ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ಅಹಿಂದ ಸಂಘಟನೆಯು ರಾಜಕೀಯ ಲಾಭಕ್ಕಾಗಿ ಅಲ್ಲ, ಜನಜಾಗೃತಿಗಾಗಿ ಎಂದರು. ಇದು ಅಹಿಂದ ವರ್ಗದ ಎರಡನೇ ಹಂತದ ಹೋರಾಟವಾಗಿದ್ದು, ತಮ್ಮದೇ ಸರ್ಕಾರದಲ್ಲಿರುವ ಕೆಲವರು ಭರವಸೆ ಈಡೇರಿಸಲು ಬಿಡುತ್ತಿಲ್ಲ ಎಂದು ಹೇಳಿದರು.

ಹುಬ್ಬಳ್ಳಿ: ಅಹಿಂದ ಸಂಘಟನೆಯನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ, ಜನಜಾಗೃತಿಗಾಗಿ ಮಾಡಲಾಗುತ್ತಿದೆ. ಅಹಿಂದ ವರ್ಗ ಸರ್ಕಾರದ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. 

Add Asianetnews Kannada as a Preferred SourcegooglePreferred

ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಹಿಂದ ಹೋರಾಟ ಸಾಧನೆ, ಸಂಕಲ್ಪ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 20 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಈ ನೆನಪನ್ನು ಮುಂದಿಟ್ಟುಕೊಂಡು ಏನೆಲ್ಲ ಬದಲಾವಣೆಯಾಗಿದೆ, ಏನೇನು ಆಗಬೇಕು ಎನ್ನುವುದನ್ನು ಚಿಂತಿಸಬೇಕು. ಇದು ನಾನು ಸಿಎಂ ಆಗಬೇಕು, ಅಧಿಕಾರಿಯಾಗಬೇಕು ಎನ್ನುವ ರಾಜಕೀಯ ಕಾರ್ಯಾಗಾರವಲ್ಲ. ನಮ್ಮ ನ್ಯೂನತೆ, ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಅದಕ್ಕಾಗಿ ಸಲಹೆ-ಸೂಚನೆಗಾಗಿ ಈ ಕಾರ್ಯಾಗಾರ ಆಯೋಜಿಸಿರುವುದಾಗಿ ತಿಳಿಸಿದರು.

ಅಹಿಂದ ವರ್ಗದ ಎರಡನೆಯ ಹಂತದ ಹೋರಾಟ

ಇದು ಒಂದು ರೀತಿಯಲ್ಲಿ ಅಹಿಂದ ವರ್ಗದ ಎರಡನೆಯ ಹಂತದ ಹೋರಾಟ. ಆದರೆ, ಈ ಹೋರಾಟವನ್ನು ಜನಜಾಗೃತಿ ಮೂಲಕ ಮಾಡಲಾಗುತ್ತಿದೆ ಎಂದರು.

ನಮ್ಮ ಸರ್ಕಾರ ಇದ್ದರೂ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಎಂಬ ಮಾತು ಸಹಜವಾಗಿಯೇ ಕೇಳಿ ಬರುತ್ತಿದೆ. ಆದರೆ ನಮ್ಮ ಸರ್ಕಾರದಲ್ಲಿ ಇರುವವರೇ ಕೆಲವರು ಭರವಸೆ ಈಡೇರಿಸಲು ಬಿಟ್ಟಿಲ್ಲ ಎಂದರು. ಆದರೆ ಯಾರು ಭರವಸೆ ಈಡೇರಿಸಲು ಬಿಟ್ಟಿಲ್ಲ ಎಂದು ಮಾತ್ರ ತಿಳಿಸಲಿಲ್ಲ.

ಇದನ್ನೂ ಓದಿ: ಸಚಿವರ ಸಭೆ ಜನರಲ್ ಚೆಕಪ್ ಎಂದ ಸತೀಶ್ ಜಾರಕಿಹೊಳಿ ಸಂಪುಟ ಪುನರ್‌ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿದ್ದೇನು?

ಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಅನ್ಯಾಯ ಆಗಿಲ್ಲ. ಅಲೆಮಾರಿಗಳಿಗೂ ಮೀಸಲಾತಿ ಸಿಕ್ಕಿದ್ದು, ಅವರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆ ಬಿರುಸು? ಎಸ್ಕಾರ್ಟ್‌ ಬಿಟ್ಟು ಡಿನ್ನರ್ ಸಭೆಗೆ ಹಾಜರಾದ ಸಿಎಂ