ಶಾಲೆ ಶುಲ್ಕ ತಡವಾಗಿದ್ದಕ್ಕೆ ಬಡ್ಡಿ ವಸೂಲಿ ಆರೋಪ; ಪೋಷಕರಿಗೆ ಸ್ಪಷ್ಟೀಕರಣ ಕೊಟ್ಟ ಖಾಸಗಿ ಶಾಲೆ!
ಯಲಹಂಕದ ವಿಬ್‌ಗಯಾರ್ ಶಾಲೆಯಲ್ಲಿ ತಡವಾಗಿ ಶುಲ್ಕ ಪಾವತಿಸಿದ ಪೋಷಕರಿಂದ ಶೇ.3ರಷ್ಟು ಬಡ್ಡಿ ವಸೂಲಿ ಮಾಡಿರುವ ಆರೋಪ ಕೇಳಿಬಂದಿದ್ದು, ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಶುಲ್ಕ ಪಾವತಿಸಲು ವಿಳಂಬವಾದರೆ ತಿಂಗಳಿಗೆ ಶೇ.3ರಂತೆ ಬಡ್ಡಿ ವಿಧಿಸಲಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ.

ಬೆಂಗಳೂರು (ಫೆ.13): ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಬ್‌ಗಯಾರ್ ಶಾಲೆಯಲ್ಲಿ ತಡವಾಗಿ ಶುಲ್ಕದ ಕಂತು ಪಾವತಿಸಲು ಮುಂದಾದ ಕೆಲ ಮಕ್ಕಳ ಪೋಷಕರಿಂದ ಶೇಕಡ 3ರಷ್ಟು ಬಡ್ಡಿ ವಸೂಲಿಗೆ ಇಳಿದಿರುವ ಆರೋಪ ಕೇಳಿಬಂದಿದೆ.
ಶಾಲೆಯ ಕ್ರಮವನ್ನು ಖಂಡಿಸಿ ವಿವಿಧ ಪೋಷಕರು ಕೆಲ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸೇರಿ ಮಂಗಳವಾರ ಶಾಲೆಯ ಮುಂದೆ ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೋಷಕರ ಮನವೊಲಿಕೆಗೆ ಯತ್ನಿಸಿದ ಶಾಲಾ ಸಿಬ್ಬಂದಿ ಒಳಗೆ ಕೂತು ಶುಲ್ಕ ಸಮಸ್ಯೆ ಒರಿಹರಿಸಿಕೊಳ್ಳೋಣ ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ಒಪ್ಪದ ಪೋಷಕರು ಶಾಲಾ ಶುಲ್ಕಕ್ಕೆ ಬಡ್ಡಿ ವಿಧಿಸುವ ನಿಯಮ ಯಾವ ಕಾನೂನಲ್ಲಿದೆ ತೋರಿಸಿ. ನಿನ್ನೆ ಶುಲ್ಕ ಪಾವತಿಸಲು ಬಂದಾಗ ಬಡ್ಡಿ ಪಾವತಿಸಲೇಬೇಕೆಂದು ಹೇಳಿದಿರಿ. ಈಗ ಉಲ್ಟಾ ಹೊಡೆಯುತ್ತೀರಾ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪೋಷಕರು, ನಾವು ಐದು ಕಂತುಗಳಲ್ಲಿ ಶುಲ್ಕ ಪಾವತಿಸಬೇಕು. ಇದರಲ್ಲಿ ಮೊದಲ ಎರಡು ಕಂತುಗಳನ್ನು ಶಾಲೆ ಆರಂಭಕ್ಕೆ ಮೊದಲೇ ಅಂದರೆ ಮಾರ್ಚ್‌ನಲ್ಲೇ ಪಡೆದುಕೊಂಡಿರುತ್ತಾರೆ. ನಂತರ ಹಂತ ಹಂತವಾಗಿ ಜನವರಿ ವೇಳೆಗೆ ಉಳಿದ ಮೂರು ಕಂತುಗಳನ್ನು ಪಾವತಿಸಬೇಕು. ಇದು ತಡವಾಗಿದ್ದಕ್ಕೆ ತಿಂಗಳಿಗೆ ಶೇ.3ರಂತೆ ಬಡ್ಡಿ ವಿಧಿಸಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ಬಳಿಕ ನಾಲ್ಕೇ ದಿನದಲ್ಲಿ 80 ಸಾವಿರ ಪ್ರಯಾಣಿಕರು ಕಡಿಮೆ!
ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಕೆಲ ವಿದ್ಯಾರ್ಥಿಗಳ ಪೋಷಕರ ಪರವಾಗಿ ಮಾತನಾಡಿದ ಲೋಕೇಶ್ ಎನ್ನುವವರು, ನಾವು ಒಬ್ಬೊಬ್ಬರೂ ವಾರ್ಷಿಕ ಪ್ರತಿ ಮಗುವಿಗೆ ₹1.25 ಲಕ್ಷ ಶುಲ್ಕ ಪಾವತಿಸಬೇಕಿತ್ತು.(ವ್ಯಾನ್ ಶುಲ್ಕ ಹೊರತುಪಡಿಸಿ) ಇದರಲ್ಲಿ ₹50 ಸಾವಿರ ಕಳೆದ ಮಾರ್ಚ್‌ನಲ್ಲೇ ಪಾವತಿಸಿದ್ದೆವು. ಉಳಿದ ಮೂರು ಕಂತುಗಳಲ್ಲಿ ₹75 ಸಾವಿರಗಳನ್ನು ಪಾವತಿಸಬೇಕಿತ್ತು. ಅದನ್ನು ಈಗ ಒಟ್ಟಿಗೆ ಪಾವತಿಸಿದ್ದೇನೆ. ಆದರೆ, ಇದಕ್ಕೆ ಒಪ್ಪದ ಆಡಳಿತ ಮಂಡಳಿ ತಿಂಗಳಿಗೆ ಶೇ.3ರ ಬಡ್ಡಿಯಂತೆ ಸುಮಾರು ₹10 ಸಾವಿರ ಬಡ್ಡಿ ಮೊತ್ತವನ್ನೇ ಸೇರಿಸಿ ಶುಲ್ಕ ಪಾವತಿಸಲು ಕೇಳುತ್ತಿದೆ. ಇದು ಅನ್ಯಾಯ. ಈ ರೀತಿ ಬಡ್ಡಿ ವಿಧಿಸಲು ಕಾನೂನಲ್ಲಿ ಅವಕಾಶವಿದೆಯಾ ಎಂದು ಕೇಳಿದ್ದಕ್ಕೆ ಶಾಲೆಯವರು ಇದೆ ಎಂದು ಇ-ಮೇಲ್ ಮೂಲಕ ಉತ್ತರಿಸಿದ್ದಾರೆ. ಈ ಸಂಬಂಧ ಸರ್ಕಾರ ಪರಿಶೀಲಿಸಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ರಾಜ್ಯಪಾಲರಿಂದ ಕಡೆಗೂ ಅಂಕಿತ ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ ಪಾಸ್ | ಸುಗ್ರೀವಾಜ್ಞೆಯಲ್ಲಿ ಏನಿದೆ? ರಾಜ್ಯಪಾಲರ ಸಲಹೆಗಳೇನು?
ಬೆಂಗಳೂರು ಯಲಹಂಕ ವಿಬ್‌ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ ಸ್ಪಷ್ಟನೆ:
ಪ್ರತಿಯೊಬ್ಬ ವಿದ್ಯಾರ್ಥಿಗೆ ಒಳ್ಳೆಯ ಕಲಿಕಾ ವಾತಾವರಣವನ್ನು ಒದಗಿಸಲು ವಿಬ್‌ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ 3 ತ್ರೈಮಾಸಿಕದಲ್ಲಿ ಶುಲ್ಕ ಕಟ್ಟದ ಹೊರತಾಗಿಯೂ ಮುಕ್ಕಾಲು ಭಾಗದಷ್ಟು ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸಿದ್ದಾರೆ. ವರ್ಷವಿಡೀ ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳು ಮತ್ತು ಶಾಲಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಪ್ರತೀ ಹಂತದಲ್ಲಿಯೂ ನಾವು ಅರ್ಥೈಸಿಕೊಂಡು ಮತ್ತು ಹೊಂದಾಣಿಕೆಯನ್ನು ಮಾಡಿಕೊಂಡು ಹಲವು ಬಾರಿ ಶುಲ್ಕ ಕಟ್ಟದ ಪೋಷಕರನ್ನು ಭೇಟಿಯಾಗಲು ಕರೆದಿದ್ದೆವು. ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದೆ.