ಮೂಡಬಿದಿರೆಯ ಪುಚ್ಚೆಮೊಗರು ಗ್ರಾಮದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಸಾಗಿಸುವಾಗ ಕಾಲು ಸಂಕ ಕುಸಿದು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೈವದ ಪಲ್ಲಕ್ಕಿ ಸಮೇತ ಪೂಜಾರಿಗಳು ಕೆಳಗೆ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಂಡಾರ ಸಾಗುವ ವೇಳೆ ಕುಸಿದ ಕಾಲು ಸಂಕ

ಮಂಗಳೂರು: ದೈವದ ಭಂಡಾರ ಸಾಗುವ ವೇಳೆ ಸಣ್ಣ ಕಾಲು ಸಂಕ ಕುಸಿದು ಬಿದ್ದ ಪರಿಣಾಮ 8 ಜನ ಗಂಭೀರ ಗಾಯಗೊಂಡಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬ ಗ್ರಾಮದಲ್ಲಿ ನಡೆದಿದೆ. ದೈವದ ಪೂಜಾರಿಗಳು ಸಂಪ್ರದಾಯದಂತೆ ದೊಂದಿ, ಕೊಡೆ, ಪಲ್ಲಕ್ಕಿ ಮುಂತಾದವುಗಳೊಂದಿಗೆ ಭಂಡಾರ ಹೊತ್ತುಕೊಂಡು ಹೋಗುತ್ತಿದ್ದಾಗ ಈ ಸಣ್ಣ ಕಾಲು ಸೇತುವೆ ಕುಸಿದು ಬಿದ್ದಿದ್ದು, ದೈವದ ಪೂಜಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

8 ಜನರಿಗೆ ಗಾಯ

ಪುಚ್ಚೆಮೊಗರುವಿನ ಶ್ರೀ ಕೊಡಮಣಿತ್ತಾಯ ದೈವದ ಜಾತ್ರೋತ್ಸವ ಅಂಗವಾಗಿ ಮೆರವಣಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಲ್ಲಕ್ಕಿ ಸಮೇತ ದೈವದ ಪೂಜಾರಿಕೆ ಮಾಡುತ್ತಿದ್ದವರು ಕೆಳಗೆ ಬಿದ್ದಿದ್ದು, ಇದರಿಂದ ಭಕ್ತರಲ್ಲಿ ಆತಂಕ ಮೂಡಿದೆ. ಪುಚ್ಚೆಮೊಗರುವಿನ ಬಾವದಬೈಲು ನಿಲಯದಿಂದ ಭಂಡಾರ ಹೊತ್ತುಕೊಂಡು ತಾಕೋಡೆ ಬರ್ಕೆ ಧರ್ಮನೇಮೋತ್ಸಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹಳ್ಳವೊಂದರ ಮೇಲೆ ನಿರ್ಮಿಸಿದ್ದ ಹಳೆಯ ಸೇತುವೆಯೊಂದು ಇದಕ್ಕಿದ್ದಂತೆ ಕುಸಿದು ಬಿದ್ದು, ಕಲ್ಲುಗಳು ಭಂಡಾ ಹೊತ್ತವರ ಮೇಲೆಯೇ ಬಿದ್ದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ. ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಸೇರಿದಂತೆ ಒಟ್ಟು ಎಂಟು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಘಡದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೈವದ ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೊಗಮೂರ್ತಿ ಮತ್ತು ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಬಗ್ಗೆ ಅವಹೇಳನಕಾರಿ ಮಾತು: ಬಲಪಂಥೀಯ ವಾಗ್ಮಿ ಗೌತಮ್ ಬಂಧನ

YouTube video player