ಲಕ್ಷಾಂತರ ಅಭಿಮಾನಿಗಳು ಅಪ್ಪುವಿನಂಥ ಮಗ ಹುಟ್ಟಲಿ ಎಂದು ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದಾರೆ. ಹುಟ್ಟಿದ ಮಗುವಿಗೆ ಅಪ್ಪು ಸಮಾಧಿ ಮುಂದೆಯೇ  ಅಪ್ಪು, ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡುತ್ತಿದ್ದಾರೆ. ಯಾದಗಿರಿ ಮೂಲದ ದಂಪತಿ 22 ದಿನದ ಮಗುವಿನೊಂದಿಗೆ ಅಪ್ಪು ಸಮಾಧಿ ಬಳಿ ತೆರಳಿ ತಮ್ಮ ಮಗುವಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ.

ಬೆಂಗಳೂರು (ಅ.29) : ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ ವರ್ಷ ಉರುಳಿತು. ಪುನೀತ್ ರನ್ನು ಪ್ರೀತಿಸುತ್ತಿದ್ದ ಅಭಿಮಾನಿಗಳ ದುಃಖ ಇನ್ನೂ ನಿಂತಿಲ್ಲ. ಇಂದಿಗೂ ಪುನೀತ್ ಅವರ ಸಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮನೆ, ಅಂಗಡಿಗಳಲ್ಲಿ ದೇವರು ಕೂಡುವ ಜಾಗದಲ್ಲಿ ಪುನೀತ್ ರಾಜಕುಮಾರ್ ಕುಳಿತಿದ್ದಾರೆ. ಅಪ್ಪು ಅಭಿಮಾನಿಗಳು ದಿನನಿತ್ಯ ಪುನೀತ್‌ರನ್ನು ಪೂಜಿಸುತ್ತಿದ್ದಾರೆ. ಅಭಿಮಾನಿಗಳ ಕಣ್ಣಿಗೆ ಪುನೀತ್ ಸಾಕ್ಷಾತ್ ದೇವರಾಗಿದ್ದಾರೆ. ಪುನೀತ್ ಭಾವಚಿತ್ರ ಎಲ್ಲೆ ಕಂಡರೂ ಮಕ್ಕಳಿಂದ ಮುದುಕರವರೆಗೂ ಭಾವಚಿತ್ರಕ್ಕೆ ಕೈಮುಗಿಯುತ್ತಾರೆ. ಹುಟ್ಟಿದರೆ ಇಂಥ ಮಗ ಹುಟ್ಟಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. 

ಸಾವಿನಲ್ಲೂ ಸಾರ್ಥಕತೆ ಮೆರೆದ 7 ವರ್ಷದ ಬಾಲಕ: ಪುನೀತ್‌ರಂತೆ ಅಂಧರ ಬಾಳಿಗೆ ಬೆಳಕಾದ ಆರ್ಯನ್‌

ಇನ್ನು ಮದುವೆಯಾದವರು, ತಮಗೆ ಅಪ್ಪುವಿನಂಥ ಮಗ ಹುಟ್ಟಲಿ ಎಂದು ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದಾರೆ. ಅಷ್ಟೇ ಅಲ್ಲ, ಗಂಡು ಮಗು ಹುಟ್ಟಿದರೆ ಸೀದಾ ಅಪ್ಪು ಸಮಾಧಿಗೆ ಭೇಟಿ ನೀಡಿ. ಸಮಾಧಿ ಮುಂದೆಯೇ ತಮ್ಮ ಮಗುವಿಗೆ ಅಪ್ಪು, ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡಿರುವ, ಮಾಡುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.

ಇದೀಗ ಅಂಥದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 22 ದಿನದ ಹಸುಗೂಸು ಮಗುವಿನೊಂದಿಗೆ ಅಪ್ಪು ಸಮಾಧಿ ಬಳಿ ಬಂದಿರುವ ದಂಪತಿ. ಸಮಾಧಿ ಮುಂದೆ ತಮ್ಮ ಮಗುವಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಇಂದಿಗೆ ಪುನೀತ್ ರಾಜಕುಮಾರ್ ಮೃತಪಟ್ಟು ಒಂದು ವರ್ಷ ಆಗಿರುವಾಗಲೇ, 22 ದಿನದ ಹಿಂದೆ ಹುಟ್ಟಿದ ಮಗುವಿಗೆ ಈ ದಂಪತಿ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಅದು ಅಪ್ಪು ಸಮಾಧಿ ಮುಂದೆಯೇ ನಾಮಕರಣ ಮಾಡಿದ್ದಾರೆ.

ಖುದ್ದು ಸಾಧುಕೋಕಿಲ ಅವರು ಮಗುವಿಗೆ ನಾಮಕರಣ ಮಾಡಿದ್ದಾರೆ. ಕೆಂಗೇರಿಯಲ್ಲಿ ವಾಸವಾಗಿರುವ ಯಾದಗಿರಿ ಮೂಲದ ದಂಪತಿಗೆ ಗಂಡು ಮಗು ಆಗಿದೆ. ಅವರು ಪುನೀತ್ ರಾಜಕುಮಾರ ಅವರನ್ನು ಅಪಾರ ಪ್ರೀತಿ, ಅಭಿಮಾನದಿಂದ ಕಾಣುತ್ತಿದ್ದವರು. ಅಪ್ಪು ಮೃತಪಟ್ಟಾಗ ತೀವ್ರ ದುಃಖಪಟ್ಟವರು. ಈ ದಂಪತಿಗಳಿನ್ನೂ ಅಪ್ಪು ಅಗಲಿಕೆಯ ನೋವಿನಿಂದ ಹೊರಬಂದಿಲ್ಲ. ಇದೀಗ ತಮ್ಮ ಮಗುವಿಗೆ ಅಪ್ಪು ಹೆಸರನ್ನೇ ನಾಮಕರಣ ಮಾಡಿದ್ದಾರೆ. 

Puneeth Rajkumar: ಇಂದು ಪುನೀತ್ ಪುಣ್ಯಸ್ಮರಣೆ: ಅಪ್ಪು ಸಮಾಧಿ ಬಳಿ ಜನಸಾಗರ

ಹೀಗೆ ಅಪ್ಪು ಸಮಾಧಿಗೆ ಬಂದು ಮಗುವಿಗೆ ನಾಮಕರಣ ಮಾಡುತ್ತಿರುವುದು ಇದೇ ಮೊದಲಲ್ಲ. ದಿನನಿತ್ಯ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮ ಮಗುವಿಗೆ ಅಪ್ಪು ಹೆಸರು ನಾಮಕರಣ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮನೆ ಮನೆಯಲ್ಲೂ ಅಪ್ಪು ಜನ್ಮವೆತ್ತುತ್ತಿದ್ದಾರೆ!