ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜು.22): ಬಿಬಿಎಂಪಿ ವ್ಯಾಪ್ತಿಯ ಕೆರೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಒತ್ತುವರಿ ವಿವರವನ್ನು ಬಿಬಿಎಂಪಿ ಬಹಿರಂಗಪಡಿಸಿದ್ದು, ಬರೋಬ್ಬರಿ 847.31 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಒಂದು ಕಾಲದಲ್ಲಿ ಬೆಂಗಳೂರನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತಿತ್ತು. ಆದರೆ, ಬೆಂಗಳೂರು ನಗರ ಬೆಳೆದಂತೆ ಅನೇಕ ಕೆರೆಗಳು ಬಡಾವಣೆ, ಬಸ್‌ ನಿಲ್ದಾಣ, ಸ್ಟೇಡಿಯಂ ಸೇರಿದಂತೆ ಇನ್ನಿತರ ಕಾರ್ಯಕ್ಕೆ ಒತ್ತುವರಿ ಮಾಡಿಕೊಳ್ಳಲಾಯಿತು. ಇಂದಿಗೂ ಒತ್ತುವರಿ ಮುಂದುವರೆದಿದ್ದು, ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಪೈಕಿ 160 ಕೆರೆಗಳ ಒತ್ತುವರಿ ಕುರಿತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢಿಕರಿಸಿ ಕೆರೆ ನಕ್ಷೆ ಹಾಗೂ ಒತ್ತುವರಿ ವಿವರವನ್ನು ಬಿಬಿಎಂಪಿ ವೆಬ್‌ ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

ಸರ್ವೇ ಪೂರ್ಣಗೊಂಡ ಕೆರೆಗಳಲ್ಲಿ ಕೆಲವು ಕೆರೆಗಳಲ್ಲಿ ಅಷ್ಟೊಇಷ್ಟೊಒತ್ತುವರಿಯಾಗಿದೆ. ಇನ್ನು ಕೆಲವು ಕೆರೆಗಳಲ್ಲಿ ಯಾವುದೇ ಒತ್ತುವರಿ ಆಗಿಲ್ಲ ಮತ್ತು ಕೆಲವು ಕೆರೆಗಳು ಸಂಪೂರ್ಣ ಮಾಯವಾಗಿರುವ ಬಗ್ಗೆ ಅಂಕಿ ಅಂಶದಲ್ಲಿ ತಿಳಿಸಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಾದ ರೈಲ್ವೆ, ಬಿಎಂಟಿಸಿ, ಅಂಗನವಾಡಿ, ಶಾಲೆ- ಕಾಲೇಜು, ಬಿಡಿಎ, ಜಲಮಂಡಳಿ, ಲೋಕೋಪಯೋಗಿ ಇಲಾಖೆ, ಸ್ವತಃ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳು ಒಟ್ಟು 535.21 ಎಕರೆ ಕೆರೆ ಪ್ರದೇಶಗಳನ್ನು ಒತ್ತುವರಿ ಮಾಡಿ ರಸ್ತೆ, ಪಾರ್ಕ್ ಕಟ್ಟಡ, ರಿಂಗ್‌ ರಸ್ತೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು 249.30 ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಕೃಷಿ, ಕಟ್ಟಡ, ಶೆಡ್‌, ಅಪಾರ್ಟ್‌ಮೆಂಟ್‌, ದೇವಸ್ಥಾನ, ಮಸೀದಿ, ಚರ್ಚ್, ಖಾಸಗಿ ರಸ್ತೆ, ಖಾಸಗಿ ಶಾಲಾ, ಕಾಲೇಜುಗಳಿಗೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಉಲ್ಲೇಖಿಸಿದೆ.

ಕೊರೋನಾ ನಿಯಂತ್ರಣಕ್ಕೆ ಕಾರ್ಯಪಡೆ: ಸಾವಿನ ಸಂಖ್ಯೆ ಕಡಿಮೆ ಮಾಡಲು ಕ್ರಮ

11 ಕೆರೆಗಳ ಒತ್ತುವರಿ ಇಲ್ಲ

ಗುಂಜೂರು ಕೆರೆ 9.17 ಎಕರೆ, ಪನತೂರು ಕೆರೆ 6.30 ಎಕರೆ, ಗುಂಜೂರು ಪಾಳ್ಯ ಕೆರೆ 36.27 ಎಕರೆ, ಕಮ್ಮಗೊಂಡನಹಳ್ಳಿ ಕೆರೆ 23.10 ಎಕರೆ, ನಾಗರಬಾವಿ ಕೆರೆ 4.7 ಎಕರೆ, ಬೆಟ್ಟಹಳ್ಳಿ ಕೆರೆ 1.32 ಎಕರೆ, ಭೀಮನಕಟ್ಟೆಕೆರೆ 1.23 ಎಕರೆ, ಕೆಂಚನಪುರ ಕೆರೆ 17.26, ಗೊಟ್ಟಿಗೇರೆ ಪಾಳ್ಯ ಕೆರೆ 17.38, ಬೆಳ್ಳಹಳ್ಳಿ ಕೆರೆ 18.32 ಸೇರಿದಂತೆ ಒಟ್ಟು 11 ಕೆರೆಗಳಲ್ಲಿ ಯಾವುದೇ ಒತ್ತುವರಿ ಆಗಿಲ್ಲ ಎಂದು ಹೇಳಿದೆ.

ಮಾಯವಾದ ಕೆರೆಗಳು

ಬಸಪ್ಪನಕಟ್ಟೆಕೆರೆ ಹಾಗೂ ಅಂಬುಲಿ ಕೆಳಗಿನ ಕೆರೆ ಸಂಪೂರ್ಣವಾಗಿ ಒತ್ತುವರಿ ಆಗಿವೆ. ದಾಸರಹಳ್ಳಿ ವಲಯದ ಯಶವಂತಪುರ ಹೋಬಳಿ ವ್ಯಾಪ್ತಿಯ ಲಗ್ಗೆರೆಯ 4.11 ಎಕರೆಯ ಬಸಪ್ಪನಕಟ್ಟೆಕೆರೆಯಲ್ಲಿ ಖಾಸಗಿಯಿಂದ 0.19 ಗುಂಟೆ, ಸರ್ಕಾರದ ವಿವಿಧ ಇಲಾಖೆಯಿಂದ 3.32 ಎಕರೆ ಒತ್ತುವರಿ ಆಗಿದೆ. ಈ ಮೂಲಕ ಕೆರೆ ದಾಖಲೆಗಳಲ್ಲಿ ಮಾತ್ರ ಉಳಿದಿದ್ದು, ವಾಸ್ತವವಾಗಿ ಕಾಣೆಯಾಗಿದೆ. ಕೆರೆ ಜಾಗದಲ್ಲಿ ಈಗ ಬಿಬಿಎಂಪಿ 2 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ ಮಾಡಿದೆ. 1 ಎಕರೆಯಲ್ಲಿ ಆಟದ ಮೈದಾನ, 14 ಗುಂಟೆಯಲ್ಲಿ ರಸ್ತೆ, ಸರ್ಕಾರಿ ಶಾಲೆ ಮತ್ತು ದೇವಸ್ಥಾನ ಹಾಗೂ ಒತ್ತುವರಿದಾರರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಇನ್ನು ಮಹದೇವಪುರ ವಲಯದ ಅಂಬುಲಿಪುರದ 4.09 ಎಕರೆ ಸಂಪೂರ್ಣವಾಗಿ ಒತ್ತುವರಿ ಆಗಿದೆ. ಈ ಕೆರೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಸ್ವತಃ ಬಿಬಿಎಂಪಿಯೇ ಒತ್ತುವರಿ ಮಾಡಿದೆ. ಒತ್ತುವರಿ ಮಾಡಿದ 4.09 ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢಿಕರಿಸಿದ್ದಾರೆ.

ಸರ್ವೇ ಕಾರ್ಯ ಮುಕ್ತಾಯಗೊಂಡಿರುವ ಕೆರೆಗಳ ವಿವರವನ್ನು ಬಿಬಿಎಂಪಿ ವೆಬ್‌ ಸೈಟ್‌ನಲ್ಲಿ ಬಹಿರಂಗ ಪಡಿಸಲಾಗಿದೆ. ಯಾವ ಕೆರೆಯಲ್ಲಿ ಒತ್ತುವರಿದಾರರು ಯಾರು ಎಂಬುದನ್ನು ಸಹ ಕೆರೆ ನಕ್ಷೆ ಪ್ರಕಾರ ವಿವರಿಸಲಾಗಿದೆ. ಒತ್ತುವರಿ ತೆರವಿಗೆ ಹೈಕೋಟ್‌ ತಡೆಯಾಜ್ಞೆ ಇದೆ ಎಂದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ ಅವರು ತಿಳಿಸಿದ್ದಾರೆ. 

ಒತ್ತುವರಿ ತೆರವಿಗೆ ತಾತ್ಕಾಲಿಕ ತಡೆ

ಕೊರೋನಾ ಸೋಂಕನ್ನು ಆರೋಗ್ಯ ವಿಪತ್ತು ಎಂದು ಘೋಷಿಸಿರುವುದರಿಂದ ರಾಜ್ಯ ಹೈಕೋರ್ಟ್‌ ಕೊರೋನಾ ಸೋಂಕಿನ ಸಮಸ್ಯೆ ಪರಿಹಾರ ಆಗುವವರೆಗೆ ಒತ್ತುವರಿ ತೆರವು ಕೈಗೊಳ್ಳದಂತೆ ತಡೆಯಾಜ್ಞೆ ನೀಡಿದೆ. ಹಾಗಾಗಿ, ಸೋಂಕಿನ ಭೀತಿ ಕಡಿಮೆಯಾದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಕೆರೆ ವಿಭಾಗ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

205: ಬಿಬಿಎಂಪಿಯ ಒಟ್ಟು ಕೆರೆ
160: ಸರ್ವೇ ಪೂರ್ಣಗೊಂಡ ಕೆರೆ
45: ಸರ್ವೇ ಬಾಕಿ ಇರುವ ಕೆರೆ
160 ಕೆರೆಗಳ ಒತ್ತುವರಿ ವಿವರ (ಎಕರೆ)
160 ಕೆರೆಗಳ ಒಟ್ಟು ವಿಸ್ತೀರ್ಣ: 5673.21
ಒತ್ತುವರಿ ಪ್ರಮಾಣ: 847.31
ಸರ್ಕಾರಿ ಒತ್ತುವರಿ: 535.21
ಖಾಸಗಿ ಒತ್ತುವರಿ: 249.30