ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡ್ತಿದ್ದ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ!

  •  ಗಡಿ ವಿವಾದ ಮು‌ನ್ನಲೆಗೆ ಬರುತ್ತಿದ್ದಂತೆ ಕಾಲೇಜು ಕ್ಯಾಂಪಸ್‌ಗೂ ಕಾಲಿಟ್ಟಿತಾ ಭಾಷಾ ವೈಷಮ್ಯ?!
  •  Inter College Festನಲ್ಲಿ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಸಹಪಾಠಿಗಳ ಹಲ್ಲೆ
  •  ಹಲ್ಲೆ ಮಾಡಿದ ವಿದ್ಯಾರ್ಥಿಗಳ ಮೇಲೆ ಕ್ರಮಕ್ಕೆ ಕನ್ನಡಪರ ಸಂಘಟನೆಗಳ ಆಗ್ರಹ
A student who was dancing with a Kannada flag was attacked by his classmates at belagavi rav

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಡಿ.1): ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣದ ವಿಚಾರಣೆ ಇಂದು ಸುಪ್ರೀಂಕೋರ್ಟ್‌‌ನಲ್ಲಿ ಬರುವ ಸಾಧ್ಯತೆ ಇದೆ. ಗಡಿವಿವಾದ ಮುನ್ನಲೆಗೆ ಬರುತ್ತಿದ್ದಂತೆ ಕಾಲೇಜು ಕ್ಯಾಂಪಸ್‌ಗೂ ಭಾಷಾ ವೈಷಮ್ಯ ಕಾಲಿಟ್ಟಿದೆ. ಬೆಳಗಾವಿಯ ಟಿಳಕವಾಡಿಯ ಗೋಗಟೆ ಕಾಲೇಜಿನಲ್ಲಿ ಇಂಟರ್ ಕಾಲೇಜ್ ಫೆಸ್ಟ್ ನಡೆಯುವ ವೇಳೆ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವನ ಮೇಲೆ  ಆತನ ಸಹಪಾಠಿಗಳೇ ಹಲ್ಲೆ ನಡೆಸಿದ್ದಾರೆ. 

ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ಏಕಾಏಕಿ ಮುಗಿಬಿದ್ದು ಥಳಿಸಿದ್ದಾರೆ. ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜಿಗೆ ಕರುನಾಡ ವಿಜಯ ಸೇನೆ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ಹಾಗೂ ಕಾರ್ಯಕರ್ತರು ಭೇಟಿ ನೀಡಿದ್ದಾರೆ. 

Belagavi: ಕರ್ನಾಟಕಕ್ಕೆ ಸೇರಲು ನಡೆದಿದೆ ನಿರಂತರ ಹೋರಾಟ

ಈ ವೇಳೆ ಕಾಲೇಜು ಕ್ಯಾಂಪಸ್ ಪ್ರವೇಶಿಸಲು ಅವಕಾಶ ನೀಡದ ಕಾಲೇಜು ಸಿಬ್ಬಂದಿ ಹಾಗೂ ಕರುನಾಡ ವಿಜಯ ಸೇನೆ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಟಿಳಕವಾಡಿ ಠಾಣೆ ಪೊಲೀಸರು ಕಾಲೇಜು ಬಳಿ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಬರಮಣಿ ಭೇಟಿ ನೀಡಿ ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ಕರುನಾಡ ವಿಜಯ ಸೇನೆ ಕಾರ್ಯಕರ್ತರಿಂದ ಮಾಹಿತಿ ಪಡೆದಿದ್ದಾರೆ.  ಆದ್ರೆ ತಡರಾತ್ರಿಯವರೆಗೂ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

ವಿದ್ಯಾರ್ಥಿಯ ಸಹಪಾಠಿಗಳಿಂದಲೇ ಹಲ್ಲೆ:

ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ,‌ 'ಸಂಜೆ 7.30ರ ಸುಮಾರಿಗೆ ಗೋಗಟೆ ಕಾಲೇಜಿನಲ್ಲಿ ಇಂಟರ್ ಕಾಲೇಜ್ ಫೆಸ್ಟ್ ನಡೆಯುತ್ತಿತ್ತು. ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜು ಫೆಸ್ಟ್‌ನಲ್ಲಿ ಭಾಗಿಯಾಗಿದ್ರು. ಫೆಸ್ಟ್‌ನಲ್ಲಿ ಹಾಡು ಹಚ್ಚಿದ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕನ್ನಡ ಬಾವುಟ ತೋರಿಸಿದ್ದ. ಈ ವೇಳೆ ಆ ವಿದ್ಯಾರ್ಥಿಯ ಸಹಪಾಠಿಗಳು ಬಂದು ಹಲ್ಲೆ ಮಾಡಿದ್ದಾರೆ. ತಕ್ಷಣ ಪೊಲೀಸರು ಹೋಗಿದ್ದಾರೆ ಯಾವುದೇ ಗಲಾಟೆ ಆಗದ ಹಾಗೆ ನೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕರೆಯಿಸಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಎಲ್ಲಾ ಹುಡುಗರು 18 ವರ್ಷ ಒಳಗಿನವರಿದ್ದಾರೆ. ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುವಾಗ ಮೂರು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಯಾರು ಆ ಹುಡುಗರು ಅಂತಾ ನೋಡಿ ಕರೆದು ವಿಚಾರಿಸುತ್ತೇವೆ. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ' ಎಂದು ತಿಳಿಸಿದ್ದಾರೆ.

ಹಲ್ಲೆಗೈದ ವಿದ್ಯಾರ್ಥಿಗಳ ಅಮಾನತಿಗೆ ಆಗ್ರಹ: ಇಂದು ಕಾಲೇಜಿಗೆ ಮುತ್ತಿಗೆ

ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಲು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಟಿಳಕವಾಡಿಯ ಗೋಗಟೆ ಕಾಲೇಜಿಗೆ‌ ಮುತ್ತಿಗೆ ಹಾಕಲು ಕರುನಾಡ ವಿಜಯ ಸೇನೆ ಕಾರ್ಯಕರ್ತರು ನಿರ್ಧರಿಸಿದ್ದು ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ಗಡಿ ಯುದ್ಧಕ್ಕೆ ಕರ್ನಾಟಕ ಸನ್ನದ್ಧ: ಇಂದು ವಿಚಾರಣೆ ನಡೆಯುತ್ತಾ?

ಇನ್ನು ಡಿಸೆಂಬರ್ 3ರಂದು ಬೆಳಗಾವಿಗೆ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜೇ ದೇಸಾಯಿ ಹಾಗೂ ಸಂಸದ ಧೈರ್ಯಶೀಲ ಮಾನೆ ಭೇಟಿ ನೀಡಲಿದ್ದು ಎಂಇಎಸ್ ಕಚೇರಿಗೂ ಭೇಟಿ ನೀಡಿ ಬೆಳಗಾವಿ ನಗರ ಸೇರಿ ತಾಲೂಕಿನ ವಿವಿಧೆಡೆ ರೌಂಡ್ಸ್ ಹಾಕಲಿದ್ದಾರೆ. ಶಾಂತವಾಗಿರುವ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಯತ್ನಿಸುವ ಘಟನೆ ನಡೆಯುತ್ತಿದ್ದು ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ನಾಯಕರಿಗೆ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡದಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕು.

Latest Videos
Follow Us:
Download App:
  • android
  • ios