ಬೆಂಗಳೂರು(ಮೇ.23): ವಿವಾಹವಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆ ಜತೆ ದೈಹಿಕ ಸಂಪರ್ಕ ಸಾಧಿಸಿ ಮದುವೆ ಒಲ್ಲೆ ಎಂದಿದ್ದಕ್ಕೆ ನೊಂದ ಮಹಿಳೆ ಶೌಚಾಲಯದ ಸ್ವಚ್ಛತೆಗೆ ಬಳಸುವ ದ್ರಾವಣ ಸೇವಿಸಿ ಠಾಣೆಗೆ ಹೋಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಪೊಲೀಸರು, ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಿದ್ದಾರೆ. ಸಂತ್ರಸ್ತೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಲೋಕೇಶ್‌ ಎಂಬಾತನ ವಿರುದ್ಧ ಅತ್ಯಾಚಾರ ಆರೋಪ ಹಾಗೂ ಸಂತ್ರಸ್ತೆ ವಿರುದ್ಧ ಆತ್ಮಹತ್ಯೆಗೆ ಯತ್ನ ಆರೋಪದ ಅಡಿ ಜ್ಞಾನಭಾರತಿ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

35 ವರ್ಷದ ಸಂತ್ರಸ್ತೆ ಈಗಾಗಲೇ ವಿವಾಹವಾಗಿದ್ದು, ಪತಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ವೇಳೆ ಸಂತ್ರಸ್ತೆಗೆ ಲೋಕೇಶ್‌ ಎಂಬಾತನನ್ನು ಪರಿಚಯವಾಗಿತ್ತು. ಆರೋಪಿ ಮಹಿಳೆಯನ್ನು ವಿವಾಹವಾಗುವುದಾಗಿ ಐಐಎಸ್‌ಸಿ ವಿದ್ಯಾರ್ಥಿ ನಿಲಯಕ್ಕೆ ಕರೆಯಿಸಿಕೊಂಡು ದೈಹಿಕ ಸಂಪರ್ಕ ಸಾಧಿಸಿದ್ದ. ಅಲ್ಲದೆ, ಒಮ್ಮೆ ಪ್ರವಾಸಕ್ಕೆ ಕರೆದುಕೊಂಡು ದೈಹಿಕ ಸಂಪರ್ಕ ಸಾಧಿಸಿದ್ದ. ವಿವಾಹವಾಗುವಂತೆ ಹೇಳಿದರೆ ನೆಪ ಹೇಳಿ ಮುಂದುವರೆಯುತ್ತಿದ್ದ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆತನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಹಿಂದು ಎಂದು ಹೇಳಿ ಮುಸ್ಲಿಂ ಯುವಕನಿಂದ ವಂಚನೆ: ಮೋಸದ ಬಲೆಗೆ ಬಿದ್ದ ಯುವತಿ

ಇತ್ತೀಚೆಗೆ ಆರೋಪಿಯು, ನಾವಿಬ್ಬರೂ ಯಾವಾಗಲೂ ಜಗಳ ಮಾಡಿಕೊಳ್ಳುತ್ತಿರುತ್ತೇವೆ. ನಮ್ಮಿಬ್ಬರಿಗೂ ಸಂಬಂಧ ಸರಿ ಹೋಗುವುದಿಲ್ಲ ಎಂದು ಇಮೇಲ್‌ ಕಳುಹಿಸಿದ್ದ. ಮೇ 20ರಂದು ವಾಟ್ಸ್‌ಪ್‌ ಪರಿಶೀಲಿಸುತ್ತಿದ್ದಾಗ, ಆತ ಬೇರೆ ಯುವತಿ ಜತೆ ಮದುವೆಯಾಗಿರುವುದು ಗೊತ್ತಾಗಿದೆ. ಇದರಿಂದ ನೊಂದ ಆಕೆ, ಶೌಚಾಗೃಹ ಸ್ವಚ್ಛತೆಗೆ ಬಳಸುವ ದ್ರಾವಣ ಸೇವಿಸಿದ್ದಾಳೆ. ಬಳಿಕ ಪೊಲೀಸರಿಗೆ ದೂರು ಕೊಡಲು ಕ್ಯಾಬ್‌ ಬುಕ್‌ ಮಾಡಿಕೊಂಡು ಹೊಸಕೋಟೆ ಪೊಲೀಸ್‌ ಠಾಣೆಗೆ ಹೋಗಿದ್ದಳು. ಪೊಲೀಸರು ದೂರು ಸ್ವೀಕರಿಸುತ್ತಿದ್ದ ವೇಳೆ ಠಾಣೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದಳು. ಪೊಲೀಸರು ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಾಗರಭಾವಿಯಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಲೋಕೇಶ್‌ ಎಂಬಾತನ ವಿರುದ್ಧ ಅತ್ಯಾಚಾರ ಆರೋಪದಡಿ ಹಾಗೂ ಆಸ್ಪತ್ರೆಯ ವೈದ್ಯರು ಕಳುಹಿಸಿದ ಮೆಮೋ ಆಧರಿಸಿ ಸಂತ್ರಸ್ತೆ ವಿರುದ್ಧ ಆತ್ಮಹತ್ಯೆಗೆ ಯತ್ನ ಆರೋಪದ ಅಡಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.