ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಹೈಡ್ರಾಮ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದು, ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಸುರ್ಜೆವಾಲ ಘೋಷಿಸಿದ್ದಾರೆ. 

ಬೆಂಗಳೂರು (ಜೂ.06) ಡಿಕೆ ಶಿವಕುಮಾರ್ ಸಚಿವ ಸಂಪುಟದ ಹಿರಿಯ ನಾಯಕರ ಅಸಮಾಧಾನದಲ್ಲಿ ಮಹತ್ವದ ತಿರುವು ಎದುರಾಗಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲು ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮಲಿಂಗಾ ರೆಡ್ಡಿ ಇದೀಗ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸುರ್ಜೆವಾಲ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜೀನಾಮೆ ಹಿಂಪಡೆದ ರಾಮಲಿಂಗಾ ರೆಡ್ಡಿ

ಸುರ್ಜೆವಾಲಾ ಸುದ್ದಿಗೋಷ್ಠಿ ಮೂಲಕ ಈ ಮಾತು ಸ್ಪಷ್ಟಪಡಿಸಿದ್ದಾರೆ. ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ಹಿಂಪಡೆದಿದ್ದಾರೆ. ಕೆಲ ಗೊಂದಲಗಳು ಸೃಷ್ಟಿಯಾಗಿತ್ತು. ಎಲ್ಲವೂ ಬಗೆ ಹರಿದಿದೆ. ಸಚಿವರಾಗಿಯೇ ಮುಂದುವರಿಯಲಿದ್ದಾರೆ ಎಂದಿದ್ದಾರೆ. ಇದೇ ವೇಳೆ ಮಾಧ್ಯಮಗಳ ಪ್ರಶ್ನೆಯನ್ನು ತೆಗೆದುಕೊಳ್ಳದೇ ಹೇಳಿಕೆ ನೀಡಿ ಸುರ್ಜೆವಾಲ ಹೊರಟಿದ್ದಾರೆ.

ಬಿಜೆಪಿ ವಿರುದ್ಧ ಕಿಡಿ ಕಾರಿದ ಸುರ್ಜೆವಾಲ

ರಾಮಲಿಂಗಾ ರೆಡ್ಡಿ ರಾಜೀನಾಮೆ ಘಟನೆ ಹಾಗೂ ಸುಳ್ಳು ಪ್ರಚಾರ ಮಾಡುವಲ್ಲಿ ಬಿಜೆಪಿ ನಾಯಕರು ನಿರತರವಾಗಿದ್ದಾರೆ. ಇದು ಬಿಜೆಪಿ ಮಾಡಿದ ಪ್ರಹಸ. ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಪಕ್ಷದ ಪ್ರಮುಖ ಹಾಗೂ ಹಿರಿಯ ನಾಯಕ. 8 ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ ಎಂದು ಸುರ್ಜೆವಾಲ ಹೇಳಿದ್ದಾರೆ. ಬಿಜೆಪಿ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ರೀತಿಯ ಸುಳ್ಳು ಆರೋಪಗಳು, ಸುಳ್ಳು ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಸುರ್ಜೆವಾಲ ಹೇಳಿದ್ದಾರೆ.

ರಾಮಲಿಂಗಾ ರೆಡ್ಡಿ ಜೊತೆ ನಾಲ್ವರು ಮಾತುಕತೆ

ರಾಮಲಿಂಗಾ ರೆಡ್ಡಿ ರಾಜೀನಾಮೆ ಮಾಹಿತಿ ಹೊರಬೀಳುತ್ತಿದ್ದಂತೆ ನಾನು, ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ನಾಲ್ವರು ಚರ್ಚಿಸಿದ್ದೇವೆ. ಬಿಕೆ ಹರಿಪ್ರಸಾದ್ ಜೊತೆಗೆ ಸ್ವತಃ ರಾಮಲಿಂಗಾ ರೆಡ್ಡಿ ಮಾತನಾಡಿದ್ದಾರೆ. ಯಾವುದೇ ಗೊಂದಲಗಳಿಲ್ಲ. ರಾಮಲಿಂಗಾ ರೆಡ್ಡಿ ಸಚಿವರಾಗಿ ಮುಂದುವರಿಯುತ್ತಾರೆ ಎಂದು ಸುರ್ಜೆವಾಲ ಹೇಳಿದ್ದಾರೆ.

ರಾಮಲಿಂಗಾ ರೆಡ್ಡಿ ಪತಿಕ್ರಿಯೆಗೆ ನಕಾರ

ಸುದ್ದಿಗೋಷ್ಠಿಗೂ ಮೊದಲು ರಣದೀಪ್ ಸುರ್ಜೆವಾಲ ಜೊತೆ ಮಹತ್ವದ ಚರ್ಚೆ ನಡೆಸಿ ಹೊರಬಂದ ರಾಮಲಿಂಗಾ ರೆಡ್ಡಿ ಮಾಧ್ಯಮ ಜೊತೆ ಯಾವುದೇ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಸಭೆ ಬಳಿಕ ಗರಂ ಆಗಿ ಹೊರಬಂದ ರಾಮಲಿಂಗಾ ರೆಡ್ಡಿ ನನ್ನನ್ನು ಫಾಲೋ ಮಾಡಬೇಡಿ. ಸದ್ಯ ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 8 ಗಂಟೆವರೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.