳ ಫೋಟೋ ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಅದರಲ್ಲಿ ಮಕ್ಕಳ ಹೆಸರು ಮತ್ತು ತರಗತಿ ವಿವರ ಮೊದಲೇ ಫೀಡ್‌ ಮಾಡಲಾಗಿದ್ದು, ಫೋಟೋಕ್ಲಿಕ್ಕಿಸಿದ ಕೂಡಲೇ ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ಹೆಸರು, ಸಮಯ ಸಹಿತ ಹಾಜರಾತಿ ದಾಖಲಾಗುತ್ತದೆ. ಈ ವಿವರ ನೇರವಾಗಿ ಕೇಂದ್ರ ಕಚೇರಿಗೆ ರವಾನೆಯಾಗುವ ಕಾರಣ ಏಕಕಾಲದಲ್ಲಿ ನಿಖರ ಮಾಹಿತಿ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಗೆ ತಲುಪುತ್ತದೆ. ಮಕ್ಕಳು ಬಾರದೇ ಇದ್ದರೂ, ತೋರಿಕೆಗಾಗಿ ಶಿಕ್ಷಕರು ಹಾಕಬಹುದಾದ ಸಂಭವನೀಯ ನಕಲಿ ಹಾಜರಾತಿಗೂ ಕಡಿವಾಣ ಬೀಳಲಿದೆ.

ಎಐ ಹೇಗೆ? ಏಕೆ?

ಶಿಕ್ಷಕರ ಮೊಬೈಲ್‌ನ ಆ್ಯಪ್‌ ಬಳಸಿ ವಿದ್ಯಾರ್ಥಿಗಳ ಫೋಟೋ ಸೆರೆ

ಫೋಟೋ ಮೂಲಕವೇ ವಿದ್ಯಾರ್ಥಿಗಳ ಹಾಜರಾತಿ ಖಚಿತ ವ್ಯವಸ್ಥೆ

ನಕಲಿ ಹಾಜರಾತಿ ತಡೆಗೆ ಅನುಕೂಲ. ಅನುದಾನ ದುರ್ಬಳಕೆ ತಡೆ

52686 ಶಾಲೆಗಳ 52 ಲಕ್ಷ ವಿದ್ಯಾರ್ಥಿಗಳ ಹಾಜರಾತಿಗೆ ಬಳಕೆ