ಗುಳೆ ಹೋದವರ ಸಾಮೂಹಿಕ ವಲಸೆ: ಹಳ್ಳಿಗಳಲ್ಲಿ ಆತಂಕ ಸೃಷ್ಟಿ
ಹೊರರಾಜ್ಯಗಳಿಂದ ಮರಳುತ್ತಿರುವ ಜನ| ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ರೀತಿ ಗುಳೇ ಹೋದವರ ಸಾಮೂಹಿಕ ವಲಸೆ ಕಡಿಮೆ| ಕೋವಿಡ್ ಪರೀಕ್ಷೆಗೊಳಪಡದೆ ಗ್ರಾಮಕ್ಕೆ ವಾಪಸಾಗುತ್ತಿರುವುದರಿಂದ ಗ್ರಾಮಗಳಲ್ಲಿ ಆತಂಕ| ಬೆಳಗಾವಿ, ಹೊಸಪೇಟೆ ಸೇರಿ ಹಲವು ಕಡೆ ಹಳ್ಳಿಗಳಲ್ಲಿ ಸೋಂಕು ಹೆಚ್ಚಲು ಹೊರಗಿನಿಂದಲೇ ಬಂದವರೇ ಕಾರಣ|
ಬೆಂಗಳೂರು(ಏ.26): ಕೂಲಿ ಕೆಲಸಕ್ಕಾಗಿ ಹೊರಜಿಲ್ಲೆ, ರಾಜ್ಯಗಳಿಗೆ ಕೆಲಸಕ್ಕಾಗಿ ಹೋಗಿದ್ದ ಜನ ಕೋವಿಡ್ ಲಾಕ್‌ಡೌನ್ ಆತಂಕದ ಹಿನ್ನೆಲೆಯಲ್ಲಿ ಇದೀಗ ನಿಧಾನವಾಗಿ ತಮ್ಮ ಹಳ್ಳಿಗಳತ್ತ ಮುಖಮಾಡುತ್ತಿದ್ದಾರೆ.
ಬೆಂಗಳೂರು, ಮುಂಬೈ ಸೇರಿ ಕೋವಿಡ್ ಹೆಚ್ಚಿರುವ ಪ್ರದೇಶಗಳಲ್ಲೇ ಕೆಲಸ ಮಾಡುತ್ತಿದ್ದ ಜನ ಇದೀಗ ತಮ್ಮ ಹಳ್ಳಿಗಳತ್ತ ಮುಖಮಾಡುತ್ತಿರುವುರಿಂದ ಹಳ್ಳಿಗಳಲ್ಲೀಗ ಕೊರೋನಾ ಸೋಂಕು ಹಬ್ಬುವ ಆತಂಕ ಶುರುವಾಗಿದೆ.
ಕೊರೊನಾ ಆರ್ಭಟಕ್ಕೆ ಬೆಂಗ್ಳೂರು ಖಾಲಿ ಖಾಲಿ, ಗುಳೆ ಹೊರಟ ಕಾರ್ಮಿಕರು..!
ಹೊರರಾಜ್ಯ, ಹೊರ ಜಿಲ್ಲೆಗಳಿಗೆ ಹೋಗಿದ್ದವರು ಅನಿವಾರ್ಯವಾಗಿ ಇದೀಗ ಎಲ್ಲವನ್ನೂ ಬಿಟ್ಟು ಹುಟ್ಟೂರಿಗೆ ವಾಪಸಾಗುತ್ತಿದ್ದು, ಅವರು ಈ ರೀತಿ ಬರುವಾಗ ತಮ್ಮ ಜತೆ ಕೊರೋನಾ ಸೋಂಕನ್ನೂ ಹೊತ್ತು ತರುವ ಆತಂಕವಿದೆ. ಈಗಾಗಲೇ ಬೆಳಗಾವಿ, ಹೊಸಪೇಟೆ ಸೇರಿ ಹಲವು ಕಡೆ ಹಳ್ಳಿಗಳಲ್ಲಿ ಸೋಂಕು ಹೆಚ್ಚಲು ಈ ರೀತಿ ಹೊರಗಿನಿಂದಲೇ ಬಂದವರೇ ಕಾರಣವಾಗಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ರೀತಿ ಗುಳೇ ಹೋದವರ ಸಾಮೂಹಿಕ ವಲಸೆ ಕಡಿಮೆ ಇದ್ದರೂ ಕೋವಿಡ್ ಪರೀಕ್ಷೆಗೊಳಪಡದೆ ಅವರು ಗ್ರಾಮಕ್ಕೆ ವಾಪಸಾಗುತ್ತಿರುವುದರಿಂದ ಆತಂಕವಂತು ಇದ್ದೇ ಇದೆ. ಕೊಪ್ಪಳ, ಬೆಳಗಾವಿ, ಗದಗ, ವಿಜಯಪುರದಲ್ಲಿ ಈ ರೀತಿ ಗುಳೆ ಹೋದವರ ವಲಸೆ ಹೆಚ್ಚಿನ ಸಂಖ್ಯೆಯಲ್ಲಿದೆ.