ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!
ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್ ಸಿಂಹನ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದಾರೆ.
ಕೊಡಗು (ಫೆ.06): ಹಾಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹೆಚ್. ವಿಶ್ವನಾಥ್ ಅವರು ಈಗ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್ ಸಿಂಹನ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದಾರೆ.
ಹೌದು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಚ್ ವಿಶ್ವನಾಥ್ ಸಿದ್ಧತೆ ಮಾಡಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾನು ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದವರು. ಖರ್ಗೆ ಸಾಹೇಬ್ರು ನಮ್ಮನ್ನೆಲ್ಲ ಪ್ರೋತ್ಸಾಹಿಸಿ ಬೆಳೆಸಿದವರು ಆಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನಾನು ಯೂತ್ ಕಾಂಗ್ರೆಸ್‌ನಿಂದಲೂ ಒಟ್ಟಿಗೆ ಕೆಲಸ ಮಾಡಿದವರು. ಕಾಂಗ್ರೆಸ್ ನ ಎಲ್ಲ ಹಿರಿಯ ನಾಯಕರು ಚಿರಪರಿಚಿತರಿದ್ದಾರೆ. ಹಾಗಾಗಿ, ಟಿಕೆಟ್ ಗಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕುಮಾರಪರ್ವತ ಚಾರಣಕ್ಕೂ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ: ಅರಣ್ಯ ಸಚಿವ ಈಶ್ವರ ಖಂಡ್ರೆ
ನನಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸವಿದೆ. ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಿಂದಲೇ ಕೇಳೋಣ ಎಂದುಕೊಂಡಿದ್ದೇನೆ. ಒಂದು ವೇಳೆ ಟಿಕೆಟ್ ಸಿಗಬಹುದು ಅಥವಾ ಸಿಗದಿರಬಹುದು. ಆದರೆ, ನಾನು ಪ್ರಬಲ ಆಕಾಂಕ್ಷಿ ಇದ್ದು ಟಿಕೆಟ್ ಕೇಳೋಣ ಎಂದುಕೊಂಡಿದ್ದೇನೆ. ಸಂಸದನಾಗಿ, ಸಚಿವನಾಗಿ ನನಗೆ ಸಾಕಷ್ಟು ಅನುಭವವಿದೆ. ಯಾರು ಒಂದೇ ಪಕ್ಷದಲ್ಲಿ ಇದ್ದವರಲ್ಲ ಎಂದು ತಮ್ಮನ್ನು ಸಮರ್ಥನೆ ಮಾಡಿಕೊಂಡರು.
ಸಿದ್ದರಾಮಯ್ಯ ಕೂಡ ಪ್ಯೂರ್ ಕಾಂಗ್ರೆಸಿಗರೇನೂ ಅಲ್ಲ. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಪ್ಯೂರ್ ಜೆಡಿಎಸ್, ಮಾಜಿ ಸಿಎಂ ಬಿ.ಎಸ್. ಯಡಿಯೂರೊಪ್ಪ ಪ್ಯೂರ್ ಬಿಜೆಪಿಯವರಾ ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಎಲ್ಲ ಬಹುತೇಕ ನಾಯಕರು ಎಲ್ಲರೂ ಮಿಕ್ಸ್ಡ್ ಬೇಸ್ಡ್‌ನಿಂದ ಬಂದವರೇ ಆಗಿದ್ದಾರೆ. ಹಾಗಾಗಿ, ಟಿಕೆಟ್ ಸಿಗುವ ನಂಬಿಕೆಯಿದೆ ಎಂದು ಮಾಧ್ಯಮಗಳ ಮುಂದೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿಕೊಂಡಿದ್ದಾರೆ.
ಚಿಕ್ಕೋಡಿ ಬಿಜೆಪಿ ಟಿಕೆಟ್ ಮೇಲೆ ಲಿಂಗಾಯತ ಲೀಡರ್ಸ್ ಕಣ್ಣು; ಕತ್ತಿ, ಕೋರೆ, ಜೊಲ್ಲೆ ಯಾರ ಮುಡಿಗೇರಲಿದೆ ಕಮಲ?
ಸಂಸದ ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಕೋರ್ಟ್ ತಡೆಯಾಜ್ಞೆ:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ. ಇನ್ನುಮುಂದೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ. ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ಕೊಡಲಾಗಿದೆ. ನ್ಯಾಯಾಲಯಕ್ಕೆ ನೀಡಿರುವ ದೂರಿನನ್ವಯ ಫೆ.13 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ. ಈ ಮೂಲಕ ಪತ್ರಿಕೆ, ಟಿವಿ, ಸ್ಥಳೀಯ ಕೇಬಲ್, ರೇಡಿಯೋ, ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡದಂತೆ ಕೋರ್ಟ್ ಸೂಚನೆಯನ್ನು ನೀಡಿದೆ.