ಇನ್ನು ಮುಂದೆ ಹೋಬಳಿ ಮಟ್ಟದಲ್ಲಿರುವ ನಾಡಕಚೇರಿಗಳಲ್ಲೂ ದಾಖಲೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬೆಂಗಳೂರು (ಜು.19): ಆಸ್ತಿ ದಾಖಲೆಗಳಿಗಾಗಿ ಜನರು ಅಲೆದಾಡುವುದನ್ನು ತಪ್ಪಿಸಲು ಜಾರಿಗೆ ತಂದಿರುವ ಭೂ ಸುರಕ್ಷಾ ಯೋಜನೆಯಡಿ ಆಸ್ತಿ ದಾಖಲೆಗಳನ್ನು ಡಿಜಟಲೀಕರಣ ಮಾಡಿ ಆನ್‌ಲೈನ್‌ ಮೂಲಕ ವಿತರಿಸಲಾಗುತ್ತಿದೆ. ಇನ್ನು ಮುಂದೆ ಹೋಬಳಿ ಮಟ್ಟದಲ್ಲಿರುವ ನಾಡಕಚೇರಿಗಳಲ್ಲೂ ದಾಖಲೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಕಾಸಸೌಧದಲ್ಲಿ ಭೂಸುರಕ್ಷಾ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದು ಗೊತ್ತಿಲ್ಲದವರಿಗೂ ಡಿಜಿಟಲ್‌ ದಾಖಲೆ ಸಿಗಲು ನಾಡ ಕಚೇರಿಗಳಲ್ಲಿ ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ (ಎಜೆಎಸ್‌ಕೆ) ವ್ಯವಸ್ಥೆ ಮಾಡಲಾಗಿದೆ. ಜನ ಈ ಕೇಂದ್ರಗಳಿಗೆ ಭೇಟಿ ನೀಡಿ ನೇರವಾಗಿ ದಾಖಲೆ ಪಡೆಯಬಹುದು ಎಂದರು.

ಯೋಜನೆಯಡಿ ಈಗಾಗಲೇ 32.64 ಕೋಟಿ ದಾಖಲೆಗಳ ಸ್ಕ್ಯಾನ್ ಮಾಡಲಾಗಿದೆ. ಮುಂದಿನ ಹಂತವಾಗಿ ಅರ್ಜಿ ಸಲ್ಲಿಸಿದವರಿಗೆ ಆನ್‌ಲೈನ್‌ನಲ್ಲೇ ಜನರಿಗೆ ಸಿಗುವ ಸೌಲಭ್ಯ ಕೂಡಾ ಈ ತಿಂಗಳಿಂದ ಆರಂಭವಾಗಿದೆ. ಈಗಾಗಲೇ ಸುಮಾರು ಎರಡು ಲಕ್ಷ ದಾಖಲೆಗಳ ಪುಟಗಳನ್ನು ಆನ್‌ಲೈನ್‌ ಮೂಲಕ ಜನರಿಗೆ ವಿತರಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಯೋಜನೆ ಅಡಿ ರಾಜ್ಯದ ಒಟ್ಟಾರೆ 100 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 17 ತಾಲೂಕುಗಳ 32.64 ಕೋಟಿ ದಾಖಲೆಗಳ ಸ್ಕ್ಯಾನ್ ಕಾರ್ಯ ಪೂರ್ಣಗೊಂಡಿದೆ. ಉಳಿದವುಗಳನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ ಎಂದರು.

ಮುಂದಿನ ಹಂತದಲ್ಲಿ ಗ್ರಾಪಂಗೂ ವಿಸ್ತರಣೆ: ನಾಡ ಕಚೇರಿಗಳಲ್ಲಿ ಉತ್ತಮ ಸ್ಪಂದನೆ ದೊರೆತರೆ, ಮುಂಬರುವ ದಿನಗಳಲ್ಲಿ ಈ ಸೇವೆಗಳನ್ನು ಗ್ರಾಪಂ ಮಟ್ಟಕ್ಕೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಅಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್‌ಗಳು ಮೂಲಕ ಜನ ಡಿಜಿಟಲ್ ದಾಖಲೆಗಳನ್ನು ಪಡೆಯಬಹುದು. ರೆಕಾರ್ಡ್ ರೂಂ ಮತ್ತಿತರ ಕಡೆ ದಾಖಲೆಗಳಿಗಾಗಿ ಅಲೆದಾಡುವುದನ್ನು ತಪ್ಪಿಸಿ, ತಮ್ಮ ಆಸ್ತಿ ದಾಖಲೆಗಳನ್ನು ತಾವೇ ಬೆರಳ ತುದಿಯಲ್ಲಿ ಪಡೆಯುವಂತೆ ಮಾಡುವುದು ಯೋಜನೆಯ ಮೂಲ ಆಶಯ ಎಂದು ಕೃಷ್ಣಬೈರೇಗೌಡ ಹೇಳಿದರು.

ದಾಖಲೆಗಳಿಗಾಗಿ ಇಲ್ಲಿ ಅರ್ಜಿ ಸಲ್ಲಿಸಿ: ಡಿಜಿಟಲ್ ದಾಖಲೆಗಳನ್ನು www.recordroom.karnataka.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.

ಐಟಿ ರಾಜಧಾನಿಯಲ್ಲೇ ಹಿನ್ನಡೆ: ದಾಖಲೆಗಳನ್ನು ಡಿಜಟಲೀಕರಣ ಮಾಡುವ ಪ್ರಕ್ರಿಯೆಯಲ್ಲಿ ಯಾದಗಿರಿ ಸೇರಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಸಾಧನೆ ಆಗಿದೆ. ಆದರೆ ದೇಶದ ಐಟಿ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯೇ ಹಿಂದೆ ಬಿದ್ದಿದೆ. ತಿಂಗಳಲ್ಲಿ ರಾಜ್ಯದ ಇತರೆಡೆಯಂತೆಯೇ ಈ ಎರಡೂ ಜಿಲ್ಲೆಗಳಲ್ಲೂ ದಾಖಲೆಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಪ್ರಗತಿ ಸಾಧಿಸಬೇಕು. ಇಲ್ಲದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು. ಈಗಾಗಲೇ ಯೋಜನೆ ಪ್ರಗತಿ ಕುಂಠಿತಗೊಳ್ಳಲು ಕಾರಣವಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಕೂಡ ನೀಡಲಾಗಿದೆ ಎಂದು ಹೇಳಿದರು.