ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ರಾಜ್ಯದಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು (ಆ.03): ರಾಜ್ಯದಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನ ಕಾಕ್ಸ್‌ಟೌನ್ ನಿವಾಸಿ ಸಿ.ಸೋಮಶೇಖರ್ ಸೇರಿದಂತೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿ ವಿಚಾರಣೆ ಮುಂದೂಡಿದೆ.
ಕರ್ನಾಟಕ ಭಾಷಾ ಕಲಿಕಾ ಕಾಯ್ದೆ- 2015ರ ಸೆಕ್ಷನ್ 3 ಮತ್ತು ಕರ್ನಾಟಕ ಭಾಷಾ ಕಲಿಕಾ ನಿಯಮಗಳು 2017ರ ನಿಯಮ 3 ಮತ್ತು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ನಿರಾಕ್ಷೇಪಣ ಪತ್ರ ನೀಡಿಕೆ ಮತ್ತು ನಿಯಂತ್ರಣ) ನಿಯಮಗಳ 6(2) ಅನ್ವಯ ರಾಜ್ಯದಲ್ಲಿನ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದಿರುವ ಶಾಲೆಗಳು ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಬೋಧಿಸಬೇಕು. ಕನ್ನಡ ಕಲಿಸದೆ ಹೋದರೆ ಶೈಕ್ಷಣಿಕ ಸಂಸ್ಥೆಗೆ ನೀಡಲಾಗಿರುವ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆಯಲಾಗುತ್ತದೆ ಎಂದು 2022ರ ಮೇ 13ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಅನ್ನಭಾಗ್ಯ ಸಿದ್ದರಾಮಯ್ಯರ ಅಚ್ಚುಮೆಚ್ಚಿನ ಕಾರ್ಯಕ್ರಮ: ಶಾಸಕ ಬಸವರಾಜ ರಾಯರಡ್ಡಿ
ಈ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿದಾರರು, ಸರ್ಕಾರದ ನಡೆಯು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನಾನುಕೂಲ ಹಾಗೂ ತೊಂದರೆಯಾಗುತ್ತದೆ. ಕರ್ನಾಟಕದಲ್ಲಿ ತಮ್ಮ ಇಚ್ಛೆಯಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳ ಹಕ್ಕಿಗೆ ಧಕ್ಕೆಯಾಗುತ್ತದೆ. ಇದು ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಭವಿಷ್ಯದಲ್ಲಿ ಅವರ ಉದ್ಯೋಗ ಅವಕಾಶಗಳಿಗೆ ಅಡ್ಡಿ ಉಂಟು ಮಾಡುತ್ತದೆ. ಕನ್ನಡ ಹೊರತುಪಡಿಸಿ ಬೇರೆ ವಿಷಯಗಳನ್ನು ಬೋಧಿಸುವ ಶಿಕ್ಷಕರ ಜೀವನಕ್ಕೂ ಇದು ಸಮಸ್ಯೆಯಾಗಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು: ವೃದ್ಧ ದಂಪತಿಗಳ ಬದುಕಿಗೆ ಆಸರೆಯಾದ ಜಿಲ್ಲಾಧಿಕಾರಿ
ಕನ್ನಡ ಕಲಿಸದೆ ಹೋದರೆ ನಿರಾಕ್ಷೇಪಣಾ ಪತ್ರ ಹಿಂಡೆಯಲಾಗುವುದು ಎಂದು ಎಚ್ಚರಿಕೆ ನೀಡುವ ಮೂಲಕ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದ ಶಾಲೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಕನ್ನಡ ಭಾಷೆ ಬೋಧನೆ ಕಡ್ಡಾಯಗೊಳಿಸಿದ ನಿಯಮಗಳನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು. ಆ ನಿಯಮಗಳು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಘೋಷಿಸಬೇಕು. ಈ ನಿಯಮ ಜಾರಿಗೊಳಿಸುವಂತೆ ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದ ಶಾಲೆಗಳಗೆ ಒತ್ತಾಯ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.