ಪಿಎಸ್‌ಐ ಅಕ್ರಮ ಕೇಸ್: ಎಡಿಜಿಪಿ ಪೌಲ್‌ 5 ಗಂಟೆ ವಿಚಾರಣೆ

*  ಮೊನ್ನೆ, ನಿನ್ನೆ, ಇಂದೂ ವಿಚಾರಣೆಗೆ ಬುಲಾವ್‌
*  ಐಪಿಎಸ್‌ ದರ್ಜೆ ಅಧಿಕಾರಿಗೂ ತಟ್ಟಿದ ತನಿಖೆ ಬಿಸಿ
*  ನೇಮಕಾತಿ ವಿಭಾಗದ ಹಿಂದಿನ ಮುಖ್ಯಸ್ಥ ಅಮೃತ್‌ ಪೌಲ್‌ಗೆ ನೋಟಿಸ್‌ ನೀಡಿ ವಿಚಾರಣೆ
 

ADGP Amrit Paul Inquiry on PSI Recruitment Scam Case in Karnataka grg

ಬೆಂಗಳೂರು(ಮೇ.27): ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಇದೀಗ ನೇಮಕಾತಿ ವಿಭಾಗದ ಹಿಂದಿನ ಮುಖ್ಯಸ್ಥ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದೆ.

ಬುಧವಾರ ಸತತ 4 ತಾಸು ಅಮೃತ್‌ ಪೌಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಐಡಿ ಗುರುವಾರವೂ ಸತತ ಐದು ಗಂಟೆಗಳ ಕಾಲ ವಿಚಾರಣೆ ಮಾಡಿದೆ. ಶುಕ್ರವಾರ ಕೂಡ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ತನಿಖಾಧಿಕಾರಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

PSI Recruitment Scam: ಪಿಎಸ್‌ಐ ಪರೀಕ್ಷೆ ಅಕ್ರಮ: ಎಡಿಜಿಪಿ ಅಮೃತ್‌ ಎತ್ತಂಗಡಿ

ಇತ್ತೀಚೆಗಷ್ಟೇ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ಅವರನ್ನು ಬಂಧಿಸಿ ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಇದೀಗ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ಕಳೆದ ಎರಡು ದಿನಗಳಿಂದ ಅರಮನೆ ರಸ್ತೆಯ ಕಾರ್ಲಟನ್‌ ಹೌಸ್‌ನಲ್ಲಿ ಇರುವ ಸಿಐಡಿ ಕಚೇರಿಯಲ್ಲಿ ಐಪಿಎಸ್‌ ದರ್ಜೆಯ ತನಿಖಾಧಿಕಾರಿ ವಿಚಾರಣೆ ಮಾಡುತ್ತಿದ್ದಾರೆ.

ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಭ್ಯರ್ಥಿಗಳಿಂದ ಆರಂಭವಾದ ಬಂಧನ ಪ್ರಕ್ರಿಯೆ ಏಜೆಂಟ್‌, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ನೇಮಕಾತಿ ವಿಭಾಗದ ಕೆಳ ಹಂತದ ಸಿಬ್ಬಂದಿ, ಅಧಿಕಾರಿಗಳವರೆಗೆ ಬಂದು ನಿಂತಿದೆ. ಇದೀಗ ಅಕ್ರಮದ ಸುಳಿ ಹಿರಿಯ ಅಧಿಕಾರಿಗಳ ಕೊರಳಿಗೂ ಸುತ್ತಿಕೊಂಡಿದೆ.

ಅಮೃತ್‌ ಪೌಲ್‌ ವಿಚಾರಣೆ ಏಕೆ?:

ಪ್ರಸ್ತುತ ಆಂತರಿಕ ಭದ್ರತೆ ವಿಭಾಗದ ಎಡಿಜಿಪಿಯಾಗಿರುವ ಅಮೃತ್‌ ಪೌಲ್‌ ಈ ಹಿಂದೆ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ಇವರ ನೇತೃತ್ವದಲ್ಲಿ 2021ರ ಅಕ್ಟೋಬರ್‌ನಲ್ಲಿ 92 ಕೇಂದ್ರಗಳಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿತ್ತು. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಗೊಂಡ ಬಳಿಕ ಪರೀಕ್ಷೆಯಲ್ಲಿ ಅಕ್ರಮದ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ಕೆಲ ಸಾಕ್ಷ್ಯಗಳು ಲಭ್ಯವಾಗಿದ್ದವು. ಹೀಗಾಗಿ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಸಿಐಡಿ ತನಿಖೆ ವೇಳೆ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು, ಏಜೆಂಟರು, ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳು ಸಿಕ್ಕಿಬಿದ್ದಿದ್ದರು. ನೇಮಕಾತಿ ವಿಭಾಗದ ಅಧಿಕಾರಿಗಳು ಅಕ್ರಮದಲ್ಲಿ ಕೈಜೋಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆ ವಿಭಾಗದ ಹಿಂದಿನ ಮುಖ್ಯಸ್ಥರಾದ ಅಮೃತ್‌ ಪೌಲ್‌ ಅವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಒಳಪಡಿಸಲಾಗಿದೆ.

ಸ್ಪಷ್ಟ ಮಾಹಿತಿ ನೀಡುತ್ತಿಲ್ಲ:

ಸಿಐಡಿ ವಿಚಾರಣೆ ವೇಳೆ ಅಮೃತ್‌ ಪೌಲ್‌ ಅವರು ಅಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸ್ಪಷ್ಟಮಾಹಿತಿ ನೀಡಿಲ್ಲ. ಈ ಅಕ್ರಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದ್ದೇನೆ. ಕೆಳಹಂತದ ಸಿಬ್ಬಂದಿ ಹಾಗೂ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: 2ನೇ ಹಂತದ ತನಿಖೆ ಆರಂಭ

ಬೆಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ಪೊಲೀಸ್‌ ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ನಲ್ಲಿ ಇರಿಸಲಾಗಿತ್ತು. ಇದರ ಉಸ್ತುವಾರಿ ವಹಿಸಿದ್ದ ಪೊಲೀಸರನ್ನೇ ಸಿಐಡಿ ಬಂಧಿಸಿದೆ. ಇದರ ಬೆನ್ನಲ್ಲೇ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್‌ ಪೌಲ್‌ ಅವರನ್ನು ವಿಚಾರಣೆಗೆ ಒಳಪಡಿಸಿರುವುದು ಮಹತ್ವ ಪಡೆದುಕೊಂಡಿದೆ.

ಪ್ರಬಲ ಸಾಕ್ಷ್ಯ ಸಿಕ್ಕರೆ ಬಂಧನ

ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮದಿಂದ ರಾಜ್ಯ ಸರ್ಕಾರ ತೀವ್ರ ಮುಜುಗರ ಅನುಭವಿಸಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ರಾಜ್ಯ ಸರ್ಕಾರವನ್ನು ಟೀಕಿಸುತ್ತಿವೆ. ಅದಕ್ಕೂ ಮಿಗಿಲಾಗಿ ರಾಜ್ಯ ಪೊಲೀಸ್‌ ಇಲಾಖೆ ಘನತೆಗೆ ಈ ಪ್ರಕರಣ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಬಲ ಸಾಕ್ಷ್ಯಗಳು ಸಿಕ್ಕರೆ ನೇಮಕಾತಿ ವಿಭಾಗದ ಹಿಂದಿನ ಮುಖ್ಯಸ್ಥ ಅಮೃತ್‌ ಪೌಲ್‌ ಅವರನ್ನು ಸಿಐಡಿ ಬಂಧಿಸಬಹುದು ಎನ್ನಲಾಗುತ್ತಿದೆ.

ವಿಚಾರಣೆ ಏಕೆ?

- ಪಿಎಸ್‌ಐಗಳ ನೇಮಕ ಪ್ರಕ್ರಿಯೆ ವೇಳೆ ಪೊಲೀಸ್‌ ನೇಮಕಾತಿ ವಿಭಾಗಕ್ಕೆ ಅಮೃತ್‌ ಪೌಲ್‌ ಮುಖ್ಯಸ್ಥ
- ಪೌಲ್‌ ನೇತೃತ್ವದಲ್ಲಿ 2021ರ ಅಕ್ಟೋಬರ್‌ನಲ್ಲಿ 92 ಕೇಂದ್ರಗಳಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ
- ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟ ಬಳಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಬೆಳಕಿಗೆ ಸಿಐಡಿ ತನಿಖೆಗೆ ಆದೇಶ
- ತನಿಖೆಯಲ್ಲಿ ಪೊಲೀಸ್‌ ನೇಮಕಾತಿ ವಿಭಾಗದ ಅಧಿಕಾರಿಗಳೂ ಅಕ್ರಮದಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ
- ಹೀಗಾಗಿ ನೇಮಕಾತಿ ವಿಭಾಗದ ಹಿಂದಿನ ಮುಖ್ಯಸ್ಥ ಅಮೃತ್‌ ಪೌಲ್‌ಗೆ ನೋಟಿಸ್‌ ನೀಡಿ ವಿಚಾರಣೆ
 

Latest Videos
Follow Us:
Download App:
  • android
  • ios