ವಲಸೆಗೆ ತತ್ತರಿಸಿದ 58 ಗ್ರಾಮಗಳು : ಸೋಂಕಿತರ ಹಾವಳಿಯಿಂದ ಹಾಟ್‌ಸ್ಪಾಟ್
ರಾಜ್ಯ ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳ ಗ್ರಾಮಗಳು ಅತಿ ಹೆಚ್ಚು ಕೊರೋನಾ ಪೀಡಿತವಾಗುತ್ತಿವೆ. ಮಾತ್ರವಲ್ಲದೆ ಕಲಬುರಗಿ, ಮೈಸೂರು, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಹಬ್ಬಲು ವಲಸಿಗರೇ ಮೂಲ ಕಾರಣವಾಗುತ್ತಿದ್ದಾರೆ.
ಬೆಂಗಳೂರು (ಮೇ.02): ಜನತಾ ಕರ್ಫ್ಯೂ ಘೋಷಣೆ ಆಗುತ್ತಿದ್ದಂತೆ ಬೆಂಗಳೂರು ಸೇರಿ ವಿವಿಧ ನಗರಗಳಿಂದ ಹಾಗೂ ಹೊರರಾಜ್ಯಗಳಿಂದ ಬಂದವರಿಂದಾಗಿ ಇದೀಗ ರಾಜ್ಯದ 58ಕ್ಕೂ ಅಧಿಕ ಗ್ರಾಮಗಳು ಕೊರೋನಾ ಹಾಟ್‌ಸ್ಪಾಟ್ ಆಗಿ ಪರಿವರ್ತಿತವಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಆದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳ ಗ್ರಾಮಗಳು ಅತಿ ಹೆಚ್ಚು ಕೊರೋನಾ ಪೀಡಿತವಾಗುತ್ತಿವೆ. ಮಾತ್ರವಲ್ಲದೆ ಕಲಬುರಗಿ, ಮೈಸೂರು, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಹಬ್ಬಲು ವಲಸಿಗರೇ ಮೂಲ ಕಾರಣವಾಗುತ್ತಿದ್ದಾರೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಜನತಾ ಕಫä್ಯ ಘೋಷಣೆಯಾದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್‌ಗಳು ಹೆಚ್ಚಿವೆ. ಇನ್ನು ಶನಿವಾರ 2308 ಸೋಂಕು ದೃಢಪಟ್ಟಿರುವ ತುಮಕೂರು ಜಿಲ್ಲೆಯ ತಿಪಟೂರು, ಶಿರಾ, ಮಧುಗಿರಿ ತಾಲೂಕುಗಳ ಕೆಲ ಗ್ರಾಮಗಳಲ್ಲಿ ಪ್ರತಿದಿನ 25ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇನ್ನು 25ಕ್ಕೂ ಅಧಿಕ ಸೋಂಕಿತರಿರುವ ಮಂಡ್ಯದಲ್ಲಿ 8 ಹಳ್ಳಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಮೈಸೂರಿನ 4, ಬಳ್ಳಾರಿಯ 2, ರಾಮನಗರ, ಉತ್ತರ ಕನ್ನಡ, ಕೊಪ್ಪಳದ ತಲಾ 1 ಗ್ರಾಮ ಕೊರೋನಾ ಹಾಟ್‌ಸ್ಪಾಟ್‌ಗಳಾಗಿವೆ. ಗುಳೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬಾಗಲಕೋಟೆ ಜಿಲ್ಲೆಗೆ 5 ದಿನಗಳಿಂದ ಅಂದಾಜು 2,628 ವಲಸಿಗರು ಬಂದಿದ್ದು, 71 ಮಂದಿಯಲ್ಲಿ ಕೋವಿಡ್ ದೃಢವಾಗಿದೆ. ಹೆಚ್ಚಿನವರು ಗ್ರಾಮೀಣ ಭಾಗದವರಾಗಿದ್ದಾರೆ.
ಗುಳೆ ಹೋದವರ ಸಾಮೂಹಿಕ ವಲಸೆ: ಹಳ್ಳಿಗಳಲ್ಲಿ ಆತಂಕ ಸೃಷ್ಟಿ
ಕಲಬುರಗಿ ಜಿಲ್ಲೆಯ ಗುಳೆ ಕಾರ್ಮಿಕರಿಂದಾಗಿ ಚಿತ್ತಾಪುರ, ಆಳಂದ ಹಾಗೂ ಅಫಜಲ್ಪುರದಲ್ಲಿ ಕೊರೋನಾ ಪಾಟಿಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡಿದೆ. ಚಿತ್ತಾಪುರದಲ್ಲಿ ಕಳೆದ ವಾರ 17.69 ರಷ್ಟುಪಾಸಿಟಿವಿಟಿ ದರವಿತ್ತು. ಶೇ.15ಕ್ಕಿಂತ ಹೆಚ್ಚು ಅಫಜಲ್ಪುರ ಹಾಗೂ ಆಳಂದದಲ್ಲಿದೆ. ಆಳಂದದ ಅಳಂಗಾ, ಪಡಸಾವಳಗಿ, ವೈಜಾಪುರದಲ್ಲಿ ಸೋಂಕು, ಸಾವು ನೋವಿನ ಪ್ರಕರಣ ಹೆಚ್ಚಾಗಿದೆ.
ಕೊರೊನಾ ಆರ್ಭಟಕ್ಕೆ ಬೆಂಗ್ಳೂರು ಖಾಲಿ ಖಾಲಿ, ಗುಳೆ ಹೊರಟ ಕಾರ್ಮಿಕರು..!
ಮಲೆನಾಡಲ್ಲೂ ಆತಂಕ: ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲೂ ಬೆಂಗಳೂರು ಮತ್ತಿತರ ನಗರಗಳಿಂದ ಬಂದವರಿಂದ ಹಳ್ಳಿಗಳಲ್ಲಿ ಕೋವಿಡ್ ಹೆಚ್ಚಾಗಿದೆ. ಕಳೆದ ಬಾರಿ ಈ ಜಿಲ್ಲೆಗಳ ನಗರ ಪ್ರದೇಶದಲ್ಲಿ ಕೋವಿಡ್ ಹೆಚ್ಚಿರುತ್ತಿದ್ದರೆ ಈ ಬಾರಿ ಹಳ್ಳಿ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸೋಂಕಿತರಲ್ಲಿ ಶೇ.65ರಿಂದ ಶೇ.70ರಷ್ಟುಮಂದಿ ಗ್ರಾಮೀಣ ಭಾಗದವರಾಗಿದ್ದಾರೆ. ಆದರೆ ಉತ್ತರ ಕರ್ನಾಟಕದ ಧಾರವಾಡ, ಕೊಪ್ಪಳ, ಬಳ್ಳಾರಿ, ಬೀದರ್‌ನಲ್ಲಿ ಬೆಂಗಳೂರು ಸೇರಿ ವಿವಿಧ ನಗರಗಳಿಂದ ಹಾಗೂ ಹೊರರಾಜ್ಯಗಳಿಂದ ಬಂದವರಿಂದಾಗಿ ಕೊರೋನಾ ಹಬ್ಬಿದು ಕಡಿಮೆ ಎನ್ನಲಾಗುತ್ತಿದೆ.
ಕಲಬುರಗಿ ಸೇರಿ ಕೆಲವೆಡೆ ವಲಸೆ ಬಂದವರ ಮೇಲೆ ಕಣ್ಣಿಡಲು ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ಹಲವು ಕಡೆ ಆರೋಗ್ಯ ಕಾರ್ಯಕರ್ತರ ಮೂಲಕ ಪರೀಕ್ಷೆ ಮಾಡಿಸಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಪ್ರತಿ ಗ್ರಾಮದಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಪ್ರತಿ ಗ್ರಾಮಕ್ಕೂ ವಾಟ್ಸಪ್ ಗ್ರೂಪ್ ರಚಿಸಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮಾರ್ಗದರ್ಶನ ನೀಡಲಾಗುತ್ತಿದೆ. ದಾವಣಗೆರೆ, ಬೀದರ್ ಸೇರಿ ಹಲವು ಕಡೆ ಸ್ವಯಂ ಲಾಕ್‌ಡೌನ್ ಮೂಲಕ ಕೊರೋನಾದಿಂದ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.