ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪಾಸ್-ಫೇಲ್ ಪದ್ಧತಿ ಕೈಬಿಟ್ಟು ಗ್ರೇಡ್ ನೀಡುವ ಕರಡು ಅಧಿಸೂಚನೆ ಹೊರಡಿಸಿದೆ. 2025-26ನೇ ಸಾಲಿನಿಂದ ಜಾರಿಗೆ ಬರಲಿರುವ ಈ ನಿಯಮದಂತೆ, ಒಟ್ಟು ಫಲಿತಾಂಶ 525 ಅಂಕಗಳಿಗೆ ಸೀಮಿತಗೊಳಿಸಲಾಗುವುದು 

ಬೆಂಗಳೂರು (11): ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ತೃತೀಯ ಭಾಷೆ ಮತ್ತು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್ಎಸ್‌ಕ್ಯೂಎಫ್) ವಿಷಯಗಳಿಗೆ ಪಾಸ್‌-ಫೇಲ್‌ ಪದ್ಧತಿ ಕೈಬಿಟ್ಟು ಮೂರು ಗ್ರೇಡ್‌ ಪದ್ಧತಿ ಜಾರಿಗೊಳಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶುಕ್ರವಾರ ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲವಕಾಶ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೃತೀಯ ಭಾಷೆ ಹಾಗೂ ಎನ್‌ಎಸ್‌ಕ್ಯೂಎಫ್ ನಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದ ಮೇಲೆ ಎ,ಬಿ,ಸಿ ಶ್ರೇಣಿಗಳನ್ನು ನೀಡಲಾಗುತ್ತದೆ. ಅದರಂತೆ, ಈ ವಿಷಯದಲ್ಲಿ ಶೇ.80 ರಿಂದ ಶೇ.100 ಅಂಕ ಪಡೆದರೆ ‘ಎ‘ ಶ್ರೇಣಿ, ಶೇ.50 ರಿಂದ ಶೇ.79ರವರೆಗೆ ‘ಬಿ’ ಮತ್ತು ಶೇ.49 ರವರೆಗೆ ‘ಸಿ’ ಶ್ರೇಣಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಹಾಗೆಯೇ ಈ ಎಲ್ಲಾ ವಿಷಯಗಳ ಶ್ರೇಣಿಯನ್ನು ಅಂಕಪಟ್ಟಿಯಲ್ಲಿ ಹೆಚ್ಚುವರಿ ವಿಷಯಗಳಾಗಿ ನಮೂದಿಸಬೇಕು ಮತ್ತು ಇದನ್ನು ಉತ್ತೀರ್ಣಕ್ಕೆ ಪರಿಗಣಿಸುವುದಿಲ್ಲ. ಇದು 2025-26ನೇ ಸಾಲಿನ ಎಸ್ಎಸ್ ಎಲ್ ಸಿ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಫಲಿತಾಂಶ 525ಕ್ಕೆ ಸೀಮಿತ:

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉಳಿದ ಐದು ವಿಷಯಗಳಲ್ಲಿ ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ ಶೇ.33 ಅಂಕ ಪಡೆಯಬೇಕು. ಐದೂ ವಿಷಯಗಳ ಒಟ್ಟು 525 ಅಂಕಗಳಲ್ಲಿ ಕನಿಷ್ಟ 173 ಅಂಕ ಗಳಿಸುವುದರೊಂದಿಗೆ ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ 30 ಪ್ರತಿಶತ ಅಂಕಗಳನ್ನು ಗಳಿಸಿದರೆ ಅಂಥ ಅಭ್ಯರ್ಥಿಗಳನ್ನು ಉತ್ತೀರ್ಣರಾಗಿದ್ದಾರೆಂದು ಘೋಷಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.