ಹಿಂಗಾರಿನಲ್ಲೂ ಬರ: ಕರ್ನಾಟಕದಲ್ಲಿ ಶೇ.65ರಷ್ಟು ಮಳೆ ಕೊರತೆ
ಹಿಂಗಾರು ಮಳೆಯಾದರೂ ಕೈ ಹಿಡಿಯಬಹುದೆಂಬ ರೈತರಲ್ಲಿನ ಆಶಾ ಭಾವನೆ ಹುಸಿಯಾಗುವ ಲಕ್ಷಣ ಕಾಣುತ್ತಿದೆ. ಹಿಂಗಾರು ಆರಂಭವಾಗಿ 28 ದಿನ ಕಳೆದಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 12.1 ಸೆಂ.ಮೀ ನಷ್ಟು ಮಳೆಯಾಗುವ ಬದಲು ಕೇವಲ 4.2 ಸೆಂ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಹೀಗಾಗಿ ಶೇ.65 ರಷ್ಟು ಮಳೆ ಕೊರತೆ ಎದುರಾಗಿದೆ.

ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಅ.29): ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬಹುತೇಕ ಎಲ್ಲ ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದೀಗ ಹಿಂಗಾರು ಅವಧಿಯಲ್ಲಿಯೂ ನಿರೀಕ್ಷಿತ ಪ್ರಮಾಣ ಮಳೆಯಾಗದೇ ಶೇ.65 ರಷ್ಟು ಕೊರತೆ ಉಂಟಾಗಿದೆ. ಇದು ರೈತಾಪಿ ವರ್ಗದವರು ಹಾಗೂ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಶೇ.91 ರಷ್ಟು ಹಿಂಗಾರು ಮಳೆ ಕೊರತೆಯೂ ಕಳೆದ 53 ವರ್ಷದ ಮಹಾ ಕೊರತೆಯಾಗಿದೆ.
ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 85.2 ಸೆಂ.ಮೀ ಮಳೆಯಾಗಬೇಕು. ಆದರೆ, ಈ ಬಾರಿಗೆ ಕೇವಲ 63.5 ಸೆಂ.ಮೀ ಮಳೆಯಾಗಿದ್ದು, ಶೇ.25 ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಿಸಲಾಗಿದೆ.
ಕೈ ಕೊಟ್ಟ ಮುಂಗಾರು, ಗಗನಕ್ಕೇರಿದ ಅಕ್ಕಿ ರೇಟು: ಕೂಲಿ ಮಾಡಿ ಜೀವನ ಸಾಗಿಸೋರ ಕತೆ ಏನು..?
ಇನ್ನು ಹಿಂಗಾರು ಮಳೆಯಾದರೂ ಕೈ ಹಿಡಿಯಬಹುದೆಂಬ ರೈತರಲ್ಲಿನ ಆಶಾ ಭಾವನೆ ಹುಸಿಯಾಗುವ ಲಕ್ಷಣ ಕಾಣುತ್ತಿದೆ. ಹಿಂಗಾರು ಆರಂಭವಾಗಿ 28 ದಿನ ಕಳೆದಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 12.1 ಸೆಂ.ಮೀ ನಷ್ಟು ಮಳೆಯಾಗುವ ಬದಲು ಕೇವಲ 4.2 ಸೆಂ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಹೀಗಾಗಿ ಶೇ.65 ರಷ್ಟು ಮಳೆ ಕೊರತೆ ಎದುರಾಗಿದೆ.
ಉ.ಕರ್ನಾಟಕ ಶೇ.91 ರಷ್ಟು ಕೊರತೆ- 53 ವರ್ಷದ ದಾಖಲೆ:
ಹಿಂಗಾರು ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಟ್ಟಾರೆ ಸರಾಸರಿ 9.9 ಸೆಂ.ಮೀ ಮಳೆಯಾಗಬೇಕು. ಆದರೆ, ಈ ವರೆಗೆ ಕೇವಲ 0.91 ಸೆಂ.ಮೀ ಮಾತ್ರ ಮಳೆಯಾಗಿದೆ. ಈ ಪ್ರಮಾಣದ ಮಳೆ ಕೊರತೆ ಕಳೆದ 53 ವರ್ಷದ ಈ ಅವಧಿಯಲ್ಲಿ (ಅ.1ರಿಂದ ಅ.28) ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರಲಿಲ್ಲ. 1988 ರಲ್ಲಿ ಶೇ.86ರಷ್ಟು ಉಂಟಾದ ಮಳೆ ಕೊರತೆಯೇ ಈವರೆಗೆ ಅತ್ಯಧಿಕ ಮಳೆ ಕೊರತೆ ಆಗಿತ್ತು. ಉತ್ತರ ಕರ್ನಾಟಕದ 11 ಜಿಲ್ಲೆಗಳ ಪೈಕಿ ಎಲ್ಲ ಜಿಲ್ಲೆಗಳೂ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದ ಮಳೆ ಕೊರತೆ ಎದುರಿಸುತ್ತಿವೆ.
ಬೇಸಿಗೆ ದುಸ್ತರ ಖಚಿತ:
ಹಿಂಗಾರು ಅವಧಿಯಲ್ಲಿ ಅಕ್ಟೋಬರ್ ನಲ್ಲಿಯೇ ಅತ್ಯಧಿಕ ಮಳೆ ಸುರಿಯುವ ತಿಂಗಳಾಗಿದೆ. ಆದರೆ, ಅಕ್ಟೋಬರ್ ನಲ್ಲಿಯೇ ವಾಡಿಕೆಗಿಂತ ಶೇ,65 ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನು ನವೆಂಬರ್ (4.0 ಸೆಂ.ಮೀ) ಹಾಗೂ ಡಿಸೆಂಬರ್ ನಲ್ಲಿ (1 ಸೆಂ.ಮೀ) ವಾಡಿಕೆ ಮಳೆಯಾಗಿದೆ. ಇದು ಅತಿ ಕಡಿಮೆ ಪ್ರಯಾಣವಾಗಿರುವುದರಿಂದ ವಾಡಿಕೆ ಮಳೆ ಬಿದ್ದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಜಲಾಶಯ, ಕೊಳವೆಬಾವಿಯಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಬರುವ ಮಾರ್ಚ್, ಏಪ್ರಿಲ್‌ನಲ್ಲಿ ದೊಡ್ಡ ಸಮಸ್ಯೆ ಉಂಟಾಗುವ ಆತಂಕ ಶುರುವಾಗಿದೆ.
ಬಳ್ಳಾರಿಯಲ್ಲಿ ಹನಿ ಮಳೆ ಇಲ್ಲ:
ಬಳ್ಳಾರಿಯಲ್ಲಿ ಹಿಂಗಾರು ಅವಧಿಯಲ್ಲಿ 10.3 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ ಈವರೆಗೆ ಹನಿ ಮಳೆಯಾಗಿಲ್ಲ. ಇನ್ನು ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ 36.6 ಸೆಂ.ಮೀ ನಷ್ಟು ಮಳೆಯ ಬದಲು ಕೇವಲ 18.7 ಸೆಂ.ಮೀ ಮಳೆಯಾಗಿದೆ.
ಮೈಸೂರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ:
ಮೈಸೂರು ಜಿಲ್ಲೆಯಲ್ಲಿ ಮಾತ್ರ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದೆ. ಹಿಂಗಾರು ಅವಧಿಯಲ್ಲಿ 12.0 ಸೆಂ.ಮೀ ಮಳೆಯಾಗಬೇಕು. ಆದರೆ, 14.09 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಕೊಡಗಿನಲ್ಲಿ ವಾಡಿಕೆಗಿಂತ ಶೇ 7 ರಷ್ಟು ಹೆಚ್ಚಿನ ಮಳೆಯಾಗಿದೆ. ಹಾಸನದಲ್ಲಿ ಶೇ.8 ರಷ್ಟು ಮಾತ್ರ ಕೊರತೆ ಕಂಡು ಬಂದಿದೆ.
ವಿಭಾಗವಾರು ಮಳೆ ವಿವರ (ಸೆಂ.ಮೀ): ವಿಭಾಗ ವಾಡಿಕೆ ಬಿದ್ದ ಮಳೆ ಶೇಕಡವಾರು ಕೊರತೆ
ಕರಾವಳಿ 18.24 10.99 40
ಉತ್ತರ ಒಳನಾಡು 9.97 0.91 91
ದಕ್ಷಿಣ ಒಳನಾಡು 12.75 5.73 55
ಒಟ್ಟು 12.1 4.25 65
ಕರ್ನಾಟಕದ ಹಲವೆಡೆ ಅ.29ರಿಂದ ಮಳೆ ಸಾಧ್ಯತೆ
ಯಾವ ಜಿಲ್ಲೆಯಲ್ಲಿ ಎಷ್ಟು ಕೊರತೆ?
ದಕ್ಷಿಣ ಕನ್ನಡ ಶೇ.28 ರಷ್ಟು ಮಳೆ ಕೊರತೆ ಇದೆ. ಉಡುಪಿ 63, ಉತ್ತರ ಕನ್ನಡ 38, ಬಾಗಲಕೋಟೆ 95, ಬೆಳಗಾವಿ 80, ಬೀದರ್ 81, ಧಾರವಾಡ 89, ಗದಗ 98, ಹಾವೇರಿ 88, ಕಲಬುರಗಿ 85, ಕೊಪ್ಪಳ, ರಾಯಚೂರಿನಲ್ಲಿ ತಲಾ 99, ವಿಜಯಪುರ 98, ಯಾದಗಿರಿ 93, ಬಳ್ಳಾರಿ 100, ಬೆಂಗಳೂರು ಗ್ರಾಮಾಂತರ 57, ಬೆಂಗಳೂರು 47, ಚಾಮರಾಜನಗರ 45, ಚಿಕ್ಕಬಳ್ಳಾರಪುರ 95, ಚಿಕ್ಕಮಗಳೂರು 43, ಹಾಸನ 8, ಚಿತ್ರದುರ್ಗ 91, ದಾವಣಗೆರೆ 94, ಕೋಲಾರ 76, ಮಂಡ್ಯ 28, ರಾಮನಗರ 56, ಶಿವಮೊಗ್ಗ 72, ತುಮಕೂರು 86, ವಿಜಯನಗರ ಶೇ.99 ರಷ್ಟು ಮಳೆ ಕೊರತೆ ಉಂಟಾಗಿದೆ.
ಮುಂದಿನ ಎರಡ್ಮೂರು ದಿನ ದಕ್ಷಿಣ ಒಳನಾಡಿನಲ್ಲಿ ಸಣ್ಣ ಪ್ರಮಾಣ ಮಳೆಯಾಗಲಿದೆ. ಆದರೆ, ರೈತರಿಗೆ ಇದರಿಂದ ಅಷ್ಟೊಂದು ಉಪಯೋಗವಿಲ್ಲ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಒಂದೆರಡು ಬಾರಿ ಉತ್ತಮ ಮಳೆ ಬಂದರೆ ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.