ಮನೆ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ವ್ಯಕ್ತಿ!
ಮನೆಯ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ಇಲ್ಲೊಬ್ಬ ವ್ಯಕ್ತಿ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ. ಅರೇ, ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೂ ಈ ವ್ಯಕ್ತಿ ಆಸ್ಪತ್ರೆ ಸೇರಿದ್ದಕ್ಕೂ ಏನು ಸಂಬಂಧ ಅಂತಿರಾ ? ಈ ಸ್ಟೋರಿ ನೋಡಿ.
ಕಲಬುರಗಿ (ಸೆ.22): ಮನೆಯ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ಇಲ್ಲೊಬ್ಬ ವ್ಯಕ್ತಿ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ. ಅರೇ, ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೂ ಈ ವ್ಯಕ್ತಿ ಆಸ್ಪತ್ರೆ ಸೇರಿದ್ದಕ್ಕೂ ಏನು ಸಂಬಂಧ ಅಂತಿರಾ ? ಈ ಸ್ಟೋರಿ ನೋಡಿ.
ಕೈ - ಕಾಲು ಮುರಿದುಕೊಂಡು ಆಸ್ಪತ್ರೆ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿರುವ ಈ ವ್ಯಕ್ತಿಯನ್ನು ನೋಡಿ. ಸಣ್ಣ ಸಣ್ಣ ವಿಷಯವನ್ನೂ ದೊಡ್ಡದು ಮಾಡಿಕೊಂಡ್ರೆ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಇವರೇ ಜೀವಂತ ಸಾಕ್ಷಿ. ಇವರು ನಿನ್ನೆಯವರೆಗೂ ಚೆನ್ನಾಗಿಯೇ ಇದ್ರು. ಮನೆಯ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ಇವರು ಇದೀಗ ಈ ಪರಿಸ್ಥಿತಿಯಲ್ಲಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಮಹಾಂತೇಶ ಎನ್ನುವಾತನೇ ಗಾಯಗೊಂಡು ಆಸ್ಪತ್ರೆ ಸೇರಿರುವ ವ್ಯಕ್ತಿ.
Gruha Jyothi Scheme: ಮೊದಲ ಶೂನ್ಯ ಕರೆಂಟ್ ಬಿಲ್ ವಿತರಣೆ: ಗ್ರಾಹಕರು ಫುಲ್ ಖುಷ್
ಮನೆಯ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದೆ ಅಂತ ಮಹಾಂತೇಶ, ಜೆಸ್ಕಾಂ ಅಧಿಕಾರಿಗಳ ಜೊತೆ ಜಗಳಕ್ಕಿಳಿದಿದ್ದ. ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಕಾರಣ ಜೆಸ್ಕಾಂ ಎಇಇ ಚಿದಾನಂದ ಎನ್ನುವವರು ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಮಹಾಂತೇಶನನ್ನು ಅರೆಸ್ಟ್ ಸಹ ಮಾಡಿದರು. ನ್ಯಾಯಾಂಗ ವಶಕ್ಕೆ ಒಪ್ಪಿಸುವ ಮುನ್ನ ಊಟಕ್ಕೆ ಅಂತ ಕಲಬುರಗಿ ನಗರದ ಹೋಟೆಲ್ ವೊಂದಕ್ಕೆ ಕರೆದೊಯ್ಯಲಾಗಿತ್ತು. ಆಗ ಮೊದಲ ಮಹಡಿಯ ಹೋಟೆಲ್ ನ ಕಿಚನ್ ರೂಮ್ ನಿಂದ ಕೆಳಗೆ ಹಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿ ಈ ರೀತಿ ಕೈ ಕಾಲು ಮುರಿದುಕೊಂಡಿದ್ದಾನೆ ಈ ಮಹಾಂತೇಶ. ಆದ್ರೆ ನಾನು ಓಡಿ ಹೋಗಲು ಯತ್ನಿಸಿಲ್ಲ, ಆಯ ತಪ್ಪಿ ಬಿದ್ದಿದ್ದೇನೆ ಅಂತಾನೆ ಮಹಾಂತೇಶ.
ಈ ಸಂಬಂಧ ಆರೋಪಿ ಮಹಾಂತೇಶನ ಮೇಲೆ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಒಂದು ತಿಂಗಳ ಮನೆ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ತಾಳ್ಮೆ ಕಳೆದುಕೊಂಡ ಕಾರಣ ಮಹಾಂತೇಶ ಅವರ ಜೀವನದಲ್ಲಿ ಆಗಬಾರದ್ದೆಲ್ಲಾ ಆಗಿ ಹೋಗಿದೆ.
ಮೈ ಮೇಲೆ ಎರಡು ಕೇಸ್ ಗಳು, ಇನ್ನೊಂದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರುವ ಪರಿಸ್ಥಿತಿ. ತಾಳ್ಮೆ ಕಳೆದುಕೊಂಡು ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ. ಅದಕ್ಕೆ ಹೇಳೋದು ತಾಳಿದವನು ಬಾಳಿಯಾನು ಅಂತ. ಅಲ್ಲವೇ ?
ಕ್ಯಾಮರಾಮನ್ ಇಂದ್ರಜೀತ್ ಜೊತೆ ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ