ಚಂದನವನದ ನಟಿ ರನ್ಯಾ ರಾವ್ ವಿರುದ್ಧದ 14 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿದೆ. ಐಟಿ ಇಲಾಖೆ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಅನುಮತಿ ನೀಡಿದ್ದು, ಜೂನ್ 11 ರಿಂದ 13ರ ತನಕ ವಿಚಾರಣೆ ನಡೆಯಲಿದೆ.
ಬೆಂಗಳೂರು (ಜೂ. 11): ಚಂದನವನದ ನಟಿ ರನ್ಯಾ ರಾವ್ ವಿರುದ್ಧದ 14 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆಕೆಯ ವಿಚಾರಣೆಗೆ ಆದೇಶ ನೀಡಿದೆ. ಐಟಿ (ಆದಾಯ ತೆರಿಗೆ) ಇಲಾಖೆ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಅನುಮತಿ ನೀಡಿದ್ದು, ಜೂನ್ 11 ರಿಂದ 13ರ ತನಕ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿಚಾರಣೆ ನಡೆಸಲು ಕಾನೂನು ಹಸಿರು ನಿಶಾನೆ ತೋರಿದೆ.
DRI ಬಲೆಗೆ ಸಿಕ್ಕಿದ ನಟಿ:
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಏರ್‌ಪೋರ್ಟ್‌ನಲ್ಲಿ ಡಿಆರ್‌ಐ (DRI) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಆಕೆಯ ಬಳಿ ಸುಮಾರು 14 ಕೆಜಿ ತೂಕದ, ಸುಮಾರು ₹12 ಕೋಟಿ ಮೌಲ್ಯದ ಬಂಗಾರವನ್ನು ಅಕ್ರಮವಾಗಿ ಸಾಗಿಸುತ್ತಿದ್ದುದಾಗಿ ಆರೋಪಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿಸುತ್ತಿರುವ ಐಟಿ ಇಲಾಖೆ, ಬಂಗಾರದ ಖರೀದಿಗೆ ಬಳಸಲಾದ ಹಣದ ಮೂಲಗಳ ಕುರಿತು ನಟಿಯನ್ನ ಪ್ರಶ್ನಿಸಲು ಕೋರ್ಟ್ ಅನುಮತಿ ಪಡೆದಿದೆ.
ಜೈಲಿನಲ್ಲೇ ನಡೆಯಲಿರುವ ವಿಚಾರಣೆ:
ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರನ್ಯಾ ರಾವ್ ಅವರನ್ನು ಕಾರಾಗೃಹದಲ್ಲಿಯೇ ವಿಚಾರಣೆ ನಡೆಸಲು ಐಟಿ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳಾದ ಮಹಿಳಾ ಇನ್‌ಸ್ಪೆಕ್ಟರ್ ಶ್ವೇತಾ ಮತ್ತು ಇನ್‌ಸ್ಪೆಕ್ಟರ್ ರವಿಪಾಲ್ ಅವರ ನೇತೃತ್ವದಲ್ಲಿ ಈ ವಿಚಾರಣೆಯಾಗಲಿದೆ. ಅಲ್ಲದೆ, ವಿಚಾರಣೆಯ ಎಲ್ಲಾ ಸಂಭಾಷಣೆ ಮತ್ತು ಪ್ರಕ್ರಿಯೆಗಳನ್ನು ವಿಡಿಯೋ ರೆಕಾರ್ಡ್ ಮಾಡಬೇಕೆಂಬುದಾಗಿ ಕೋರ್ಟ್ ಸೂಚನೆ ನೀಡಿದೆ.
ಅಕ್ರಮ ಹಣದ ಮಾಹಿತಿ ಹೊರ ಬೀಳುವ ಭೀತಿ: ಈ ವಿಚಾರಣೆಯ ಮೂಲಕ ರನ್ಯಾ ರಾವ್ ಹೇಗೆ ಬಂಗಾರ ಖರೀದಿಗೆ ಹಣ ಸಂಗ್ರಹ ಮತ್ತು ಪಾವತಿ ಮಾಡುತ್ತಿದ್ದರು? ಆ ಹಣದ ಮೂಲ ಎಲ್ಲಿ? ಇತ್ಯಾದಿ ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.
