Asianet Suvarna News Asianet Suvarna News

ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ನೇಮಕದಲ್ಲಿ ಪಾರದರ್ಶಕತೆಗೆ ಹೈಕೋರ್ಟ್‌ ಸೂಚನೆ

ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು ಉನ್ನತಮಟ್ಟದ ಮತ್ತು ಅತಿಸೂಕ್ಷ್ಮ ಸಾಂವಿಧಾನಿಕ ಹುದ್ದೆಗಳಾಗಿವೆ. ಅವುಗಳಿಗೆ ನೇಮಕ ಮಾಡುವ ವೇಳೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಆಕ್ಷೇಪಣೆ, ಆರೋಪ ಮತ್ತು ನಿರಂಕುಶತ್ವ ಮತ್ತು ಸ್ವೇಚ್ಛೆಯಿಂದ ಅಧಿಕಾರ ಬಳಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಸೂಚಿಸಿದ ಹೈಕೋರ್ಟ್‌

High Court of Karnataka Instruct Transparency in Appointment of KPSC Chairman Members grg
Author
First Published Aug 2, 2023, 2:00 AM IST

ಬೆಂಗಳೂರು(ಆ.02):  ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಕೆಪಿಎಸ್‌ಸಿ ಅಧ್ಯಕ್ಷ ಮತ್ತು 11 ಮಂದಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಮತ್ತು ಶಶಿಪ್ರಸಾದ್‌ ಗಾಂಧಿ ಅವರು ಸಲ್ಲಿಸಿದ್ದ ಪ್ರತ್ಯೇಕ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ ತೀರ್ಪುನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಇತ್ತೀಚೆಗೆ ಪ್ರಕಟಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು ಉನ್ನತಮಟ್ಟದ ಮತ್ತು ಅತಿಸೂಕ್ಷ್ಮ ಸಾಂವಿಧಾನಿಕ ಹುದ್ದೆಗಳಾಗಿವೆ. ಅವುಗಳಿಗೆ ನೇಮಕ ಮಾಡುವ ವೇಳೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಆಕ್ಷೇಪಣೆ, ಆರೋಪ ಮತ್ತು ನಿರಂಕುಶತ್ವ ಮತ್ತು ಸ್ವೇಚ್ಛೆಯಿಂದ ಅಧಿಕಾರ ಬಳಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಸೂಚಿಸಿದೆ.

ಅರ್ಜಿ ದೋಷ ಮುಂದಿಟ್ಟು ಸರ್ಕಾರಿ ಹುದ್ದೆ ತಪ್ಪಿಸಲಾಗದು: ಹೈಕೋರ್ಟ್‌

ಆಯೋಗದ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಪ್ರಕ್ರಿಯೆ ಕುರಿತಂತೆ ಪಂಜಾಬ್‌ ಸರ್ಕಾರ ಮತ್ತು ಸಲೀಲ್‌ ಸಬ್‌ಲೋಕ್‌ ನಡುವಿನ ಪ್ರಕರಣದಲ್ಲಿ ಸುಪ್ರಿಂಕೋರ್ಟ್‌ ನೀಡಿರುವ ನಿರ್ದೇಶನಗಳು ಪಾಲನೆಯಾಗುವಂತೆ ರಾಜ್ಯ ಸರ್ಕಾರ ಎಲ್ಲ ಪ್ರಯತ್ನ ನಡೆಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ನಿರ್ದೇಶಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟನಿಯಮಗಳಿಲ್ಲ. ಆ ನಿಯಮ ರೂಪಿಸುವವರೆಗೆ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಮಾಗಸೂರ್ಚಿ ಪಾಲಿಸಬೇಕು. ಮಾರ್ಗಸೂಚಿಯಂತೆ ಅಧ್ಯಕ್ಷರ ನೇಮಕಾತಿ ಹಾಗೂ ಶೋಧನಾ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂಬ ಅರ್ಜಿದಾರರ ಮನವಿ ಕುರಿತು ಹೈಕೋರ್ಟ್‌ ಯಾವುದೇ ನಿರ್ದೇಶನವನ್ನು ನೀಡಿಲ್ಲ.

ಕೆಪಿಎಸ್‌ಸಿ ಅಧ್ಯಕ್ಷತೆಗೆ ಷಡಕ್ಷರಿ, ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥ

ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ವೇಳೆ ಶೋಧನಾ ಸಮಿತಿ ರಚನೆ ಮಾಡಬೇಕು ಎಂಬ ಪಿ.ಸಿ. ಹೋಟಾ ಸಮಿತಿಯ ಶಿಫಾರಸನ್ನು ಕೈ ಬಿಡಲು ರಾಜ್ಯ ಸಚಿವ ಸಂಪುಟವು 2013ರ ಆ.23ರಂದು ನಿರ್ಣಯ ಕೈಗೊಂಡಿದೆ. ಇದರಿಂದ 2021ರಲ್ಲಿ ಶಿವಶಂಕರ ಎಸ್‌.ಸಾಹುಕಾರ್‌ ಅವರನ್ನು ಸದಸ್ಯರಾಗಿ ನಂತರ ಅವರನ್ನೇ ಅಧ್ಯಕ್ಷರಾಗಿ ಹಾಗೂ ಡಾ.ಚಂದ್ರಕಾಂತ್‌ ಡಿ.ಶಿವಕೇರಿ ಸೇರಿದಂತೆ 11 ಮಂದಿ ಸದಸ್ಯರನ್ನು ನೇಮಿಸಿದ ವೇಳೆ ಹೋಟಾ ಸಮಿತಿ ಮಾರ್ಗಸೂಚಿ ಅನುಸರಿಸಬೇಕಿತ್ತು ಎಂಬ ನಿಯಮ ಪ್ರಚಲಿತದಲ್ಲಿ ಇರಲಿಲ್ಲ. ಹಾಗಾಗಿ, ಕೆಪಿಎಸ್‌ಸಿ ಅಧ್ಯಕ್ಷರ ಹಾಗೂ ಸದಸ್ಯರ ನೇಮಕ್ಕೆ ಹೋಟಾ ಸಮಿತಿಯ ಮಾರ್ಗಸೂಚಿ ಪಾಲಿಸಬೇಕು ಮತ್ತು ನಿರ್ದಿಷ್ಟ ನಿಯಮ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿ ಪರಿಗಣಿಸಲು ಅಗತ್ಯವಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಮನವಿ ಏನಿತ್ತು

ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟನಿಯಮಗಳನ್ನು ರೂಪಿಸಬೇಕು. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಮಾಗಸೂರ್ಚಿಗಳನ್ನು ಪಾಲಿಸಬೇಕು ಎಂದು 2016ರಲ್ಲಿ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಹೋಟಾ ಸಮಿತಿ ಮಾರ್ಗಸೂಚಿಯಂತೆ ಶೋಧನಾ ಸಮಿತಿ ರಚಿಸದೆ ಮತ್ತು ಯಾವುದೇ ನಿಯಮ ರೂಪಿಸದೆ ರಾಜ್ಯ ಸರ್ಕಾರ ಕೆಪಿಎಸ್‌ಎಸಿಗೆ ಸದಸ್ಯರನ್ನು ನೇಮಿಸಿದೆ. ಹಾಗಾಗಿ, ಕೆಪಿಎಸ್‌ಸಿ ಸದಸ್ಯರನ್ನು ನೇಮಕಾತಿ ಆದೇಶ ರದ್ದುಪಡಿಸಬೇಕು. ಹೋಟಾ ಸಮಿತಿ ಅನುಸಾರ ಹೊಸದಾಗಿ ಸದಸ್ಯರನ್ನು ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರ ಮನವಿಯಾಗಿತ್ತು.

Follow Us:
Download App:
  • android
  • ios