Asianet Suvarna News Asianet Suvarna News

150 ರು. ತಲುಪಿದ್ದ ಟೊಮೆಟೋ ಬೆಲೆ 70 ರು.ಗೆ ಇಳಿಕೆ: ಗ್ರಾಹಕರು ಫುಲ್ ಖುಷ್

ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಏರಿಕೆಯ ಹಾದಿಯಲ್ಲೇ ಇದ್ದ ಟೊಮೆಟೋ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಗುರುವಾರ ಬಹುತೇಕ ಕಡೆಗಳಲ್ಲಿ ಕೆಜಿಗೆ ನೂರು ರುಪಾಯಿಗಿಂತಲೂ ಕಡಿಮೆ ದರಕ್ಕೆ ಮಾರಾಟವಾಗಿದೆ. 

Tomato price decrease in karnataka gvd
Author
First Published Aug 10, 2023, 9:57 PM IST

ಬೆಂಗಳೂರು (ಆ.10): ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಏರಿಕೆಯ ಹಾದಿಯಲ್ಲೇ ಇದ್ದ ಟೊಮೆಟೋ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಗುರುವಾರ ಬಹುತೇಕ ಕಡೆಗಳಲ್ಲಿ ಕೆಜಿಗೆ ನೂರು ರುಪಾಯಿಗಿಂತಲೂ ಕಡಿಮೆ ದರಕ್ಕೆ ಮಾರಾಟವಾಗಿದೆ. ಆದರೆ ಬೆಲೆ ಸ್ಥಿರತೆ ಹಾಗೂ ಇನ್ನಷ್ಟು ಕಡಿಮೆಯಾಗಲು ಇನ್ನಷ್ಟು ಸಮಯ ಬೇಕಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಕಳೆದ ವಾರ ಬೆಂಗಳೂರು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ . 140 ಗಡಿ ದಾಟಿದ್ದ ಟೊಮೆಟೋ ಪ್ರಸ್ತುತ ಕೆಜಿಗೆ 70-80 ದರದಂತೆ ವ್ಯಾಪಾರವಾಗಿದೆ. ಕೆಲವೆಡೆ 90ಗೆ ಮಾರಾಟಗಾರರು ಮಾರಿದ್ದಾರೆ. ಹಾಪ್‌ಕಾಮ್ಸ್‌ನಲ್ಲಿ 157 ಆಗಿದ್ದ ದರ 85 ಗೆ ಇಳಿದಿದೆ. ಮಾರುಕಟ್ಟೆಗೆ ಸುತ್ತಮುತ್ತ ಜಿಲ್ಲೆಗಳಿಂದ ಟೊಮೆಟೋ ಬರುವ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಮಾರುಕಟ್ಟೆಗೆ ಹೆಚ್ಚಿನ ಬೆಳೆ: ಕೋಲಾರ ಎಪಿಎಂಸಿಯಲ್ಲಿ 6-7 ಸಾವಿರ ಬಾಕ್ಸ್‌ಗೆ ಇಳಿಕೆಯಾಗಿದ್ದ ಟೊಮೆಟೋ ಆವಕ, ಗುರುವಾರ 90 ಸಾವಿರ ಬಾಕ್ಸ್‌ಗೆ ಏರಿಕೆಯಾಗಿದೆ. ವಾರಗಳ ಹಿಂದೆ 15 ಕೆಜಿ ಬಾಕ್ಸ್‌ಗೆ ಗರಿಷ್ಠ 2700 ವರೆಗೆ ಏರಿಕೆಯಾಗಿದ್ದ ದರ ಬುಧವಾರ 1100ಕ್ಕೆ , ಗುರುವಾರ 600-800ಕ್ಕೆ ಇಳಿಕೆಯಾಗಿದೆ ಎಂದು ಕೋಲಾರ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮಾರುಕಟ್ಟೆಗೆ ರಾಮನಗರ, ಕೋಲಾರ, ಮಂಡ್ಯ ಸುತ್ತಮುತ್ತಲ ಜಿಲ್ಲೆಗಳಿಂದ ಹಿಂದಿನ ವಾರದವರೆಗೆ 350 ರಿಂದ 400 ಕ್ವಿಂಟಲ್‌ವರೆಗೆ ಟೊಮೆಟೋ ಬರುತ್ತಿತ್ತು. ಗುರುವಾರ ಕಲಾಸಿಪಾಳ್ಯಕ್ಕೆ 280 ಕ್ವಿಂಟಲ್‌ ಹಾಗೂ ದಾಸನಪುರ ಮಾರುಕಟ್ಟೆಗೆ 270 ಕ್ವಿಂಟಲ್‌ ಸೇರಿ ಒಟ್ಟಾರೆ ರಾಜಧಾನಿಗೆ 550ಕ್ವಿಂಟಲ್‌ ಬಂದಿದೆ. ಬೆಂಗಳೂರಲ್ಲಿ ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ 20 ಕೆಜಿ ಬಾಕ್ಸ್‌ಗೆ 1400 ರಿಂದ 1500 ಬೆಲೆಯಿದ್ದು, ಕಳೆದ ವಾರ ಬಾಕ್ಸ್‌ಗೆ ಗರಿಷ್ಠ 2200 ಬೆಲೆಯಿತ್ತು.

ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ-ಸಿಎಸ್‌’ ಅಭಿಯಾನ: ಬಿಜೆಪಿಗರ ಬಂಧನ

ಹೊಸ ಬೆಳೆ ಮಾರುಕಟ್ಟೆಗೆ: ರಾಜ್ಯದಲ್ಲಿ ಟೊಮೆಟೋ ಬೆಳೆಗೆ ಕಂಟಕವಾಗಿದ್ದ ಎಲೆ ಸುರುಳಿ ರೋಗ ಕಡಿಮೆ ಆಗುತ್ತಿದ್ದು, ಹೊಸ ಇಳುವರಿ ಬರುತ್ತಿದೆ. ಜೊತೆಗೆ ಆಂಧ್ರಪ್ರದೇಶದ ಅನಂತಪುರ ಮಾರುಕಟ್ಟೆಯಲ್ಲಿಯೂ ಟೊಮೆಟೊ ಹೊಸ ಬೆಳೆ ಮಾರುಕಟ್ಟೆಗೆ ಬಂದಿದೆ. ಅಲ್ಲಿಗೆ ಗುರುವಾರ 1 ಲಕ್ಷಕ್ಕೂ ಹೆಚ್ಚಿನ ಬಾಕ್ಸ್‌ಗಳು ಬಂದಿವೆ. ಹೀಗಾಗಿ ಛತ್ತಿಸಘಡದ ವರ್ತಕರು ರಾಜ್ಯದ ಕೋಲಾರ ಸೇರಿ ಇತರೆ ಎಪಿಎಂಸಿ ಬಿಟ್ಟು ಇದೀಗ ಅಲ್ಲಿಗೆ ತೆರಳುತ್ತಿದ್ದಾರೆ. ಇದರಿಂದ ನಮ್ಮ ರಾಜ್ಯದಿಂದ ಉತ್ತರ ಭಾರತದೆಡೆಗೆ ಹೋಗುವ ಟೊಮೆಟೋ ಪ್ರಮಾಣ ಕಡಿಮೆಯಾಗಿದ್ದು, ಸಹಜವಾಗಿ ಇಲ್ಲಿ ಬೆಲೆ ಇಳಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬೆಲೆ ಸ್ಥಿರತೆಗೆ ಇನ್ನೂ 1.5 ತಿಂಗಳು: ಬೆಲೆ ಇಳಿಕೆ ಅಥವಾ ಸ್ಥಿರತೆ ಬಗ್ಗೆ ಅಧಿಕಾರಿಗಳು ಹಾಗೂ ವರ್ತಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಒಂದು ಒಂದೂವರೆ ತಿಂಗಳಲ್ಲಿ ಕೆಜಿ ಟೊಮೆಟೋ . 40-50 ಅಥವಾ ಅದಕ್ಕಿಂತಲೂ ಕಡಿಮೆ ಆಗಬಹುದು ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಒಂದು ವೇಳೆ ಆಗಸ್ಟ್‌ ಕೊನೆಯ ವಾರದಲ್ಲಿ ವಿಪರೀತ ಮಳೆಯಾದರೆ ಬೆಳೆ ನಾಶವಾಗುವ ಆತಂಕವಿದೆ. ಹೀಗಾದಲ್ಲಿ ಬೆಲೆ ಪುನಃ ಹೆಚ್ಚಳವಾಗಬಹುದು ಎಂದು ರೈತರು, ವರ್ತಕರು ಹೇಳಿದ್ದಾರೆ.

ರಾಜ್ಯ ಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪ ಪರಾಕಾಷ್ಠೆಗೆ: ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು ಮಾರುಕಟ್ಟೆಗೆ ಟೊಮೆಟೋ ಬರುವಿಕೆ ಹೆಚ್ಚಾಗಿದೆ. ತಕ್ಷಣ ಬೆಲೆ ಇಳಿದುಬಿಡುತ್ತದೆ ಎಂದು ಹೇಳಲಾಗಲ್ಲ, ಆದರೆ, ಬೆಲೆ ಕಡಿಮೆಯಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.
-ಗೌಸ್‌ ಖಾನ್‌, ಟೊಮೆಟೋ ವರ್ತಕ, ಕಲಾಸಿಪಾಳ್ಯ, ಬೆಂಗಳೂರು

Follow Us:
Download App:
  • android
  • ios