Bengaluru news: ಒಂದೇ ವರ್ಷದಲ್ಲಿ 11 ಫ್ಲೈಓವರ್‌ಗೆ ಒಪ್ಪಿಗೆ: ಸಿಎಂ
ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ 11 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು (ಫೆ.10) : ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ 11 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಹದೇವಪುರ ವಲಯದ ಸುರಂಜನ್‌ದಾಸ್ ಜಂಕ್ಷನ್ ಬಳಿ ಬಿಬಿಎಂಪಿಯಿಂದ .19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕೆಳಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಪ್ರತಿ ದಿನ 5 ಸಾವಿರಕ್ಕೂ ಅಧಿಕ ಹೊಸ ವಾಹನ ರಸ್ತೆಗಿಳಿಯುತ್ತಿವೆ. 10 ಲಕ್ಷಕ್ಕೂ ಅಧಿಕ ಮಂದಿ ನಗರಕ್ಕೆ ಪ್ರತಿದಿನ ಬಂದು ಹೋಗಲಿದ್ದಾರೆ. ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹಲವಾರು ದೀರ್ಘಾವಧಿ ಮತ್ತು ಅಲ್ಪಾವಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇದೇ ವರ್ಷ 11 ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ನಗರದ ದೊಡ್ಡ ಬದಲಾವಣೆಗೆ ಅಮೃತ ನಗರೋತ್ಥಾನ ಯೋಜನೆಯಡಿ .3 ಸಾವಿರ ಕೋಟಿ ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದರು.
ಸಿಲಿಕಾನ್ ಸಿಟಿಯಲ್ಲಿ ಡೇಂಜರಸ್ ಬೈಕ್ ರೈಡಿಂಗ್: ವಾಹನ ಸವಾರರ ಎದೆಯಲ್ಲಿ ನಡುಕ
ಜತೆಗೆ, ವಾಹನ ದಟ್ಟಣೆ ನಿಯಂತ್ರಿಸಲು 12 ಹೈಡೆನ್ಸಿಟಿ ಕಾರಿಡಾರ್‌ನ ರಸ್ತೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಹೊಸದಾಗಿ ಐದು ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸಿ, ಒಬ್ಬರು ಡಿಸಿಪಿ, ಸಿಬ್ಬಂದಿ, ವಾಹನ ಹಾಗೂ ಎಲ್ಲಾ ಸಲಕರಣೆಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ವಿವರಿಸಿದರು.
ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಬಹಳಷ್ಟುಕಡಿಮೆ ಮಾಡಲಾಗಿದೆ. ಹೊರಗಿನಿಂದ ಬರುವ ವಾಹನಗಳನ್ನು ನಿಯಂತ್ರಿಸಲಾಗಿದೆ. ಅದೇ ರೀತಿ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿ ಪ್ರಾರಂಭಿಸಲಾಗಿದೆ. ಸ್ಯಾಟ್‌ಲೈಟ್ ರಿಂಗ್ ರೋಡ್ ಕಾಮಗಾರಿ ಪ್ರಗತಿಯಲ್ಲಿದೆ. ಪಿ ಆರ್‌ಆರ್ ಬಗ್ಗೆ ಆದಷ್ಟುಬೇಗನೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಸಚಿವ ಮುರುಗೇಶ್ ನಿರಾಣಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಡಾ ಕೆ.ವಿ.ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.
‘ಬೆಂಗಳೂರು ಬ್ರ್ಯಾಂಡ್ ಉಳಿಸಲು ಯೋಜನೆ’
ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಬ್ರ್ಯಾಂಡ್ ಉಳಿಸಲು ಹೆಚ್ಚಿನ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ .7,200 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ .204 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಕೆಆರ್ ಪುರದಿಂದ ಮೇಡಹಳ್ಳಿವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕುರಿತಂತೆ ಘೋಷಿಸಲಾಗುವುದು ಎಂದು ಹೇಳಿದರು.
ಟೇಬಲ್ ಕೆಳಸೇತುವೆ ವಿವರ
- ಮಾರತಹಳ್ಳಿ, ವೈಟ್‌ಫೀಲ್ಡ್, ವರ್ತೂರು ಸಂಪರ್ಕಿಸಲು ಅನುಕೂಲ
- ಕೆಳಸೇತುವೆ ಉದ್ದ: 267.26 ಮೀ.
- ದ್ವಿಮುಖ ಸಂಚಾರದ 4 ಪಥ
- ₹19 ಕೋಟಿ ವೆಚ್ಚದಲ್ಲಿ ನಿರ್ಮಾಣ
- 2018ರ ಅಕ್ಟೋಬರ್ 20ರಂದು ಕಾಮಗಾರಿ ಆರಂಭ