ಬೆಂಗಳೂರು(ಆ.19): ಸಾರ್ವಜನಿಕರೇ, ಕೊರೋನಾದಿಂದಾಗಿ ಸಂಚಾರ ನಿಯಮ ಉಲ್ಲಂಘಿಸಿದರೂ ಪೊಲೀಸರು ದಂಡ ಹಾಕುತ್ತಿಲ್ಲ ಎಂದು ನಿರ್ಲಕ್ಷ್ಯ ತೋರಿದರೆ ಜೋಕೆ..!

ಸಂಚಾರ ನಿಯಮ ಉಲ್ಲಂಘನೆ ನೋಟಿಸ್‌ ನಿಮ್ಮ ಮನೆಗೆ ಬಾಗಿಲಿಗೆ ಬರಲಿದೆ. ಕೊರೋನಾ ನಡುವೆಯೂ ಸಿಲಿಕಾನ್‌ ಸಿಟಿ ಸಂಚಾರ ಪೊಲೀಸರು ಬರೋಬ್ಬರಿ ಸಂಚಾರ ನಿಯಮ ಉಲ್ಲಂಘಿಸಿದ ಐದು ಲಕ್ಷ ಪ್ರಕರಣ ದಾಖಲಿಸಿದ್ದು, ಇದರ ಒಟ್ಟು ದಂಡದ ಮೊತ್ತ 96 ಕೋಟಿಗೂ ಹೆಚ್ಚು.

ದೇಶದೆಲ್ಲೆಡೆ ಕೊರೋನಾ ಸೋಂಕು ಹೆಚ್ಚು ಸದ್ದು ಮಾಡಿದಾಗ ಸಂಚಾರ ಪೊಲೀಸರು ಕೂಡ ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿತ್ತು. ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ತಡೆದು ದಂಡ ಹಾಕುವ ಗೋಜಿಗೆ ಪೊಲೀಸರು ಹೋಗಿಲ್ಲ. ಆದರೂ ಜಂಕ್ಷನ್‌ಗಳಲ್ಲಿ ನಿಂತು ಕೆಲಸ ಮಾಡಿದ ಪೊಲೀಸರು ಸಂಚಾರ ಕಣ್ಗಾವಲು ಕ್ಯಾಮೆರಾ, ಪಬ್ಲಿಕ್‌ ಐ ಇನ್ನಿತರೆಗಳ ಸಹಾಯದಿಂದ ದೂರು ದಾಖಲಿಸಲಾಗಿದೆ.

ಎಣ್ಣೆ ಮತ್ತಿಗೆ ಟ್ರಾಫಿಕ್ ಪೇದೆಯಾದ ಧಾರವಾಡ ಕುಡುಕ..!

ಸಿಗ್ನಲ್‌ ಜಂಪಿಂಗ್‌ ಮಾಡಿದವರ ವಿರುದ್ಧ 32,677 ಪ್ರಕರಣ ದಾಖಲಿಸಿದರೆ, ಏಕಮುಖ ಸಂಚಾರ- 17,254, ಮೊಬೈಲ್‌ ಬಳಕೆ- 14011, ಜೀಬ್ರಾ ಕ್ರಾಸ್‌ ಮೇಲೆ ವಾಹನ ನಿಲುಗಡೆ- 10,723, ನೋ ಪಾರ್ಕಿಂಗ್‌- 7225, ಅತಿವೇಗ ಚಾಲನೆ- 609, ತ್ರಿಬಲ್‌ ರೈಡಿಂಗ್‌- 2624, ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ- 386, ನೋಂದಣಿ ಫಲಕ ಇಲ್ಲದಿರುವುದು- 12,289 ಪ್ರಕರಣ ಸೇರಿದಂತೆ ಒಟ್ಟು 5,42,144 ದಾಖಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌.ರವಿಕಾಂತೇಗೌಡ ಅವರು ತಿಳಿಸಿದ್ದಾರೆ.

ಹೆಲ್ಮೆಟ್‌ ಧರಿಸದೇ ಸಂಚಾರ ಮಾಡಿದ ಸವಾರರ ವಿರುದ್ಧ ಪ್ರಕರಣ ದಾಖಲಿಸಿ .74,46,673 ದಂಡ ವಸೂಲಿ ಮಾಡಿದರೆ, ಹಿಂಬದಿ ಸವಾರ ಹೆಲ್ಮೆಟ್‌ ಧರಿಸದೆ ಚಾಲನೆ ಮಾಡಿದವರ ವಿರುದ್ಧ .42,57,88 ದಂಡ ಸಂಗ್ರಹಿಸಲಾಗಿದೆ. ಈ ಪೈಕಿ 3,95,94,500 ದಂಡ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಂಚಾರ ಪೊಲೀಸರು ಹೊಂದಿರುವ ಡಿಜಿಟಲ್‌ ಕ್ಯಾಮೆರಾಗಳ ಮೂಲಕ (ಡಿಜಿಟಲ್‌ ಎಫ್‌ಟಿವಿಆರ್‌), ಸಾರ್ವಜನಿಕರು ಗಮನಿಸಿದ ಸಂಚಾರ ನಿಯಮ ಉಲ್ಲಂಘನೆಗಳ ದೂರುಗಳ ಛಾಯಾ ಚಿತ್ರ ಸಮೇತ ‘ಪಬ್ಲಿಕ್‌ ಐ’ ಆ್ಯಪ್‌ ಮೂಲಕ ಇಷ್ಟುಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಟ್ರಾಫಿಕ್‌ ಸಿಗ್ನಲ್‌ ದಾಟುವ ಮತ್ತು ಅತಿ ವೇಗವಾಗಿ ಚಲಿಸಿ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಸ್ವಯಂ ಚಾಲಿತವಾಗಿ ಪ್ರಕರಣಗಳನ್ನು ರೆಡ್‌ಲೈಟ್‌ ವಯಲೇಷನ್‌ ಡಿಟೆಕ್ಷನ್‌ ಕ್ಯಾಮೆರಾದ ಸಹಾಯದಿಂದ ಹಾಕಲಾಗಿದೆ.

ಡಿಜಿ ಟ್ಯಾಬ್‌, ಫೇಸ್‌ಬುಕ್‌, ಟ್ವಿಟರ್‌ ಮೂಲಕ ಬಂದ ಮಾಹಿತಿ ಆಧಾರಿಸಿ ದೂರು ದಾಖಲಿಸಲಾಗಿದೆ. ಲಾಕ್‌ಡೌನ್‌ ಪ್ರಾರಂಭವಾದ ಮಾ.22ರಿಂದ ಜು.30ರ ತನಕ ಒಟ್ಟು 5,42,144 ಪ್ರಕರಣ ದಾಖಲಾಗಿದ್ದು, ಒಟ್ಟು ಮೊತ್ತ 96,26,74,100 ಸಂಗ್ರಹವಾಗಿದೆ. ಸಂಚಾಯ ನಿಯಮ ಉಲ್ಲಂಘಿಸಿದ ಮಾಲಿಕರಿಗೆ ನೋಟಿಸ್‌ ನೀಡಿ ಬಳಿಕ ದಂಡ ಸಂಗ್ರಹಿಸಲಾಗಿದೆ. ದಂಡ ಸಂಗ್ರಹಿಸುವ ಪ್ರಕ್ರಿಯೆ ಮುಂದುವರೆದಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸಂಚಾರ ನಿಯಮ ಉಲ್ಲಂಘಿಸಿದರೆ ಹೆಚ್ಚಿನ ರೀತಿಯಲ್ಲಿ ದಂಡ ಹಾಕಲಾಗುವುದು ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದಂಡ ವಿಧಿಸಿದ ಪ್ರಕರಣಗಳು:

*ದ್ವಿಚಕ್ರ ವಾಹನ ಚಾಲನೆ: 7,44,673
*ಹಿಂಬದಿ ಸವಾರ ಹೆಲ್ಮೆಟ್‌ ಧರಿಸದಿರುವುದು: 4,25,788
*ಟ್ರಾಫಿಕ್‌ ಸಿಗ್ನಲ್‌: 1,37,328
*ಏಕಮುಖ ಸಂಚಾರ: 60,673