ಕರ್ನಾಟಕದಲ್ಲಿ ಮೊದಲ ವಾರವೇ ಶೇ.72 ಮುಂಗಾರು ಮಳೆ ಕೊರತೆ..!
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗುತ್ತದೆ. ಆದರೆ, ಪ್ರಸಕ್ತ ವರ್ಷ ಒಂದು ವಾರ ತಡವಾಗಿ ಆಗಮಿಸಿದೆ. ತಡವಾಗಿ ಆಗಮಿಸಿದ ಬಳಿಕವೂ ಮುಂಗಾರು ಅತ್ಯಂತ ದುರ್ಬಲವಾಗಿರುವ ಕಾರಣ ರಾಜ್ಯದಲ್ಲಿ ಭಾರೀ ಪ್ರಮಾಣ ಮಳೆ ಕೊರತೆ ಉಂಟಾಗಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಜೂ.18): ರಾಜ್ಯದಲ್ಲಿ ಮುಂಗಾರು ಆರಂಭದ ಮೊದಲ ವಾರವೇ ಮಳೆಯ ಕೊರತೆಯಾಗಿದ್ದು, ಕೊರತೆ ಪ್ರಮಾಣ ಶೇ.72 ತಲುಪಿದೆ. ಇದು ಕಳೆದ 28 ವರ್ಷದಲ್ಲಿ ಎದುರಾದ ಅತಿ ಹೆಚ್ಚಿನ ಮಳೆ ಕೊರತೆಯಾಗಿದೆ.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗುತ್ತದೆ. ಆದರೆ, ಪ್ರಸಕ್ತ ವರ್ಷ ಒಂದು ವಾರ ತಡವಾಗಿ ಆಗಮಿಸಿದೆ. ತಡವಾಗಿ ಆಗಮಿಸಿದ ಬಳಿಕವೂ ಮುಂಗಾರು ಅತ್ಯಂತ ದುರ್ಬಲವಾಗಿರುವ ಕಾರಣ ರಾಜ್ಯದಲ್ಲಿ ಭಾರೀ ಪ್ರಮಾಣ ಮಳೆ ಕೊರತೆ ಉಂಟಾಗಿದೆ.
ವಾಡಿಕೆ ಪ್ರಕಾರ ಜೂನ್ 1ರಿಂದ 10ರ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 51.20 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 14 ಮಿ.ಮೀ ಮಾತ್ರ ಮಳೆಯಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ ಶೇ.72ರಷ್ಟುಕಡಿಮೆ ಮಳೆಯಾಗಿದೆ.
Weather forecsat: ಇನ್ನೂ ಒಂದು ವಾರ ಕರಾವಳಿಯಲ್ಲಿ ಮುಂಗಾರು ದುರ್ಬಲ!
1995ರ ಜೂನ್ ಮೊದಲ ವಾರದಲ್ಲಿ ಶೇ.74ರಷ್ಟುಮಳೆ ಕೊರತೆ ಉಂಟಾಗಿತ್ತು. ಆನಂತರ 28 ವರ್ಷದ ಬಳಿಕ ಅ ಅತಿ ಹೆಚ್ಚಿನ ಮಳೆ ಕೊರತೆಯನ್ನು ರಾಜ್ಯ ಈ ಬಾರಿ ಎದುರಿಸಿದೆ. 1971ರಿಂದ 2023ರ ಅವಧಿಯ 53 ವರ್ಷದಲ್ಲಿ ಒಟ್ಟು ಮೂರು ಬಾರಿ ಶೇ.70ಕ್ಕಿಂತ ಹೆಚ್ಚಿನ ಪ್ರಮಾಣ ಮಳೆ ಕೊರತೆಯನ್ನು ರಾಜ್ಯ ಎದುರಿಸಿದೆ. 1972ರಲ್ಲಿ ಶೇ.78ರಷ್ಟು, 1995ರಲ್ಲಿ ಶೇ.74ರಷ್ಟುಹಾಗೂ ಪ್ರಸಕ್ತ ಬಾರಿ ಶೇ.72ರಷ್ಟುಮಳೆ ಕೊರತೆ ಉಂಟಾಗಿದೆ. ಇನ್ನು 2003ರಲ್ಲಿ ಶೇ.62ರಷ್ಟು, 2012ರಲ್ಲಿ ಶೇ.63.7ರಷ್ಟುಮಳೆ ಕೊರತೆ ಉಂಟಾಗಿರುವುದನ್ನು ಗಮನಿಸಬಹುದಾಗಿದೆ. ವಾಡಿಕೆ ಪ್ರಕಾರ ಜೂನ್ 17ರ ವೇಳೆ ರಾಜ್ಯದಲ್ಲಿ ಸರಾಸರಿ 102 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 29 ಮಿ.ಮೀ ಮಾತ್ರ ಮಳೆಯಾಗಿದೆ.
ಒಂದು ಜಿಲ್ಲೆಯಲ್ಲೂ ಸಾಮಾನ್ಯ ಮಳೆ ಇಲ್ಲ:
ಜೂನ್ ಮೊದಲ ವಾರದ ಮಳೆಯ ಅಂಕಿ ಅಂಶದಲ್ಲಿ ರಾಜ್ಯದ 31 ಜಿಲ್ಲೆಗಳ ಪೈಕಿ ಯಾದಗಿರಿ ಒಂದೇ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಆಸುಪಾಸಿನಲ್ಲಿ ಮಳೆಯಾಗಿತ್ತು. ಆದರೆ, ಇದೀಗ ಎರಡನೇ ವಾರದ ಅಂತ್ಯಕ್ಕೆ ಅಲ್ಲಿಯೂ ಮಳೆ ಕೊರತೆ ಉಂಟಾಗಿದೆ. ಹೀಗಾಗಿ, ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗಿಲ್ಲ.
ರಾಜ್ಯದ 11 ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.20ರಿಂದ ಶೇ.59ರಷ್ಟುಮಳೆ ಕೊರತೆ ಉಂಟಾಗಿದೆ. ಉಳಿದ 20 ಜಿಲ್ಲೆಗಳಲ್ಲಿ ಶೇ.66ರಿಂದ ಶೇ.99ರಷ್ಟುಮಳೆ ಕೊರತೆ ಉಂಟಾಗಿದೆ.
ಮಲೆನಾಡು, ಕರಾವಳಿಯಲ್ಲಿ ಭಾರೀ ಕೊರತೆ:
ಮಳೆನಾಡು ಭಾಗದ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಜೂ.1ರಿಂದ 17 ಅವಧಿಯಲ್ಲಿ ಸರಾಸರಿ 164 ಮಿ.ಮೀ ಮಳೆಯಾಗಬೇಕು. ಆದರೆ, ಕೇವಲ 28 ಮಿ.ಮೀ ಮಳೆಯಾಗಿದೆ. ಈ ಮೂಲಕ ಶೇ.83 ರಷ್ಟುಮಳೆ ಕೊರತೆ ಉಂಟಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರಾಸರಿ 385 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 88 ಮಿ.ಮೀ ಮಳೆಯಾಗುವ ಮೂಲಕ ಶೇ.77 ರಷ್ಟು ಮಳೆ ಕೊರತೆಯಾದರೆ, ಇನ್ನು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸರಾಸರಿ 46 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 20 ಮಿ.ಮೀ ಮಳೆಯಾಗುವ ಮೂಲಕ ಶೇ.55 ರಷ್ಟುಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡು ಜಿಲ್ಲೆಯಲ್ಲಿ ಸರಾಸರಿ 60 ಮಿ.ಮೀ ಮಳೆಯಲ್ಲಿ 19 ಮಿ.ಮೀ ಮಳೆಯಾಗಿದೆ. ಈ ಮೂಲಕ ಶೇ.69 ರಷ್ಟು ಮಳೆ ಕೊರತೆಯಾಗಿದೆ.
ಅನ್ನದಾತರಿಗೆ ರೋಹಿಣಿ ಮಳೆ ಆಘಾತ, ಆತಂಕದ ಛಾಯೆ..!
ಈ ಹಿಂದೆ ಹಲವು ಬಾರಿ ಮುಂಗಾರು ಆರಂಭದಲ್ಲಿ ಈ ರೀತಿ ಕೊರತೆ ಉಂಟಾಗಲಿದೆ. ಈ ಬಾರಿ ಚಂಡಮಾರುತದ ಪ್ರಭಾವದಿಂದ ಮುಂಗಾರು ಮಾರುತಗಳು ದುರ್ಬಲವಾಗಿ ಮಳೆ ಕೊರತೆಯಾಗಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿ ಕೊರತೆ ನೀಗಲಿದೆ ಅಂತ ಭಾರತ ಹವಾಮಾನ ಇಲಾಖೆ ತಜ್ಞರು ಪ್ರಸಾದ್ ತಿಳಿಸಿದ್ದಾರೆ.
ಪ್ರವೇಶವಾರು ಮಳೆ ವಿವರ (ಜೂ.1ರಿಂದ 17)
ಪ್ರದೇಶ ವಾಡಿಕೆ(ಮಿ.ಮೀ) ಸುರಿದ ಮಳೆ(ಮಿ.ಮೀ) ಕೊರತೆ (ಶೇ)
ದಕ್ಷಿಣ ಒಳನಾಡು 60 20 -55
ಉತ್ತರ ಒಳನಾಡು 60 19 -69
ಮಳೆನಾಡು 164 28 -83
ಕರಾವಳಿ 385 88 -77
ಒಟ್ಟು 102 29 -72
ನಾಲ್ಕು ವರ್ಷ ಮಳೆ ವಿವರ (ಜೂ.1ರಿಂದ 17)
ವರ್ಷ ಮಳೆ ಪ್ರಮಾಣ (ಮಿ.ಮೀ) ಶೇಕಡಾ ಪ್ರಮಾಣ
2020 105 3(ವಾಡಿಕೆಗಿಂತ ಹೆಚ್ಚು)
2021 127 24(ವಾಡಿಕೆಗಿಂತ ಹೆಚ್ಚು)
2022 70 -32
2023 29 -72
ಯಾವ ಜಿಲ್ಲೆಗೆ ಎಷ್ಟುಮಳೆ ಕೊರತೆ (ಜೂನ್ 17ಕ್ಕೆ)
ಜಿಲ್ಲೆ ಕೊರತೆ (ಶೇ)
ಬೆಂಗಳೂರು ನಗರ -55
ಬೆಂಗಳೂರು ಗ್ರಾಮಾಂತರ -48
ರಾಮನಗರ -64
ಕೋಲಾರ -44
ಚಿಕ್ಕಬಳ್ಳಾಪುರ -78
ತುಮಕೂರು -45
ಚಿತ್ರದುರ್ಗ -43
ದಾವಣಗೆರೆ -66
ಚಾಮರಾಜನಗರ -57
ಮೈಸೂರು -48
ಮಂಡ್ಯ -55
ಬಳ್ಳಾರಿ -69
ವಿಜಯನಗರ -68
ಕೊಪ್ಪಳ -63
ರಾಯಚೂರು -52
ಕಲಬುರಗಿ -62
ಯಾದಗಿರಿ -44
ಬೀದರ್ -53
ಬೆಳಗಾವಿ -75
ಬಾಗಲಕೋಟೆ -87
ವಿಜಯಪುರ -80
ಗದಗ -74
ಹಾವೇರಿ -76
ಧಾರವಾಡ -79
ಶಿವಮೊಗ್ಗ -86
ಹಾಸನ -79
ಚಿಕ್ಕಮಗಳೂರು -79
ಕೊಡಗು -85
ದಕ್ಷಿಣ ಕನ್ನಡ -77
ಉಡುಪಿ -77
ಉತ್ತರ ಕನ್ನಡ -77