‘ಪ್ರವರ್ಗ-3ಎ’ನಲ್ಲಿ ಕೇವಲ ಶೇಕಡ 4ರಷ್ಟುಮೀಸಲಾತಿ ಪಡೆಯುತ್ತಿರುವ ಒಕ್ಕಲಿಗ ಹಾಗೂ ಅದರ ಒಳಪಂಗಡ ಜಾತಿಗಳಿಗೆ ಹೆಚ್ಚಿನ ಮೀಸಲಾತಿ ನೀಡಬೇಕು. ಶೇ.4ರಿಂದ ಶೇ.10ಕ್ಕೆ ಏರಿಸದಿದ್ದರೆ ಹೋರಾಟ ಮಾಡಲಾಗುವುದೆಂದು ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.
ಬೆಂಗಳೂರು (ಅ,10): ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 10ಕ್ಕೆ ಹೆಚ್ಚಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸಂಘದ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎನ್.ಬಾಲಕೃಷ್ಣ, ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಭಾನುವಾರ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಒಕ್ಕಲಿಗರ ಪಾಲು ಶೇ.16 ರಷ್ಟಿದೆ. ಹೀಗಾಗಿ ಶೇ.4ರ ಮೀಸಲಾತಿ ಕಡಿಮೆಯಾಗಿದೆ. ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ 3ಎ ಅಡಿಯಲ್ಲಿ ಸಮುದಾಯ ಸೇರಿಸಲಾಗಿದೆ. 3ಎ ನಲ್ಲಿ ಒಕ್ಕಲಿಗರ ಉಪ ಪಂಗಡಗಳು ಹಾಗೂ ಇತರೆ ಜಾತಿಗಳು ಸೇರಿದ್ದು, ಮೀಸಲಾತಿ ಹೆಚ್ಚಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಪರಿಶಿಷ್ಟಜಾತಿಯ ಮೀಸಲಾತಿಯನ್ನು ಶೇ.15ರಿಂದ 17 ಕ್ಕೆ ಮತ್ತು ಪಂಗಡದವರ ಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ 3ಎ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.10ಕ್ಕೆ ಹೆಚ್ಚಿಸುವ ಮೂಲಕ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ. ಬೇರೆ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಲು ನಮ್ಮ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮ ಸಮುದಾಯ ಅನಾದಿ ಕಾಲದಿಂದಲೂ ಕೃಷಿಯನ್ನೇ ನಂಬಿ ಬದುಕುತ್ತಿದೆ. ಬೇಸಾಯದ ವೆಚ್ಚ ದಿನದಿಂದ ದಿನಕ್ಕೆ ದುಬಾರಿಯಾಗಿದ್ದು ಪ್ರವಾಹ, ಬರ, ಕೀಟ, ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿದೆ. ಸಮುದಾಯದ ಶೇ.70ರಷ್ಟುಮಂದಿ ಆರ್ಥಿಕವಾಗಿ ಹಿಂದುಳಿದಿದ್ದು, ಸಾಕಷ್ಟುಬಡವರಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೀಸಲು ಹೆಚ್ಚಳದಿಂದ ಯಾರಿಗೂ ಅನ್ಯಾಯ ಆಗಲ್ಲ: ಸಿಎಂ ಬೊಮ್ಮಾಯಿ
ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿ: ಕುಮಾರ್
ಪೀಣ್ಯ ದಾಸರಹಳ್ಳಿ: ಕೃಷಿ ಮತ್ತು ಹೈನುಗಾರಿಕೆ ಸೇರಿದಂತೆ ಕೃಷಿ ಉಪ ಕಸುಬುಗಳನ್ನೇ ನಂಬಿ ಬದುಕುತ್ತಿರುವ ಒಕ್ಕಲಿಗ ಸಮುದಾಯದಲ್ಲಿ ಬಹುತೇಕರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ‘ಪ್ರವರ್ಗ-3ಎ’ನಲ್ಲಿ ಕೇವಲ ಶೇಕಡ 4ರಷ್ಟುಮೀಸಲಾತಿ ಪಡೆಯುತ್ತಿರುವ ಒಕ್ಕಲಿಗ ಹಾಗೂ ಅದರ ಒಳಪಂಗಡ ಜಾತಿಗಳಿಗೆ ಹೆಚ್ಚಿನ ಮೀಸಲಾತಿ ನೀಡಬೇಕೆಂದು ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ.ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೀಸಲು, ಒಳಮೀಸಲು ಬಗ್ಗೆ ಶೀಘ್ರ ನಿರ್ಧರಿಸಿ: ಎಚ್‌ಡಿಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಒಕ್ಕಲಿಗರ ಕ್ರಿಯಾ ಸಮಿತಿಯು ಸಂವಿಧಾನ ತಿದ್ದುಪಡಿ ಮೂಲಕ ಶೆಡ್ಯೂಲ್-9ರಡಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಿಸಿರುವಂತೆ ಆರ್ಥಿಕವಾಗಿ ದುರ್ಬಲರೇ ಹೆಚ್ಚಿರುವ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿಯನ್ನು ಹೆಚ್ಚಿಸಬೇಕು. ಹಾಗೆಯೇ ನಗರ ಹಾಗೂ ಪಟ್ಟಣ ಪ್ರದೇಶಗಳ ಒಕ್ಕಲಿಗ ಸಮುದಾಯದವರಿಗೆ ಕೇಂದ್ರ ಸರ್ಕಾರ ರದ್ದುಗೊಳಿಸಿರುವ ಮೀಸಲಾತಿಯನ್ನು ಮತ್ತೆ ಮುಂದುವರೆಸಬೇಕೆಂದು ಶಿಫಾರಸು ಮಾಡಬೇಕೆಂದು ಕೋರಿದ್ದಾರೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
