ಮೀಸಲು ಹೆಚ್ಚಳದಿಂದ ಯಾರಿಗೂ ಅನ್ಯಾಯ ಆಗಲ್ಲ: ಸಿಎಂ ಬೊಮ್ಮಾಯಿ
ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡುವುದೇ ನಿಜವಾದ ನ್ಯಾಯ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು (ಅ.08): ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡುವುದೇ ನಿಜವಾದ ನ್ಯಾಯ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶುಕ್ರವಾರ ಸರ್ವಪಕ್ಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.50ರಷ್ಟು ಮೀಸಲಾತಿ ಇದ್ದು, ಎಸ್‌ಸಿ/ಎಸ್‌ಟಿ, ಪ್ರವರ್ಗ 1,2ಎ, 3ಬಿ ಯಾರಿಗೂ ಮೀಸಲಾತಿ ಪ್ರಮಾಣ ಕಡಿಮೆಯಾಗುವುದಿಲ್ಲ. ಇದು ಶೇ.50ಕ್ಕಿಂತಲೂ ಹೆಚ್ಚಿರುವವರಿಗೆ ನೀಡುವ ಮೀಸಲಾತಿ. ನ್ಯಾ.ನಾಗಮೋಹನ್ ದಾಸ್ ಸಮಿತಿ ಹೇಳಿದ್ದನ್ನೇ ನಾವು ಮಾಡುತ್ತಿದ್ದೇವೆ ಎಂದರು.
ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಶೇ.10ರಷ್ಟು ಮೀಸಲಾತಿಯನ್ನು ಕಾನೂನಿನ ಪ್ರಕಾರ ಮೀಸಲಾತಿ ಇಲ್ಲದಿರುವ, ಆರ್ಥಿಕ ಹಿಂದುಳಿದ ವರ್ಗಕ್ಕೆ ನೀಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಆದರೆ, ಅದು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಅದಾದ ಕೂಡಲೇ ಆದೇಶದನ್ವಯ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು. ಹಲವು ವರ್ಷಗಳ ನ್ಯಾಯಸಮ್ಮತವಾದ ಬೇಡಿಕೆ, ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯಂತೆ ಪರಿಶಿಷ್ಟಜಾತಿಗೆ ಶೇ.15ರಷ್ಟಿದ್ದ ಮೀಸಲಾತಿಯನ್ನು ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿಯನ್ನು ಹೆಚ್ಚಿಸಲು ಒಮ್ಮತ ತೀರ್ಮಾನ ಮಾಡಲಾಗಿದೆ.
ಕನ್ನಡ ರಾಜ್ಯೋತ್ಸವದಂದು ಯಶಸ್ವಿನಿ ಯೋಜನೆ ಮರು ಜಾರಿ: ಸಿಎಂ ಬೊಮ್ಮಾಯಿ
ಸರ್ವಪಕ್ಷಗಳ ಸಭೆಗೂ ಮುನ್ನ ಬಿಜೆಪಿ ಪಕ್ಷದಲ್ಲಿಯೂ ಈ ಬಗ್ಗೆ ಎಲ್ಲಾ ನಾಯಕರೊಂದಿಗೆ ಚರ್ಚಿಸಲಾಗಿದೆ. ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಚರ್ಚಿಸಿ ಸಾಮಾಜಿಕ ನ್ಯಾಯದಲ್ಲಿ ನಮ್ಮ ಬದ್ಧತೆಯನ್ನು ಮುಂದುವರಿಸಬೇಕು ಮತ್ತು ಎಸ್‌ಸಿ, ಎಸ್‌ಟಿಗೆ ಹೆಚ್ಚಿನ ಮೀಸಲಾತಿ ನೀಡಲು ಕ್ರಮ ಕೈಗೊಂಡು ಕಾನೂನಾತ್ಮಕ ಕ್ರಮಗಳನ್ನೂ ತೆಗೆದುಕೊಳ್ಳಲು ನಿರ್ಣಯ ಮಾಡಲಾಯಿತು. ಸರ್ವಪಕ್ಷದ ಸಭೆಯಲ್ಲಿ ತೀರ್ಮಾನಿಸಿದಂತೆ ಮೀಸಲಾತಿ ಹೆಚ್ಚಳದ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಶನಿವಾರ ಸಚಿವ ಸಂಪುಟ ಸಭೆ ನಡೆಸಿ ನ್ಯಾ. ನಾಗಮೋಹನ್ ದಾಸ್ ಸಮಿತಿಯ ಎಲ್ಲಾ ಶಿಫಾರಸ್ಸುಗಳನ್ನು ಚರ್ಚಿಸಿ ಅಂತಿಮವಾದ ಸರ್ಕಾರದ ಕಾರ್ಯಾದೇಶವನ್ನು ಹೊರಡಿಸಲಾಗುವುದು ಎಂದು ವಿವರಿಸಿದರು.
ಮೀಸಲು ಹೆಚ್ಚಳಕ್ಕೆ ಸಂವಿಧಾನದ ಅನುಸೂಚಿ 9ರಲ್ಲಿ ವಿನಾಯಿತಿ: ತಮಿಳುನಾಡು ಸರ್ಕಾರ 1994ರಲ್ಲಿ ಮೀಸಲಾತಿ ಹೆಚ್ಚಳ ಮಾಡಿ ಅದು ಸಂವಿಧಾನದ ಅನುಸೂಚಿ 9ರಲ್ಲಿ ಬಂದ ನಂತರ 2007ರಲ್ಲಿ ಮತ್ತೊಂದು ತೀರ್ಪು ಬಂದಿದೆ. ಅನುಸೂಚಿ 9 ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದರೆ ಅದಕ್ಕೆ ನ್ಯಾಯಾಂಗದ ವಿನಾಯಿತಿ ನೀಡಬೇಕು ಎಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 1950ರಲ್ಲಿ ಭೂ ಸುಧಾರಣಾ ಕಾಯ್ದೆ ಬಂದಾಗ ಸುಪ್ರೀಂಕೋರ್ಟ್ ಕಾಯ್ದೆಯನ್ನು ರದ್ದು ಮಾಡಿತು.
ರಾಹುಲ್ ಗಾಂಧಿ ಹೇಳಿದ ಆನೆ ಮರಿ ರಕ್ಷಣೆಗೆ ಸಿಎಂ ಬೊಮ್ಮಾಯಿ ಸೂಚನೆ
ಆ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಮತ್ತು ರೈತರಿಗೆ ನ್ಯಾಯ ಕೊಡಿಸುವ ಸಲುವಾಗಿ ಮೂಲಭೂತ ಹಕ್ಕು ಎಂದು ಪರಿಗಣಿಸಿ ಅನುಸೂಚಿ 9 ಅನ್ನು ತರಲಾಯಿತು. ಕೇವಲ ಮೀಸಲಾತಿಗೆ ಮಾತ್ರವಲ್ಲ, ಹಲವಾರು ವಿಚಾರಗಳು ಇದರಲ್ಲಿ ಬರುತ್ತದೆ. 1994ರಿಂದ ಈವರೆಗೆ ವಿನಾಯಿತಿ ದೊರೆತಿದೆ. ಈಗಲೂ ಸಹ ಅದರ ಬಗ್ಗೆ ತೀರ್ಪು ಹೊರಬಂದಿಲ್ಲ ಎಂದು ಹೇಳಿದರು. ಇವುಗಳನ್ನು ಸಂಪುರ್ಣವಾಗಿ ಅಧ್ಯಯನ ನಡೆಸಿ ಈ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಸಾಮರಸ್ಯ ಮೂಡಬೇಕು ಎಂಬ ಕಾರಣದಿಂದ ಮತ್ತು ಕಾನೂನು ಮತ್ತು ಸಂವಿಧಾನಾತ್ಮಕವಾದ ವಿಚಾರ ಇದಾಗಿರುವುದರಿಂದ ಸರ್ವ ಪಕ್ಷ ಸಭೆಯಲ್ಲಿ ಚರ್ಚೆ ಮಾಡಿ, ಸರ್ವಸಮ್ಮತದಿಂದ ತೀರ್ಮಾನ ಮಾಡಲಾಗಿದೆ ಎಂದರು.