ಧರ್ಮಸ್ಥಳ ಷಡ್ಯಂತ್ರ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಳಿಕ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ತಾವು ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸುವುದಾಗಿಯೂ, ತಮ್ಮ ಹೋರಾಟ ಸೌಜನ್ಯ ಹಾಗೂ ಇತರ ಹೆಣ್ಣುಮಕ್ಕಳ ಸಾವಿನ ನ್ಯಾಯಕ್ಕಾಗಿಯೇ ಹೊರತು ಧರ್ಮಸ್ಥಳದ ವಿರುದ್ಧವಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು (ಜೂ.17): ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಕೇಸ್‌ನಲ್ಲಿ ನಟ ಪ್ರಕಾಶ್ ರಾಜ್ ಹೆಸರು ಬಹಿರಂಗವಾದ ಬೆನ್ನಲ್ಲಿಯೇ, ಹಿರಿ ನಟ ಬುಧವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿ ಮಾಡಿದ್ದೇನೆ. ಅವರು ಅದ್ಭುತ ಮನುಷ್ಯ ಎಂದು ಹೇಳಿದ್ದಾರೆ. ಆದರೆ, ನನ್ನ ಹೋರಾಟ ಇರುವುದು ಸೌಜನ್ಯ ಸಾವಿ ವಿರುದ್ಧ ಹಾಗೂ ಅಲ್ಲಾಗಿರುವ ಸಾಕಷ್ಟು ಹೆಣ್ಣುಮಕ್ಕಳ ಸಾವಿನ ವಿರುದ್ಧ. ಇದರ ಬಗ್ಗೆ ನಾನು ಪ್ರಶ್ನೆ ಮಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಳಿಕ ಸಾಕಷ್ಟು ಮೆತ್ತಗಾದಂತೆ ಕಂಡುಬಂದಿರುವ ಪ್ರಕಾಶ್ ರಾಜ್, 'ನಾನು ನನ್ನ ಜೀವನದಲ್ಲಿ ಒಂದೇ ಒಂದು ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದೇನೆ. ಅವರು ಅದ್ಭುತ ಮನುಷ್ಯ ಹಾಗೂ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರು.
ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ವ್ಯವಹಾರ, ಧರ್ಮ, ಷಡ್ಯಂತ್ರ ಎಂಬ ಕಟ್ಟುಕಥೆಗಳನ್ನು ಮಾಧ್ಯಮಗಳು ಎಳೆದ ತರುವುದು ಸರಿಯಲ್ಲ. ನಾನು ಯಾವುದೇ ಶಾಸಕನೋ ಅಥವಾ ಸಂಸದನೋ ಆಗಬೇಕಿಲ್ಲ. ಧರ್ಮಸ್ಥಳದಲ್ಲಿ ಸತ್ತಿರುವ ಹೆಣ್ಣು ಮಕ್ಕಳ ಮೇಲೆ ನಿಮಗ್ಯಾಕೆ ಕನಿಕರ ಇಲ್ಲ. ಅದರ ಬಗ್ಗೆ ನೀವೇಕೆ ಪ್ರಶ್ನೆ ಮಾಡೋದಿಲ್ಲ? ಅಲ್ಲಿ ಮೃತಪಟ್ಟ ಹೆಣ್ಣು ಮಕ್ಕಳು ನಮ್ಮವರಲ್ವಾ? ಸೌಜನ್ಯ ಹೇಗೆ ಸತ್ತಳು ಮತ್ತು ಅಲ್ಲಿ ಉಳಿದ ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂದು ಪ್ರಶ್ನಿಸುವುದು ತಪ್ಪಾ? ನಾನು ಆ ಸಾವುಗಳ ನ್ಯಾಯಕ್ಕಾಗಿ ಪ್ರಶ್ನೆ ಮಾಡಿದ್ದೇನೆಯೇ ಹೊರತು ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿಲ್ಲ" ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.
ನಾನು ಧರ್ಮಸ್ಥಳದ ವಿರೋಧಿಯಲ್ಲ
ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ 200 ಕೋಟಿ ಡೀಲ್ ಮಾಡಿದ್ದಾರೆ ಅಂತ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ 200 ಕೋಟಿ ರೂಪಾಯಿ ಹಣವನ್ನು ನಾನೆಲ್ಲಿಂದ ತರಲಿ? ಪರಮ ಪವಿತ್ರ ಧರ್ಮಸ್ಥಳದ ಮೇಲೆ ನಾನು ಯಾಕೆ ಅಪಪ್ರಚಾರ ಮಾಡಲಿ? ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಅಂತೆಲ್ಲಾ ಯಾಕೆ ಬಣ್ಣ ಬಳಿಯುತ್ತಿದ್ದೀರಾ? ನನ್ನ ಹೆಂಡತಿ ಪ್ರತಿದಿನ ದೇವರ ಪೂಜೆ ಮಾಡುತ್ತಾಳೆ, ನಾನು ಅವಳ ಭಾವನೆಗಳನ್ನು ಗೌರವಿಸುತ್ತೇನೆ. ದೇಶದಲ್ಲಿ ಪ್ರಧಾನಿಯನ್ನೇ ಪ್ರಶ್ನಿಸಿದರೂ ಈ ರೀತಿ ವಿಷಯ ತಿರುಚಬಾರದು ಎಂದು ಹೇಳಿದ್ದಾರೆ.



