ಕಪ್ಪು ಎಂದು ಪತಿಯನ್ನು ನಿಂದಿಸುವುದು ಕ್ರೌರ್ಯ: ಹೈಕೋರ್ಟ್
ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು(ಆ.07): ಪತಿಯನ್ನು ಕಪ್ಪು ಚರ್ಮದವನು ಎಂಬುದಾಗಿ ಸಂಬೋಧಿಸಿ ಸದಾ ಅವಮಾನಿಸುತ್ತಿದ್ದ ಪತ್ನಿಯ ಧೋರಣೆಯನ್ನು ‘ಕ್ರೌರ್ಯ’ವೆಂದು ಪರಿಗಣಿಸಿರುವ ಹೈಕೋರ್ಚ್, ದಂಪತಿಯ ಮದುವೆ ಅಸಿಂಧುಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ. ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಲಭ್ಯವಿರುವ ದಾಖಲೆಗಳನ್ನು ಆಳವಾಗಿ ಪರಿಶೀಲಿಸಿದಾಗ ‘ಕಪ್ಪು ಚರ್ಮದವರು’ ಎಂದು ಸದಾ ಹೇಳುವ ಮೂಲಕ ಪತಿಗೆ ಪತ್ನಿ ಅವಮಾನ ಮಾಡುತ್ತಿದ್ದರು. ಸಕಾರಣವಿಲ್ಲದಿದ್ದರೂ ಪತಿಯ ಜೊತೆ ಇರದೇ ಪತ್ನಿ ತವರು ಮನೆ ಸೇರಿದ್ದಾರೆ. ಆದರೆ, ಈ ವಿಷಯ ಮರೆಮಾಚಲು ಪತಿ ಮೇಲೆ ಅಕ್ರಮ ಸಂಬಂಧ ಕುರಿತು ಸುಳ್ಳು ಆರೋಪ ಹೊರಿಸಿದ್ದಾರೆ. ಇದು ನಿಸ್ಸಂದೇಹವಾಗಿ ಕ್ರೌರ್ಯವಾಗಲಿದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಪತಿಗೆ ವಿಚ್ಛೇದನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿತು. ಜತೆಗೆ, ಪತಿಯ ಮೇಲ್ಮನವಿ ಪುರಸ್ಕರಿಸಿ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ.
ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
5 ವರ್ಷದಲ್ಲಿ ವಿಚ್ಛೇದನಕ್ಕೆ ಮನವಿ:
ಬೆಂಗಳೂರಿನ ನಿವಾಸಿ ಮಧುಕರ್ ಮತ್ತು ರಾಣಿ (ಇಬ್ಬರ ಹೆಸರು ಬದಲಿಸಲಾಗಿದೆ) 2007ರಲ್ಲಿ ಮದುವೆಯಾಗಿದ್ದರು. ಆದರೆ, 2012ರಲ್ಲಿ ವಿಚ್ಛೇದನ ಕೋರಿ ಮಧುಕರ್ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸುವ ಮೂಲಕ ವಿಚ್ಛೇದನ ನಿರಾಕರಿಸಿ ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2017ರ ಜ.13ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮಧುಕರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
‘ವಿವಾಹ ನಂತರ ಪತ್ನಿ ಸದಾ ನನ್ನನ್ನು ಕಪ್ಪು ಚರ್ಮದವರೆಂದು ಹೇಳುತ್ತಾ ಅವಮಾನಿಸುತ್ತಿದ್ದರು. ಮಗಳಿಗಾಗಿ ನಾನು ಆ ಅವಮಾನ ಸಹಿಕೊಳ್ಳುತ್ತಿದ್ದೆ. ಇದಲ್ಲದೇ ಪತ್ನಿ 2011ರ ಅ.29ರಂದು ನನ್ನ ಹಾಗೂ ವೃದ್ಧ ತಾಯಿ ಸೇರಿ ಕುಟುಂಬ ಸದಸ್ಯರೆಲ್ಲರ ವಿರುದ್ಧ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಆ ದೂರಿನ ಸಂಬಂಧ ಪೊಲೀಸರು ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಹಲವು ದಿನಗಳ ಕಾಲ ಪೊಲೀಸ್ ಠಾಣೆ ಮತ್ತು ಕೋರ್ಚ್‌ಗೆ ಅಲೆದಾಡುವಂತಾಯಿತು. ಬಳಿಕ ನನ್ನ ತೊರೆದು ತವರು ಮನೆ ಸೇರಿದ ಪತ್ನಿ ವಾಪಸ್ಸಾಗಲೇ ಇಲ್ಲ. ನನ್ನೊಂದಿಗೆ ದಾಂಪತ್ಯ ಜೀವನ ಮುಂದುವರಿಸಲು ಆಕೆ ಆಸಕ್ತಿ ಹೊಂದಿಲ್ಲ. ನನಗೆ ಉದ್ಯೋಗ ನೀಡಿದವರಿಗೂ ಪತ್ನಿ ದೂರು ನೀಡಿದ್ದರು. ಅವರು ನನ್ನನ್ನು ಕರೆದು ವಿವರಣೆ ಪಡೆದರು. ಪತ್ನಿಯ ನಡೆಯಿಂದ ನನಗೆ ಮಾನಸಿಕ ಯಾತನೆ ಉಂಟಾಯಿತು. ಅದರಿಂದ ನಾನು ಖಿನ್ನತೆಗೂ ಒಳಗಾದೆ. ಪತ್ನಿ ಎಸಗಿರುವ ಕ್ರೌರ್ಯ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು’ ಎಂದು ಮೇಲ್ಮನವಿಯಲ್ಲಿ ಮಧು ಕೋರಿದ್ದರು.
ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ನೇಮಕದಲ್ಲಿ ಪಾರದರ್ಶಕತೆಗೆ ಹೈಕೋರ್ಟ್ ಸೂಚನೆ
ಮೇಲ್ಮನವಿ ವಜಾಗೊಳಿಸಲು ಕೋರಿದ್ದ ಪತ್ನಿ, ‘ಪತಿ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಅವರಿಗೆ ಮಗು ಸಹ ಜನಿಸಿದೆ. ಮೊದಲಿಗೆ ಗಂಡನ ಮನೆಯಲ್ಲಿಯೇ ಅತ್ತೆ, ನಾದಿನಿ ಮತ್ತು ಮೈದುನನ ಜೊತೆಗೆ ವಾಸವಾಗಿದ್ದೆ. 2011ರ ಏ.7ರಂದು ಪ್ರತ್ಯೇಕ ಮನೆ ಮಾಡಿದಾಗಲೂ ಗಂಡನ ಕುಟುಂಬ ಸದಸ್ಯರು ಮನೆಗೆ ಬರುತ್ತಿದ್ದರು. ಪತಿ ನನ್ನ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಠೋರವಾಗಿ ವರ್ತಿಸುತ್ತಿದ್ದರು. ನಿತ್ಯ ಮನೆಗೆ ತಡರಾತ್ರಿ ಬರುತ್ತಿದ್ದರು. ಮನೆಯಿಂದ ಹೊರ ಹೋಗಲು ಬಿಡುತ್ತಿರಲಿಲ್ಲ’ ಎಂದು ಪ್ರತ್ಯಾರೋಪ ಮಾಡಿದ್ದರು.
ಪ್ರಕರಣದ ದಾಖಲೆ ಪರಿಶೀಲಿಸಿದ ಹೈಕೋರ್ಟ್, ‘ಪತಿಯ ಅಕ್ರಮ ಸಂಬಂಧ ಕುರಿತಂತೆ ಪತ್ನಿ ಆಧಾರರಹಿತ ಆರೋಪ ಮಾಡಿದ್ದಾರೆ. ಇಂತಹ ಆರೋಪ ಮಾಡುವುದರಿಂದ ಅಪರಿಮಿತ ಮಾನಸಿಕ ಹಿಂಸೆ (ಕ್ರೌರ್ಯ) ಉಂಟಾಗಲಿದೆ. ಇನ್ನು ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ರಾಣಿ ಹಲವು ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಹಲವು ವರ್ಷಗಳಿಂದ ಪತಿಯ ಸಂಪರ್ಕದಲ್ಲಿ ಇಲ್ಲದ ಪತ್ನಿ, ಪತಿಯೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧಳಿದ್ದೇನೆ. ಆದÜರೆ, ಯಾವ ಕಾರಣಕ್ಕೂ ಅವರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಪತಿಯೊಂದಿಗೆ ಮತ್ತೆ ಬಾಳುವ ಆಸಕ್ತಿ ಪತ್ನಿಗೆ ಇಲ್ಲವಾಗಿದ್ದು, ಅವರ ನಡುವೆ ದೊಡ್ಡ ಬಿರುಕು ಇರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಕ್ರೌರ್ಯ ಆಧಾರದ ಮೇಲೆ ಪತಿಗೆ ವಿಚ್ಛೇದನ ಮಾಡಬಹುದಾಗಿದೆ’ ಎಂದು ಆದೇಶದಲ್ಲಿ ಹೇಳಿದೆ. ಇದೇ ವೇಳೆ ಪತ್ನಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರೆ ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಿ ನಿರ್ಧರಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.