ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮುಖ್ಯಸ್ಥರೊಂದಿಗೆ ಮಾತನಾಡಿದ್ದನ್ನು ನಟ ಪ್ರಕಾಶ್ ರಾಜ್ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯು ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದೆ.
ಬೆಂಗಳೂರು (ಜೂ.17): ಧರ್ಮಸ್ಥಳದ ವಿರುದ್ಧ ನಡೆದಿದೆ ಎನ್ನಲಾದ ವ್ಯವಸ್ಥಿತ ಷಡ್ಯಂತ್ರದ ಪ್ರಕರಣದ ತನಿಖೆಯ ವೇಳೆ ನಟ ಪ್ರಕಾಶ್ ರಾಜ್ ಅವರು ಈ ಪ್ರಕರಣದ ಸಂಬಂಧ ಎಸ್‌ಐಟಿ (SIT) ಮುಖ್ಯಸ್ಥರೊಂದಿಗೆ ಮಾತನಾಡಿದ್ದನ್ನು ಒಪ್ಪಿಕೊಂಡ ಬೆನ್ನಲ್ಲೇ, ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಮುಖಂಡ ವಸಂತ ಗಿಳಿಯಾರ್ ಆಗ್ರಹ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ 'ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ'ಯ ಮುಖಂಡ ವಸಂತ್ ಗಿಳಿಯಾರ್ ಮಾತನಾಡಿ, 'ಧರ್ಮಸ್ಥಳದ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು, ಅದು ಇಂದು ನಿಜವಾಗಿದೆ. ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಎಲ್ಲವೂ ಬಯಲಾಗಿದೆ. ಪ್ರಕಾಶ್ ರಾಜ್ ಅವರ ಹೆಸರೂ ಅಲ್ಲಿ ಉಲ್ಲೇಖವಾಗಿತ್ತು. ಇಂದು ಖುದ್ದು ಪ್ರಕಾಶ್ ರಾಜ್ ಅವರೇ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಜೊತೆ ಚರ್ಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು' ಎಂದು ಒತ್ತಾಯಿಸಿದರು.
'ಮಾಸ್ಕ್ ಮ್ಯಾನ್' ಚಿನ್ನಯ್ಯನ ನಿಗೂಢ ನಡವಳಿಕೆ:
ಈ ಪ್ರಕರಣದ ಪ್ರಮುಖ ವ್ಯಕ್ತಿ ಚಿನ್ನಯ್ಯನ ಬಗ್ಗೆ ಗಂಭೀರ ಆರೋಪ ಮಾಡಿದ ಸಮಿತಿ ಮುಖಂಡರು, 'ಚಿನ್ನಯ್ಯ ಧರ್ಮಸ್ಥಳದಲ್ಲಿ ಮಹಿಳೆಯರನ್ನು ಹೂತು ಹಾಕಿದ್ದೇನೆ ಎಂದು ತೋರಿಸಿದ ಸ್ಥಳದಲ್ಲಿ ಗುಂಡಿ ಅಗಿಯುವಾಗಲೂ ಹೆಡ್‌ಫೋನ್ ಹಾಕಿಕೊಂಡಿದ್ದನು. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದೇ ಹೆಡ್‌ಫೋನ್ ಮುಚ್ಚಿಡಲು. ಅವನಿಗೆ ಬೇರೆ ಯಾರೋ ವ್ಯಕ್ತಿಗಳು ಹೊರಗಿನಿಂದ ಡೈರೆಕ್ಷನ್ ನೀಡುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಪ್ರಕರಣದಲ್ಲಿ ಚಿನ್ನಯ್ಯನಿಗೆ 50 ಲಕ್ಷ ರೂಪಾಯಿ ನೀಡುವ ಡೀಲ್ ಕುದುರಿತ್ತು ಎಂಬ ಮಾಹಿತಿಯಿದೆ. ಆದ್ದರಿಂದ ಚಿನ್ನಯ್ಯನಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಬೇಕು' ಎಂದು ಆಗ್ರಹಿಸಿದರು.
ಸರ್ಕಾರದ ಮೇಲೆ ಒತ್ತಡ:
ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಹೀಗಾಗಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ವೀರೇಂದ್ರ ಹೆಗ್ಗಡೆ ಅವರಂತಹ ಗೌರವಾನ್ವಿತ ವ್ಯಕ್ತಿಗಳ ವಿರುದ್ಧ ಷಡ್ಯಂತ್ರ ನಡೆಸಿದವರ ಮುಖವಾಡ ಕಳಚಬೇಕು. ಸರ್ಕಾರವು ಈ ತನಿಖೆಯ ಮಧ್ಯಂತರ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಸಂತ್ ಗಿಳಿಯಾರ್ ಆಗ್ರಹಿಸಿದ್ದಾರೆ.
ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಎಸ್‌ಐಟಿ ತನಿಖೆಯಿಂದ ಹೊರಬರಬೇಕಿದೆ. ಪ್ರಕಾಶ್ ರಾಜ್ ಅವರ ಹೇಳಿಕೆಗಳು ಈ ತನಿಖೆಗೆ ಹೊಸ ಆಯಾಮ ನೀಡಿದ್ದು, ಮುಂದಿನ ದಿನಗಳಲ್ಲಿ ತನಿಖಾ ಸಂಸ್ಥೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.


