PSI Scam: ನಾನು ತಪ್ಪು ಮಾಡಿಲ್ಲವೆಂದೇ ಅಮೃತ್‌ ಪಾಲ್‌ ವಾದ, ಸ್ನೇಹಿತನ ಮನೆಗೆ ಸಿಐಡಿ ದಾಳಿ

ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಿರುವ ಎಡಿಜಿಪಿ ಅಮೃತ್‌ ಪಾಲ್‌, ತಾವು ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ  ಎಂದು ಹೇಳಲಾಗಿದೆ. ಇನ್ನು ಪಾಲ್‌ ಸ್ನೇಹಿತನ ಮನೆ ಮೇಲೆ ಸಿಐಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ADGP Amrit Paul not cooperating with probe in  PSI recruitment scam gow

ಬೆಂಗಳೂರು (ಜು.8): ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಬಂಧಿತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್‌ ಪಾಲ್‌ ಅವರನ್ನು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅಧಿಕಾರಿಗಳು ಗುರುವಾರ ಸಹ ವಿಚಾರಣೆ ನಡೆಸಿದ್ದಾರೆ.

ಸಿಐಡಿ ಕೇಂದ್ರ ಕಚೇರಿಯಲ್ಲಿ ಎಡಿಜಿಪಿ ಅವರನ್ನು ಅಧಿಕಾರಿಗಳು ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ. ಆದರೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಿರುವ ಎಡಿಜಿಪಿ, ತಾವು ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ ಎನ್ನಲಾಗಿದೆ.

PSI Recruitment Scam; ಎಫ್‌ಎಸ್‌ಎಲ್‌ ವರದಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ 

ಬಂಧಿತ ಐಪಿಎಸ್‌ ಅಮೃತ್‌ಪಾಲ್‌ ಸ್ನೇಹಿತನ ಮನೆಗೆ ಸಿಐಡಿ ದಾಳಿ
ರಾಜ್ಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿರುವ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಐಪಿಎಸ್‌ ಅಧಿಕಾರಿ ಅಮೃತ್‌ಪಾಲ್‌ ಸ್ನೇಹಿತನ ಮನೆ ಮೇಲೆ ಸಿಐಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ವಿಚಾರಣೆ ನಡೆಸಿದರು.

ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಹೊಸಹಳ್ಳಿಯಲ್ಲಿರುವ ಜಗದೀಶ್‌ ಎಂಬುವರ ಮನೆ ಮೇಲೆ ಸಿಐಡಿ ಡಿವೈಎಸ್ಪಿ ವಿರೇಂದ್ರ ಕುಮಾರ್‌ ನೇತೃತ್ವದ ತಂಡ ಬೆಳಗ್ಗೆ ಜಗದೀಶ್‌ ಮನೆ ಶೋಧ ನಡೆಸಿ ತೆರಳಿದೆ.

ಬುಧವಾರವಷ್ಟೇ ಸಿಐಡಿ ಅಧಿಕಾರಿಗಳ ತಂಡ ಜಿಲ್ಲೆಯ ಚಿಕ್ಕಬಳ್ಳಾಪುರ-ಶಿಡ್ಲಘಟ್ಟರಸ್ತೆಯ ಹೊಸವುಡ್ಯ ಬಳಿ ಇರುವ ಐಪಿಎಸ್‌ ಅಧಿಕಾರಿ ಅಮೃತ್‌ಪಾಲ್‌ ಒಡೆತನಕ್ಕೆ ಸೇರಿದ ಫಾರ್ಮ್ ಹೌಸ್‌ ಮೇಲೆ ದಾಳಿ ನಡೆಸಿ ಸಾಕಷ್ಟುತಪಾಸಣೆ ನಡೆಸಿದ್ದರು. 2015-16ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿ ಸೇರುವ ಕೇಂದ್ರ ವಲಯದ ಐಜಿಪಿಯಾಗಿ ಅಮೃತ್‌ ಪಾಲ್‌ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲೇ ಹೊಸವುಡ್ಯ ಬಳಿ ಅವರು ಜಗದೀಶ್‌ ಮಧ್ಯಸ್ಥಿಕೆಯಲ್ಲಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ 4 ಎಕರೆಗೂ ಅಧಿಕ ಜಮೀನು ಖರೀದಿಸಿ ಫಾರ್ಮ್ ಹೌಸ್‌ ನಿರ್ಮಿಸಿದ್ದಾರೆ.

ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಪಿಎಸ್‌ಐ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಗೆ ‘ಕೈ’ ಹೋರಾಟ

ವರದಿ ಸಲ್ಲಿಕೆಗೆ ಕೋರ್ಟ್ ಸೂಚನೆ: ಪೊಲೀಸ್‌ ಸಬ್‌ ಇನ್ಸ್‌ ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದ ಅಕ್ರಮ ವಿಧಾನಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ತಿದ್ದುಪಡಿ ಮಾಡಿರುವ ಒಎಂಆರ್‌ ಶೀಟ್‌ಗಳ ಪ್ರತಿ ಸಲ್ಲಿಸುವಂತೆ ಸಿಐಡಿಗೆ ಗುರುವಾರ ಹೈಕೋರ್ಚ್‌ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ಬಂಧನಕ್ಕೆ ಗುರಿಯಾಗಿರುವ ಸಿ.ಎನ್‌.ಶಶಿಧರ್‌ ಮತ್ತು ಆರ್‌. ಶರತ್‌ ಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ಪೀಠ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಸಿಐಡಿ ಪರ ಸರ್ಕಾರಿ ವಕೀಲರು ಹಾಜರಾಗಿ, ಪ್ರಕರಣದ ಸಂಬಂಧ ಎಡಿಜಿಪಿ ಅಮೃತ್‌ ಪಾಲ್‌ ಬಂಧನ ಸೇರಿದಂತೆ ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ಹಾಗೆಯೇ, ಪ್ರಕರಣದಲ್ಲಿ ತಿದ್ದುಪಡಿ ಮಾಡಿರುವ 32 ಒಎಂಆರ್‌ ಶೀಟ್‌ಗಳನ್ನು ಸಲ್ಲಿಸಿ, ಅವುಗಳನ್ನು ನ್ಯಾಯಾಲಯ ಪರಿಶೀಲಿಸಬೇಕೆಂದು ಕೋರಿದರು.

ವರದಿ ದಾಖಲಿಸಿಕೊಂಡ ನ್ಯಾಯಪೀಠ, ತಿದ್ದುಪಡಿ ಮಾಡಲಾದ ಒಎಂಆರ್‌ ಶೀಟ್‌ಗಳ (OMR Sheet) ಮೂಲ ಪ್ರತಿ ಸಲ್ಲಿಸಲಾಗಿದೆ. ಆದರೆ, ಅವುಗಳು ಬೇಡ, ತನಿಖಾಧಿಕಾರಿಯ ಬಳಿಯೇ ಇರಲಿ ಎಂದು ನುಡಿಯಿತು.

ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ (Forensic Science Laboratory - ಆರ್‌ಎಫ್‌ಎಸ್‌ಎಲ್‌) ಸಲ್ಲಿಸಬೇಕು. ಅವುಗಳ ಪ್ರಕಾರ ಏನೇನು ತಿದ್ದುಪಡಿ ಮಾಡಲಾಗಿದೆ? ಎಲ್ಲೆಲ್ಲಿ ಒಎಂಆರ್‌ ಪುಟಗಳನ್ನು ಬದಲಾವಣೆ ಮಾಡಲಾಗಿದೆ? ಬ್ಲೂಟೂತ್‌ ಸೇರಿದಂತೆ ಯಾವ್ಯಾವ ಅಕ್ರಮ ವಿಧಾನಗಳನ್ನು ಬಳಸಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವಿವರ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿತು.

Latest Videos
Follow Us:
Download App:
  • android
  • ios