ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ 42,000 ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿ ₹100 ಕೋಟಿಗೂ ಅಧಿಕ ಮೊತ್ತದ ಸೈಬರ್ ವಂಚನೆ ನಡೆದಿದೆ. ಈ ಸಂಬಂಧ 14 ಮಂದಿಯನ್ನು ಬಂಧಿಸಲಾಗಿದ್ದು, ಹಣದ ಆಮಿಷವೊಡ್ಡಿ ತೆರೆಯಲಾದ ಖಾತೆಗಳನ್ನು ಆನ್‌ಲೈನ್ ವಂಚನೆ ಮತ್ತು ಬೆಟ್ಟಿಂಗ್‌ಗೆ ಬಳಸಿಕೊಳ್ಳಲಾಗಿದೆ.
ಬೆಂಗಳೂರು: ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಬಂಧ ನಕಲಿ 42 ಸಾವಿರ ಬ್ಯಾಂಕ್ ಖಾತೆಗಳ ಮೂಲಕ ಸುಮಾರು ₹100 ಕೋಟಿಗೂ ಅಧಿಕ ಹಣ ವರ್ಗಾವಣೆ ನಡೆದಿರುವ ಶಂಕೆ ಇದೆ ಎಂದು ರಾಜ್ಯ ಸೈಬರ್ ಕಮಾಂಡ್ ಹಾಗೂ ಡಿಜಿಪಿ ಪ್ರಣವ್ ಮೊಹಂತಿ ಹೇಳಿದರು.
ನಗರದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೈಬರ್ ವಂಚನೆ ಕೃತ್ಯಗಳಿಗೆ ಕೆಲವರು ಕಾನೂನುಬಾಹಿರವಾಗಿ ಬ್ಯಾಂಕ್ ಖಾತೆಗಳನ್ನು ಬಳಸಿದ್ದಾರೆ ಎಂದರು.
42 ಸಾವಿರ ನಕಲಿ ಖಾತೆ ಪತ್ತೆ
ರಾಜ್ಯದಲ್ಲಿ 42 ಸಾವಿರ ನಕಲಿ ಖಾತೆಗಳನ್ನು ಪತ್ತೆ ಹಚ್ಚಲಾಗಿದ್ದು, ಈ ಸಂಬಂಧ 14 ಮಂದಿಯನ್ನು ಬಂಧಿಸಿದ್ದೇವೆ. ಜನರಿಗೆ 10-20 ಸಾವಿರ ರು. ವರೆಗೆ ಹಣದ ಆಮಿಷವೊಡ್ಡಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಆರೋಪಿಗಳು ತೆರೆಸುತ್ತಿದ್ದರು. ನಂತರ ಆ ಖಾತೆಗಳನ್ನು ಸೈಬರ್ ಅಪರಾಧಿಗಳು ನಿರ್ವಹಿಸುತ್ತಿದ್ದರು. ಕೆಲವರಿಗೆ ತಮ್ಮ ಖಾತೆ ಬಗ್ಗೆ ಗೊತ್ತಿರಲಿಲ್ಲ ಎಂದು ತಿಳಿಸಿದರು.
14 ಮಂದಿ ಸೂತ್ರಧಾರಿಗಳ ಬಂಧನ
ಕಳೆದ ಮೂರು ತಿಂಗಳಿಂದ ಸೈಬರ್ ಅಪರಾಧ ಕೃತ್ಯಗಳಿಗೆ ಬ್ಯಾಂಕ್ ಖಾತೆಗಳನ್ನು ಪೂರೈಸುವ ಜಾಲದ ಮೇಲೆ ಕಣ್ಣಿಡಲಾಯಿತು. ಆಗ ರಾಜ್ಯದಲ್ಲಿ 42 ಸಾವಿರ ಖಾತೆಗಳು ಪತ್ತೆಯಾದವು. ಈ ಮಾಹಿತಿ ಮೇರೆಗೆ 29 ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ 14 ಮಂದಿ ಸೂತ್ರಧಾರಿಗಳನ್ನು ಬಂಧಿಸಲಾಗಿದೆ. ಸೈಬರ್ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆಗೆ ಬ್ಯಾಂಕ್ ಖಾತೆಗಳನ್ನು ಈ ಆರೋಪಿಗಳು ನಿರ್ವಹಿಸುತ್ತಿದ್ದರು ಎಂದು ಪ್ರವಣ್ ಮೊಹಂತಿ ವಿವರಿಸಿದರು.
ಸೈಬರ್ ಅಪರಾಧಿಗಳಿಗೆ ಬ್ಯಾಂಕ್ ಖಾತೆಗಳ ಮಾರಾಟ ಹಾಗೂ ಬಾಡಿಗೆಗೆ ಆರೋಪಿಗಳು ನೀಡುತ್ತಿದ್ದರು. ಈ ಖಾತೆಗಳನ್ನು ಆನ್‌ಲೈನ್ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ಸೇರಿ ಇತರೆ ಸೈಬರ್ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ. ಅನೇಕರಿಗೆ ತಮ್ಮ ಬ್ಯಾಂಕ್ ಖಾತೆ ಅಕ್ರಮ ಕೃತ್ಯಗಳಿಗೆ ಬಳಕೆಯಾಗಿರುವ ಅರಿವಿಲ್ಲ ಎಂದರು.
ಈ ಸಂಬಂಧ 17 ಎಫ್‌ಐಆರ್‌ಗಳು ದಾಖಲಾಗಿದ್ದು, 14 ಮಂದಿ ಬಂಧಿತರಾಗಿದ್ದಾರೆ. ಆರೋಪಿಗಳಿಂದ 25 ಎಟಿಎಂ ಕಾರ್ಡ್‌ಗಳು, 13 ಚೆಕ್ ಪುಸಕ್ತಗಳು, 12 ಮೊಬೈಲ್‌ಗಳು ಸೇರಿ ಇತರೆ ವಸ್ತುಗಳು ಜಪ್ತಿಯಾಗಿವೆ. ಶಿವಮೊಗ್ಗದಲ್ಲಿ ಆರೋಪಿಯಿಂದ 19 ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈತ ₹11 ಕೋಟಿ ವರ್ಗಾವಣೆಯಲ್ಲಿ ಪಾತ್ರವಹಿಸಿರುವುದು ಗೊತ್ತಾಗಿದೆ. ಅಲ್ಲದೆ ಎನ್‌ಸಿಆರ್‌ಪಿ ವೆಬ್‌ಸೈಟ್‌ನಲ್ಲಿ ದಾಖಲಾಗಿದ್ದ 96 ಪ್ರಕರಣಗಳಲ್ಲಿ ಶಿವಮೊಗ್ಗದ ಆರೋಪಿಯಿಂದ ಜಪ್ತಿಯಾದ ಬ್ಯಾಂಕ್ ಖಾತೆಗಳು ಬಳಕೆಯಾಗಿದೆ. ಇದರಲ್ಲಿ ₹55 ಕೋಟಿ ಹಣ ವರ್ಗಾವಣೆ ನಡೆದಿದೆ. ಕಳೆದೊಂದು ವರ್ಷದಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ರಾಜ್ಯದಲ್ಲಿ ₹100 ಕೋಟಿ ರು ವಹಿವಾಟು ನಡೆದಿರುವ ಮಾಹಿತಿ ಇದೆ. ತನಿಖೆ ಮುಂದುವರೆದಿದ್ದು, ಆ ಮೊತ್ತ ಹೆಚ್ಚಾಗಬಹುದು ಎಂದು ಡಿಜಿಪಿ ನುಡಿದರು.
ಈ ಸುದ್ದಿಗೋಷ್ಠಿಯಲ್ಲಿ ಐಜಿಪಿ ವಿಕಾಸ್ ಕುಮಾರ್ ವಿಕಾಸ್, ಡಿಐಜಿ ಎಚ್.ಡಿ.ಆನಂದ್ ಕುಮಾರ್ ಹಾಗೂ ಸಿಐಡಿ ಸೈಬರ್ ವಿಭಾಗದ ಎಸ್ಪಿ ಎಂ.ಡಿ.ಶರತ್ ಉಪಸ್ಥಿತರಿದ್ದರು.
ತನಿಖೆಗಾಗಿ ವಿಶೇಷ ತಂಡ ರಚನೆ: ಪ್ರವಣ್
ಬಹುಕೋಟಿ ಸೈಬರ್ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಸೈಬರ್ ಕಮಾಂಡ್ ಪ್ರಣವ್ ಮೊಹಂತಿ ಹೇಳಿದರು. ಈ ತಂಡದ ಅಧಿಕಾರಿಗಳಿಗೆ ನುರಿತ ತಾಂತ್ರಿಕ ತಜ್ಞರಿಂದ ತರಬೇತಿ ನೀಡಲಾಗಿದೆ. ಈ ತಂಡ ಸೈಬರ್ ಕೃತ್ಯಗಳ ತನಿಖೆ ಮಾತ್ರವಲ್ಲದೆ ನಿಯಂತ್ರಣಕ್ಕೂ ಸಹ ನಿಗಾವಹಿಸುತ್ತವೆ ಎಂದು ಮಾಹಿತಿ ನೀಡಿದರು.


