ಗಡಿ ಯುದ್ಧಕ್ಕೆ ಕರ್ನಾಟಕ ಸನ್ನದ್ಧ: ಇಂದು ವಿಚಾರಣೆ ನಡೆಯುತ್ತಾ?
ದಿಲ್ಲಿಯಲ್ಲಿ ವಕೀಲ ರೋಹಟ್ಗಿ-ಸಿಎಂ ಭೇಟಿ, ಸಮರ್ಥ ವಾದ ಮಂಡನೆಗೆ ಚರ್ಚೆ, ಸುಪ್ರೀಂ ಜಡ್ಜ್ ಸಾಂವಿಧಾನಿಕ ಪೀಠದಲ್ಲಿ ಬ್ಯುಸಿ: ಗಡಿ ಕೇಸ್ ವಿಚಾರಣೆ ಡೌಟು?
ಬೆಳಗಾವಿ(ನ.30): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಚ್‌ನಲ್ಲಿ ಸಮರ್ಥವಾಗಿ ಕಾನೂನು ಹೋರಾಟ ನಡೆಸಲು ರಾಜ್ಯ ಸಜ್ಜಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ದೆಹಲಿಯಲ್ಲಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಅವರನ್ನು ಭೇಟಿ ಮಾಡಿ ರಾಜ್ಯದ ಪರ ಸಮರ್ಥ ವಾದ ಮಂಡನೆಯ ಕುರಿತು ಚರ್ಚಿಸಿದರು. ಬಳಿಕ ಮಾತನಾಡಿ, ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡನೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಭಾನುವಾರ ರಾತ್ರಿ ಬೊಮ್ಮಾಯಿ ಬೆಂಗಳೂರಿನಲ್ಲಿ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ್ ಸೇರಿದಂತೆ ಸಚಿವರು, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ನಂತರ ಮಂಗಳವಾರ ದೆಹಲಿಯಲ್ಲಿ ಕರ್ನಾಟಕದ ಪರ ವಾದಿಸುವ ವಕೀಲರನ್ನು ಭೇಟಿಯಾದರು.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ತರ್ಲೆ ಮಾಡೋಕೆ ಬಂದರೆ ಕಠಿಣ ಕ್ರಮ: ಎಡಿಜಿಪಿ ವಾರ್ನಿಂಗ್
ನ್ಯಾಯಮೂರ್ತಿ ಕೆ.ಎಂ.ಜೋಸೆಫ್, ನ್ಯಾ.ವಿ.ರಾಮ ಸುಬ್ರಹ್ಮಣಿಯನ್ ಹಾಗೂ ನ್ಯಾ.ಬಿ.ವಿ.ನಾಗರತ್ನ ನೇತೃತ್ವದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ಪ್ರಕರಣದ ವಿಚಾರಣೆ ನಿಗದಿಯಾಗಿದೆ. ಆದರೆ, ಪೂರ್ವನಿಗದಿಯಂತೆ ಬುಧವಾರ ಪ್ರಕರಣ ವಿಚಾರಣೆಗೆ ಬರುವುದು ಅನುಮಾನವಾಗಿದೆ. ಏಕೆಂದರೆ, ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರು ಸಾಂವಿಧಾನಿಕ ಪೀಠವೊಂದರಲ್ಲಿನ ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಅವರು ಗಡಿ ವಿವಾದದ ಕುರಿತ ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ. ಅವರು ಬಾರದಿದ್ದರೆ ವಿಚಾರಣೆ ಮುಂದಕ್ಕೆ ಹೋಗಲಿದೆ. ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಗಡಿ ವಿವಾದವನ್ನು ಬಗೆಹರಿಸುವುದು ಕೋರ್ಟ್‌ನ ವ್ಯಾಪ್ತಿಗೆ ಬರುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಅಂತಿಮ ತೀರ್ಪು ಪ್ರಕಟವಾಗಬೇಕಿದೆ.
ದಿಲ್ಲೀಲಿ ವಕೀಲರೊಂದಿಗೆ ಗಡಿ ವಿಚಾರ ಚರ್ಚೆ: ಸಿಎಂ ಬೊಮ್ಮಾಯಿ
ಕರ್ನಾಟಕ-ಮಹಾರಾಷ್ಟ್ರ ಸಂಘರ್ಷ:
ಭಾಷಾವಾರು ಪ್ರಾಂತ್ಯ ರಚನೆಗಾಗಿ ಕೇಂದ್ರದಿಂದ 1953ರಲ್ಲಿ ಫಸಲ… ಅಲಿ ನೇತೃತ್ವದ ಸಮಿತಿ ರಚನೆಯಾಗಿತ್ತು. 1955ರಲ್ಲಿ ಅದು ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಬಳಿಕ, 1966ರಲ್ಲಿ ಈ ಸಂಬಂಧ ಮಹಾಜನ್ ಆಯೋಗ ರಚನೆ ಮಾಡಲಾಗಿತ್ತು. ಎರಡೂ ಆಯೋಗದ ವರದಿಗಳು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿವೆ. ಆದರೆ, ಈ ಎರಡೂ ವರದಿಗೆ ಮಹಾರಾಷ್ಟ್ರ ಆಕ್ಷೇಪ ಎತ್ತಿದ್ದು, 2004ರಲ್ಲಿ ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇನ್ನು, ಮಹಾಜನ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಯೂ ಇಲ್ಲ, ತಿರಸ್ಕಾರವನ್ನೂ ಮಾಡಿಲ್ಲ. ಆದರೆ, ಕರ್ನಾಟಕ ಸರ್ಕಾರವು ಗಡಿ ವಿವಾದ ಇತ್ಯರ್ಥ ಮಾಡುವ ಅಧಿಕಾರ ಕೋರ್ಟ್‌ಗೆ ಇಲ್ಲ, ಸಂಸತ್ತಿಗೆ ಮಾತ್ರ ಇದೆ ಎಂದು ವಾದ ಮಾಡುತ್ತ ಬಂದಿದೆ. 18 ವರ್ಷಗಳಿಂದ ಈ ಕುರಿತ ವ್ಯಾಜ್ಯ ನಡೆಯುತ್ತಿದೆ.
ಮಹಾರಾಷ್ಟ್ರದ ವಾದ ಏನು?
- ಭಾಷಾವಾರು ರಾಜ್ಯಗಳ ಪುನರ್ ವಿಂಗಡಣೆ ವೇಳೆ ಗಡಿಭಾಗದ ಮರಾಠಿಗರಿಗೆ ಅನ್ಯಾಯ
- ಬೆಳಗಾವಿ, ಬೀದರ, ಕಾರವಾರ, ಭಾಲ್ಕಿ, ನಿಪ್ಪಾಣಿ ಸೇರಿ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು
ಕರ್ನಾಟಕದ ವಾದ ಏನು?
- ಗಡಿ ವಿವಾದ ಸಂಬಂಧ ಮಹಾಜನ ವರದಿಯೇ ಅಂತಿಮ. ಅದನ್ನು ಯಥಾವತ್ ಜಾರಿಗೊಳಿಸಬೇಕು
- ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ. ಅದರ ಬಗೆಗಿನ ಗಡಿ ವಿವಾದ ಮುಗಿದ ಅಧ್ಯಾಯ
- ಗಡಿ ವಿವಾದಗಳು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ಸಂಸತ್ತಿನ ವ್ಯಾಪ್ತಿಗೆ ಮಾತ್ರ ಬರುತ್ತವೆ