ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಗೆ ಒಂದು ಗಂಟೆಯಲ್ಲಿ ಸಹಿ ಹಾಕಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಆದರೆ, ಆ ಕೆಲಸವನ್ನು ಅವರು ಇದುವರೆಗೂ ಯಾಕೆ ಮಾಡಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
ಚನ್ನರಾಯಪಟ್ಟಣ (ಜು.21): ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಗೆ ಒಂದು ಗಂಟೆಯಲ್ಲಿ ಸಹಿ ಹಾಕಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಆದರೆ, ಆ ಕೆಲಸವನ್ನು ಅವರು ಇದುವರೆಗೂ ಯಾಕೆ ಮಾಡಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ. ಯೂತ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ನಡೆದ ಯುವ ಪರ್ವ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಬೇಕಾದರೆ ಕೇಂದ್ರದಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.
ಮೋದಿ ಪ್ರಧಾನಿಯಾದರೆ ನಾನೇ ಮೋದಿ ಕೈ ಹಿಡಿದು, ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇನೆ. ಮೋದಿಯಿಂದ ಮಾತ್ರ ಮೇಕೆದಾಟು ಯೋಜನೆ ಸಾಧ್ಯ ಎಂದಿದ್ದರು. ಆದರೆ, ಇಷ್ಟು ವರ್ಷವಾದರೂ ಅವರು ಯೋಜನೆಗೆ ಸಹಿ ಹಾಕಿಸಿಲ್ಲ. ಜೆಡಿಎಸ್‌ನವರು ಅಧಿಕಾರದ ಆಸೆಗೆ ಬಿದ್ದು, ಬಿಜೆಪಿಯವರ ಬಳಿ ಗುಲಾಮಗಿರಿ ಮಾಡುತ್ತಿದ್ದಾರೆ. ಇದು ಹೆಚ್ಚು ದಿನ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್‌ಗಳಿಗೆ ತರಾಟೆ: ಬೆಂಗಳೂರು ನಗರ ಭಾಗದಲ್ಲಿ ಭೂ ಸುರಕ್ಷಾ ಯೋಜನೆಯಡಿ ಆಸ್ತಿ ದಾಖಲೆಗಳನ್ನು ಡಿಜಟಲೀಕರಣಕ್ಕೆ ನಿರ್ಲಕ್ಷ್ಯತೋರಿದ ಯಲಹಂಕ ಹಾಗೂ ಆನೇಕಲ್ ತಹಸೀಲ್ದಾರ್‌ಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ‘ನಿಮಗೆ ಗತಿ ಕಾಣಿಸಬೇಕಾ’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಇಬ್ಬರೂ ತಹಸೀಲ್ದಾರ್‌ಗಳಿಗೂ ನೋಟಿಸ್ ಜಾರಿ ಮಾಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಭೂ ಸುರಕ್ಷಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೆಂಗಳೂರು ನಗರ-ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ, ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾವೂ ಸಹಿಸಿಕೊಂಡಿದ್ದೇನೆ. ಇನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯಲಹಂಕ ತಹಸೀಲ್ದಾರ್ ಕಚೇರಿಯಲ್ಲಿ ಡಿಜಿಟಲೀಕರಣಕ್ಕೆ ಹಿನ್ನಡೆಡೆ ಉಂಟಾಗಿರುವ ಬಗ್ಗೆ ನೆಟ್‌ವರ್ಕ್ ಸಮಸ್ಯೆ, ಬಯೋಮೆಟ್ರಿಕ್ ಸಾಧನಗಳ ಕೊರತೆ ನೆಪ ನೀಡಿದ ತಹಸೀಲ್ದಾರ್ ಅವರಿಗೆ, ‘ನೆಪಗಳನ್ನು ಹೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ?
ಬೆಂಗಳೂರಿನಲ್ಲಿರುವ ನಿಮಗೆ ಮಾತ್ರ ನೆಟ್‌ವರ್ಕ್ ಸಮಸ್ಯೆ ಇದೆ. ಕಚೇರಿಯಲ್ಲಿರಲು ಹಾಗೂ ಕೆಲಸ ಮಾಡಲು ನಿಮಗೆ ಏನು ರೋಗ ಅಂತಾದ್ರೂ ಹೇಳಿ’ ಎಂದು ತರಾಟೆಗೆ ತೆಗೆದುಕೊಂಡರು. ಆನೇಕಲ್ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಅವರಿಗೆ ತರಾಟೆಗೆ ತೆಗೆದುಕೊಂಡ ಸಚಿವರು, ನನ್ನ ಕಿವಿಯಲ್ಲಿ ದೊಡ್ಡ ದಾಸವಾಳ ಹೂ ಕಾಣುತ್ತಿದೆಯೇ? ನೀವು ಇದನ್ನು ಉದ್ದೇಶಪೂರ್ಕವಾಗಿ ನಿರ್ಲಕ್ಷಿಸಿದ್ದೀರಿ. ನೀವು ಸರ್ಕಾರದ ಕೆಳಗಡೆ ಇದ್ದೀರೋ ಅಥವಾ ಸರ್ಕಾರವೇ ನಿಮ್ಮ ಕೆಳಗಡೆ ಇದೆಯೋ? ಎಂದು ಕಿಡಿ ಕಾರಿದರು.
