ಅಹಮದಾಬಾದ್ ವಿಮಾನ ದುರಂತದ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂದು ಸಚಿವ ಶರಣಬಸಪ್ಪ ದರ್ಶನಾಪುರ ಒತ್ತಾಯಿಸಿದ್ದಾರೆ.
ಯಾದಗಿರಿ (ಜೂ.13): ಅಹಮದಾಬಾದ್ ವಿಮಾನ ದುರಂತ ಇದು ಮಹಾ ದೊಡ್ಡ ದುರಂತ. ಈ ದುರಂತದ ನೈತಿಕ ಹೊಣೆ ಹೊತ್ತು ದೇಶದ ದೊಡ್ಡ ಪ್ರಧಾನಿ ಎಂದು ಕರೆಯಿಸಿಕೊಳ್ಳುವ ಪ್ರಧಾನಿ ಮೋದಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಒತ್ತಾಯಿಸಿದರು.
ವಿಮಾನ ದುರಂತ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದೊಂದು ದೇಶ ಕಂಡ ಮಹಾ ದುರಂತವಾಗಿದ್ದು, ಈ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿವೆ. ಈ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಇದೆ. ದೇಶದ ದೊಡ್ಡ ಪ್ರಧಾನಿ ಎಂದು ಕರೆಸಿಕೊಳ್ಳುವವರು ರಾಜೀನಾಮೆ ಕೊಡಬೇಕು. ರೈಲು ದುರಂತದ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ರಾಜೀನಾಮೆ ಕೊಟ್ಟಿದ್ದರು. ಆದರೆ ಇಂತಹ ದೊಡ್ಡ ದುರಂತವಾದರೂ ಪ್ರಧಾನಿ ಈವರೆಗೆ ಇನ್ನೂವರೆಗೆ ಹೋಗಿ ಮಾತಾಡಿಸುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಅವರು ಮುಂದುವರೆದು, ನಮ್ಮ ಪಕ್ಷದ ನಾಯಕರು ಈ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುರಂತದಲ್ಲಿ ಯಾರೇ ಸಾವನ್ನಪ್ಪಿದರೂ, ಅವರೆಲ್ಲರ ಜೀವ ಕೂಡ ಮುಖ್ಯ. ಮೃತರ ಕುಟುಂಬಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಎಲ್ಲದಕ್ಕೂ ರಾಜೀನಾಮೆ ಕೇಳಲು ನಾವು ಬಿಜೆಪಿಯವರಂತೆ ಹುಚ್ಚರಲ್ಲ:
ಈ ದುರ್ಘಟನೆ ಆಗಿದ್ದಕ್ಕೆ ರಾಜೀನಾಮೆ ಕೇಳಬೇಕು ಎಂಬುದಿಲ್ಲ. ಎಲ್ಲದಕ್ಕೂ ರಾಜೀನಾಮೆ ಕೇಳಬಾರದು. ಬಿಜೆಪಿಯಂತೆ ನಾವು ಎಲ್ಲದಕ್ಕೂ ರಾಜೀನಾಮೆ ಕೇಳುವ ಹುಚ್ಚರಲ್ಲ ಎನ್ನುವ ಮೂಲಕ ಚಿನ್ನಸ್ವಾಮಿ ಕಾಲ್ತುಳಿತ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಕೇಳಿದ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
