Asianet Suvarna News Asianet Suvarna News

ಕರ್ನಾಟಕದ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸಲು 500 ಕೋಟಿ: ಸಚಿವ ಗುಂಡೂರಾವ್

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಸ ಆಸ್ಪತ್ರೆ, ಆರೋಗ್ಯ ಕೇಂದ್ರ ಸ್ಥಾಪಿಸಲು ಉತ್ಸುಕರಾಗಿರುತ್ತಾರೆ. ಆದರೆ, ಇರುವ ಆಸ್ಪತ್ರೆಯಲ್ಲೇ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಆಸಕ್ತಿ ಇರುವುದಿಲ್ಲ. ಹೀಗಾಗಿ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ 

500 crore to Provide Infrastructure to Hospitals in Karnataka Says Dinesh Gundurao grg
Author
First Published Feb 7, 2024, 8:43 PM IST

ಮೈಸೂರು(ಫೆ.07): ರಾಜ್ಯದ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಲು 500 ಕೋಟಿ.ರು. ಯೋಜನೆ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ನಗರದ ಜೆಕೆ ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಂಗಳವಾರ ಆಯೋಜಿಸಿದ್ದ ಸರ್ಕಾರಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳ ಸ್ವಚ್ಛತೆಗಾಗಿ ನೀಡುವ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಸ ಆಸ್ಪತ್ರೆ, ಆರೋಗ್ಯ ಕೇಂದ್ರ ಸ್ಥಾಪಿಸಲು ಉತ್ಸುಕರಾಗಿರುತ್ತಾರೆ. ಆದರೆ, ಇರುವ ಆಸ್ಪತ್ರೆಯಲ್ಲೇ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಆಸಕ್ತಿ ಇರುವುದಿಲ್ಲ. ಹೀಗಾಗಿ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!

ಆಸ್ಪತ್ರೆಗಳಲ್ಲಿ ಮೂಲಸೌಕರ್ಯ, ಅಧಿಕಾರಿಗಳಲ್ಲಿ ಆಸಕ್ತಿ ಹಾಗೂ ಬದ್ಧತೆ ಇದ್ದಾಗ ವ್ಯವಸ್ಥೆಯಲ್ಲಿನ ಸಮಸ್ಯೆಯ ಹೊರತಾಗಿಯೂ ಜನಪರ ಸೇವೆ ನೀಡಲು ಸಾಧ್ಯ. ಹಲವಾರು ಆಸ್ಪತ್ರೆಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬಂದು ಕರ್ತವ್ಯ ನಿರ್ವಹಿಸದಿರುವ ಬಗ್ಗೆ ದೂರುಗಳಿವೆ. ಸರ್ಕಾರದ ವ್ಯವಸ್ಥೆಯಲ್ಲಿನ ಲೋಪಗಳನ್ನೇ ನೆಪ ಮಾಡಿಕೊಂಡು ಸಾರ್ವಜನಿಕರು ಪರದಾಡುವಂತೆ ಮಾಡಬಾರದು. ಜನರ ಸೇವೆಗೆ ನಾವಿದ್ದೇವೆ ಎಂಬ ಭಾವನೆ ಇರಬೇಕು ಎಂದು ಅವರು ಸಲಹೆ ನೀಡಿದರು.

ಆಸ್ಪತ್ರೆಯ ಆದಾಯದಲ್ಲೇ ಔಷಧಿ ಖರೀದಿಸಬೇಕಾದ ಅನಿವಾರ್ಯತೆ ಇದೆ. ಶೇ.60 ರಷ್ಟು ದಾಸ್ತಾನು ಕೊರತೆಯೂ ಇದೆ. ಸರ್ಕಾರದಿಂದಲೇ ಔಷಧಿಗೆ ಹಣ ಪೂರೈಸಿ. ಆಸ್ಪತ್ರೆ ಆದಾಯವನ್ನು ಅಲ್ಲಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದರು.

ಆರೋಗ್ಯ ಹಾಗೂ ಸ್ವಚ್ಛತೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಆರೋಗ್ಯ ಕೇಂದ್ರದಲ್ಲಿ ನೈರ್ಮಲ್ಯ ಕಾಪಾಡುವುದರಿಂದ ಸಮಾಜ ಆರೋಗ್ಯವಾಗಿರಲು ಸಾಧ್ಯ. ಸ್ವಚ್ಛತೆಗೆ ಒತ್ತು ನೀಡಿದಾಗ ಅದು ಆಸ್ಪತ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರ್ಯ ಹೆಚ್ಚುವುದಕ್ಕಾಗಿ ಕಾಯಕಲ್ಪ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇತರೆ ಆರೋಗ್ಯ ಕೇಂದ್ರಗಳು ಇದರಿಂದ ಪ್ರೇರಣೆ ಪಡೆದು ತಾವೂ ಪ್ರಶಸ್ತಿ ಪಡೆಯಲು ಪ್ರಯತ್ನಿಸಬೇಕು ಎಂದರು.

ನವದೆಹಲಿಯ ಎನ್‌.ಎಚ್‌.ಎಸ್‌.ಆರ್‌.ಸಿ ಸಲಹೆಗಾರ ಡಾ.ಜೆ.ಎನ್‌. ಶ್ರೀವಾಸ್ತವ ಮಾತನಾಡಿ, ‘ಕಾಯಕಲ್ಪದ ಮೂಲಕ ನೈರ್ಮಲೀಕರಣ ಮಾತ್ರವಲ್ಲದೆ ಸೋಂಕು ತಡೆಗಟ್ಟುವ ಕೆಲಸವೂ ಆಗುತ್ತಿದೆ. ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ಕಂಡಿದೆ. 1650 ಹೆಚ್ಚಿನ ಅನುಕೂಲತೆ ಈ ಯೋಜನೆ ಹೊಂದಿದೆ ಎಂದರು.

ಆರೋಗ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ಮಾತನಾಡಿ, ಕಾಯಕಲ್ಪದ ಅರ್ಹತೆ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳು ಅದೇ ನಿರ್ವಹಣೆಯನ್ನು ಮುಂದುವರೆಸಬೇಕು. ತಾಲೂಕು ಆರೋಗ್ಯ ಕೇಂದ್ರಗಳು ಗುಣಮಟ್ಟ ವೃದ್ಧಿಸಿಕೊಂಡು ಮುಂದಿನ ಬಾರಿ ಅರ್ಹತೆ ಪಡೆಯುವಂತಾಗಬೇಕು ಎಂದು ತಿಳಿಸಿದರು.

ಪ್ರಶಸ್ತಿ ವಿತರಣೆ

ಜಿಲ್ಲಾಸ್ಪತ್ರೆ ವಿಭಾಗದಲ್ಲಿ ಹಾಸನದ ಶ್ರೀ ಚಾಮರಾಜೇಂದ್ರ ಬೋಧನಾ ಆಸ್ಪತ್ರೆ 50 ಲಕ್ಷ (ಪ್ರಥಮ), ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ 20 ಲಕ್ಷ(ದ್ವಿತೀಯ). ತಾಲೂಕು ಆಸ್ಪತ್ರೆ ವಿಭಾಗದಲ್ಲಿ ಕೊಪ್ಪಳದ ಗಂಗಾವತಿ ಆಸ್ಪತ್ರೆ 15 ಲಕ್ಷ(ಪ್ರಥಮ), ವಿಜಯಪುರದ ‌ಬಸವನ ಬಾಗೇವಾಡಿ ಆಸ್ಪತ್ರೆ 10 ಲಕ್ಷ(ದ್ವಿತೀಯ) ಸೇರಿದಂತೆ ರಾಜ್ಯದ 2 ಸಾವಿರ ಆಸ್ಪತ್ರೆಗಳಿಗೆ ವಿವಿಧ ಹಂತದ ಬಹುಮಾನ ವಿತರಿಸಲಾಯಿತು.

ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್‌ಗೌಡ, ಡಿ. ರವಿಶಂಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ಆಯುಕ್ತ ಡಿ. ರಂದೀಪ್‌, ನಿರ್ದೇಶಕಿ ಡಾ.ಬಿ.ಎಸ್. ಪುಷ್ಪಲತಾ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ. ನವೀನ್‌ಭಟ್‌, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಮೈಸೂರು ವೈದ್ಯಕೀಯ ಕಾಲೇಜು ಡೀನ್‌ಡಾ.ಕೆ.ಆರ್. ದಾಕ್ಷಾಯಿಣಿ, ಆರೋಗ್ಯ ಇಲಾಖೆಯ ಯೋಜನಾ ನಿರ್ದೇಶಕ ಡಾ.ಜಿ.ಎನ್‌. ಶ್ರೀನಿವಾಸ್‌, ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಎಚ್‌.ಆರ್‌. ರಾಜೇಶ್ವರಿದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಮೊದಲಾದವರು ಇದ್ದರು.

ಲೋಕ ಚುನಾವಣೆಗೆ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳೇ ಇಲ್ಲ: ಜಿ.ವಿ. ರಾಜೇಶ್ ಟೀಕೆ

ಆರೋಗ್ಯ ಕೇಂದ್ರದಲ್ಲಿ ಕನಿಷ್ಠ ಗುಣಮಟ್ಟವನ್ನು ನಿರ್ವಹಣೆ ಮಾಡುವಂತಾಗಬೇಕು. 2022– 23ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಕೇಂದ್ರಗಳು ಕಾಯಕಲ್ಪ ಗುಣಮಟ್ಟವನ್ನು ತಲುಪಬೇಕು. ಗುಣಮಟ್ಟ ಹೊಂದಿರದ ಆರೋಗ್ಯ ಕೇಂದ್ರಗಳ ಬಗ್ಗೆ ಗಮನಹರಿಸಿ ಅವನ್ನು ಮುಂದೆ ತರಲು ಕ್ರಮ ಕೈಗೊಳ್ಳುತ್ತೇವೆ. ನಾನು ಇಲಾಖೆ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಅಧಿಕಾರಿ ಹಾಗೂ ಸಿಬ್ಬಂದಿ ಸಹಕರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

ಡಿಎಚ್ಒಗೆ ಸಚಿವರ ತರಾಟೆ

ಕಾರ್ಯಕ್ರಮದ ಆತಿಥ್ಯ ವಹಿಸಿರುವ ಮೈಸೂರು ಜಿಲ್ಲೆಯಲ್ಲಿ ಶೇ.10ರಷ್ಟು ಆರೋಗ್ಯ ಕೇಂದ್ರಗಳು ಮಾತ್ರವೇ ಕಾಯಕಲ್ಪ ಗುಣಮಟ್ಟದಲ್ಲಿವೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಈ ರೀತಿ ಆಗಿರುವುದು ವಿಷಾದನಿಯ. ಅಧಿಕಾರಿಗಳು ಕನಿಷ್ಠ ಜವಬ್ದಾರಿಯನ್ನೂ ನಿರ್ವಹಿಸಿಲ್ಲ ಎಂಬುದನ್ನು ಈ ಅಂಕಿ ಅಂಶ ಎತ್ತಿಹಿಡಿದಿದೆ. ಯಾಕೆ ಈ ಪರಿಸ್ಥಿತಿ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣ ನೀಡದೆ ಮುಂದಿನ ಸಾಲಿನಲ್ಲಿ ಜಿಲ್ಲೆಯ ಶೇ.70 ರಷ್ಟು ಕೇಂದ್ರಗಳು ಕಾಯಕಲ್ಪ ಮಾನ್ಯತೆ ಪಡೆಯುವಲ್ಲಿ ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು.

Follow Us:
Download App:
  • android
  • ios