ಕರ್ನಾಟಕದಲ್ಲಿ ನೀಟ್ ಪರೀಕ್ಷೆಯ ವಿರುದ್ಧ 'ನಿಮ್ಮ ನೀಟ್ ಸಾಕು, ನಮ್ಮ ಸಿಇಟಿ ಬೇಕು!' ಎಂಬ ಹೊಸ ಅಭಿಯಾನ ಆರಂಭವಾಗಿದೆ. ಕವಿರಾಜ್ ನೇತೃತ್ವದ ಈ ಹೋರಾಟವು, ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ, ವೈದ್ಯಕೀಯ ಪ್ರವೇಶಕ್ಕೆ ರಾಜ್ಯದ ಸಿಇಟಿ ವ್ಯವಸ್ಥೆಯನ್ನು ಮರುಜಾರಿಗೊಳಿಸುವಂತೆ ಒತ್ತಾಯಿಸುತ್ತಿದೆ.

ಬೆಂಗಳೂರು (ಜು.26): ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಯುವ ನೀಟ್ (NEET) ಪರೀಕ್ಷೆಯ ವಿರುದ್ಧ ಕರ್ನಾಟಕದಲ್ಲಿ ಮತ್ತೆ ಪ್ರತಿಭಟನೆಯ ಧ್ವನಿ ಜೋರಾಗಿದೆ. 'ನಿಮ್ಮ ನೀಟ್ ಸಾಕು, ನಮ್ಮ ಸಿಇಟಿ ಬೇಕು!' ಎಂಬ ಬಲವಾದ ಘೋಷಣೆಯೊಂದಿಗೆ ರಾಜ್ಯದಲ್ಲಿ ಹೊಸ ಸಾಮಾಜಿಕ ಅಭಿಯಾನವೊಂದು ಶುರುವಾಗಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಕವಿರಾಜ್ (Kaviraj) ಅವರ ನೇತೃತ್ವದಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.

ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ!

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಜಾರಿಗೆ ಬಂದಾಗಿನಿಂದ ರಾಜ್ಯದ ಗ್ರಾಮೀಣ ಭಾಗದ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ನೀಟ್ ಪರೀಕ್ಷೆಯು ಹೆಚ್ಚಾಗಿ NCERT ಹಾಗೂ CBSE ಪಠ್ಯಕ್ರಮವನ್ನು ಆಧಾರವಾಗಿರಿಸಿಕೊಂಡು ನಡೆಯುತ್ತಿದೆ. ಇದರಿಂದಾಗಿ ರಾಜ್ಯ ಪಠ್ಯಕ್ರಮದಲ್ಲಿ (State Board Syllabus) ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಸೂಕ್ತ ಅಂಕ ಗಳಿಸುವುದು ಕಷ್ಟಸಾಧ್ಯವಾಗುತ್ತಿದೆ.

MBBS ಪ್ರವೇಶ ಪ್ರಮಾಣ ಕುಸಿತ

ನೀಟ್ ಪರೀಕ್ಷೆ ಜಾರಿಯಾದ ಬಳಿಕ ಕರ್ನಾಟಕದ ಸ್ಥಳೀಯ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳ ವೈದ್ಯರಾಗುವ (MBBS) ಕನಸು ಭಗ್ನಗೊಳ್ಳುತ್ತಿದೆ. ರಾಜ್ಯದಲ್ಲಿದ್ದ ಹಳೆಯ ಕೆ-ಸಿಇಟಿ (KCET) ವ್ಯವಸ್ಥೆಯಿದ್ದಾಗ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಅವಕಾಶಗಳು ಈಗ ನೀಟ್‌ನಿಂದಾಗಿ ಕೈತಪ್ಪಿ ಹೋಗುತ್ತಿವೆ ಎಂಬುದು ಹೋರಾಟಗಾರರ ಮುಖ್ಯ ವಾದವಾಗಿದೆ.

Change.org ನಲ್ಲಿ ಸಹಿ ಸಂಗ್ರಹ ಅಭಿಯಾನ

ಈ ತಾರತಮ್ಯದ ವಿರುದ್ಧ ಧ್ವನಿ ಎತ್ತಿರುವ 'ನಮ್ಮ ನಾಡು ನಮ್ಮ ಆಳ್ವಿಕೆ' ಒಕ್ಕೂಟವು, Change.org ಆನ್‌ಲೈನ್ ವೇದಿಕೆಯಲ್ಲಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನವನ್ನು (Online Petition) ಪ್ರಾರಂಭಿಸಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯಮಟ್ಟದ ಸಿಇಟಿ (CET) ವ್ಯವಸ್ಥೆಯನ್ನೇ ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದ್ದು, ಈ ಅಭಿಯಾನಕ್ಕೆ ಸಾರ್ವಜನಿಕರು, ಹೆತ್ತವರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುವಂತೆ ಕವಿರಾಜ್ ಮನವಿ ಮಾಡಿದ್ದಾರೆ.