5 ಲಕ್ಷ ಡೋಸ್ ಕೋವ್ಯಾಕ್ಸಿನ್ ಚೆಲ್ಲಬೇಕಾದ ದುಸ್ಥಿತಿ! ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಅವಧಿ ಮುಗಿದ ಕೋವ್ಯಾಕ್ಸಿನ್ ಬಾಕಿ ಕೇಂದ್ರ ದಿನಾಂಕ ವಿಸ್ತರಿಸಿದ್ದರೂ ರಾಜ್ಯ ಸರ್ಕಾರದ ಅಡ್ಡಿ
ವರದಿ : ರಾಕೇಶ್ ಎನ್.ಎಸ್.
ಬೆಂಗಳೂರು (ಜ.02): ಕೋವಿಡ್ ಸೋಂಕಿನ ವಿರುದ್ಧ ನೀಡುವ ಕೋವ್ಯಾಕ್ಸಿನ್ (Civaxin) ಲಸಿಕೆಯನ್ನು ಅದರ ವಯಲ್ ಮೇಲೆ ಸೂಚಿಸಿರುವ ದಿನಾಂಕದೊಳಗೆ ಬಳಸಬೇಕು ಎಂದು ರಾಜ್ಯ ಸರ್ಕಾರ (Govt Of Karnataka) ಹೊರಡಿಸಿರುವ ಸುತ್ತೋಲೆಯ ಪರಿಣಾಮ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿರುವ ಸುಮಾರು 5 ಲಕ್ಷ ಲಸಿಕೆ ಚೆಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದನೆಯ ದಿನಾಂಕದಿಂದ ಒಂದು ವರ್ಷದ ತನಕ ಬಳಸಬಹುದು ಎಂದು ಹೇಳಿದ್ದರೆ, ರಾಜ್ಯ ಸರ್ಕಾರ ಮಂಗಳವಾರ ವಯಲ್‌ನಲ್ಲಿ ಸೂಚಿಸಿದ ಅಂತಿಮ ದಿನದವರೆಗೆ ಮಾತ್ರ ಬಳಸಬಹುದು ಎಂದು ಹೇಳಿರುವುದು ಖಾಸಗಿ ಆಸ್ಪತ್ರೆಗಳ (Hospital) ಆಡಳಿತ ಮಂಡಳಿಯ ಚಿಂತೆಗೆ ಕಾರಣವಾಗಿದೆ.
ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಿರುವ ಬಹುಪಾಲು ಕೋವ್ಯಾಕ್ಸಿನ್ ವಯಲ್‌ಗಳ ಬಳಕೆ ದಿನಾಂಕ ನವೆಂಬರ್, ಡಿಸೆಂಬರ್ ತಿಂಗಳಿಗೆ ಕೊನೆಗೊಂಡಿತ್ತು. ಈ ಮಧ್ಯೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಕೋವ್ಯಾಕ್ಸಿನ್ ಬಳಕೆಯ ಅಂತಿಮ ದಿನಾಂಕವನ್ನು ಉತ್ಪಾದನೆಯಾದ ದಿನಾಂಕದಿಂದ ಒಂದು ವರ್ಷಕ್ಕೆ ಏರಿಸಿತ್ತು. ಹೀಗಾಗಿ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಕೋವ್ಯಾಕ್ಸಿನ್ ಲಸಿಕೆಯ ಡೋಸ್ ದಾಸ್ತಾನು ಹೊಂದಿದ್ದ ರಾಜ್ಯದ ಖಾಸಗಿ ಆಸ್ಪತ್ರೆಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವು. ಆದರೆ ರಾಜ್ಯ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿ ಕೋವ್ಯಾಕ್ಸಿನ್ ಲಸಿಕೆಯನ್ನು ಅದರ ವಯಲ್‌ನ ಮೇಲೆ ಸೂಚಿಸಿರುವ ಬಳಕೆಯ ಅಂತಿಮ ದಿನದೊಳಗೆ ಮಾತ್ರ ಬಳಸಬೇಕು ಎಂದು ನಿರ್ದೇಶಿಸಿದೆ.
ರಾಜ್ಯ ಸರ್ಕಾರದ ಸೂಚನೆಯನ್ನು ಪಾಲಿಸಲು ಮುಂದಾದರೆ ದಾಸ್ತಾನಿರುವ ಐದು ಲಕ್ಷಕ್ಕೂ ಹೆಚ್ಚು ಡೋಸ್ (Dose) ಲಸಿಕೆಗಳನ್ನು ಚೆಲ್ಲದೆ ವಿಧಿಯಿಲ್ಲ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್ ಒಕ್ಕೂಟ (ಫನಾ) ಅಧ್ಯಕ್ಷ ಡಾ.ಪ್ರಸನ್ನ ಹೇಳುತ್ತಾರೆ.
ಸದ್ಯ ದಾಸ್ತಾನು ಇರುವ 5 ಲಕ್ಷ ಡೋಸ್ ಕೋವ್ಯಾಕ್ಸಿನ್ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಲಸಿಕೆಯನ್ನು ಸಂಗ್ರಹಿಸಿಡುವ ಶೀತಲೀಕೃತ ವ್ಯವಸ್ಥೆಯ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದೆ. ಆದ್ದರಿಂದ ಈಗ ಇರುವ ದಾಸ್ತಾನನ್ನು ಚೆಲ್ಲದೆ ಬೇರೆ ದಾರಿಯಿಲ್ಲ ಎಂದು ಕೆಲ ಖಾಸಗಿ ಆಸ್ಪತ್ರೆಗಳು ಹೇಳುತ್ತಿವೆ.
ಕೇಂದ್ರ ಸರ್ಕಾರಕ್ಕೆ ಪತ್ರ
ಕೋವ್ಯಾಕ್ಸಿನ್ ಬಳಕೆಯ ಬಗ್ಗೆ ಸ್ಪಷ್ಟನಿಲುವು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ (Govt Of India ) ಪತ್ರ ಬರೆಯುತ್ತೇವೆ. ಈಗಾಗಲೇ ನಾನು ಈ ಪತ್ರದಲ್ಲಿ ಅಡಕವಾಗಿರಬೇಕಾದ ಅಂಶಗಳ ಬಗ್ಗೆ ಸಮಾಲೋಚನೆ ಆರಂಭಿಸಿದ್ದೇನೆ. ರಾಜ್ಯ ಸರ್ಕಾರದ ನಿಲುವಿನಿಂದ ಸದ್ಯ ದಾಸ್ತಾನಿರುವ 5 ಲಕ್ಷ ಡೋಸ್ ಲಸಿಕೆಯನ್ನು ಚೆಲ್ಲಬೇಕಿದೆ. ಅಷ್ಟೆಅಲ್ಲದೆ ಮುಂದಿನ ಲಸಿಕಾ ಅಭಿಯಾನದಲ್ಲಿ ಕೈ ಜೋಡಿಸಲು ನಾವು ಹಿಂದೇಟು ಹಾಕಬೇಕಾಗುತ್ತದೆ ಎಂದು ಫನಾ ಅಧ್ಯಕ್ಷ ಡಾ.ಪ್ರಸನ್ನ ಹೇಳಿದ್ದಾರೆ.
ಲಸಿಕೆ ಉಳಿಯಲು ಏನು ಕಾರಣ?
ರಾಜ್ಯದಲ್ಲಿ ಲಸಿಕೆ ಅಭಿಯಾನದ ಆರಂಭದಲ್ಲಿ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ (Hospital) ಮಾತ್ರ ಲಸಿಕೆ ನೀಡಲಾಗುತ್ತಿತ್ತು. ನಂತರದಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ನೀಡಲು ಅವಕಾಶ ನೀಡಿದ ನಂತರ ಅನೇಕ ಆಸ್ಪತ್ರೆಗಳು ದೊಡ್ಡ ಪ್ರಮಾಣದಲ್ಲಿ ಲಸಿಕೆ ಖರೀದಿಸಿದ್ದವು. ಕ್ರಮೇಣ ಲಸಿಕೆ ಪೂರೈಕೆ ಹೆಚ್ಚಾದಂತೆ ಜನರು ಸಹ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಮುಂದಾದರು. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದ ಕೋವ್ಯಾಕ್ಸಿನ್ ಹಾಗೆಯೇ ಉಳಿದಿದೆ. ಹೀಗಿರುವಾಗ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಜನವರಿ 10ರಿಂದ 3ನೇ ಡೋಸ್ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದ ನಂತರ ದಾಸ್ತಾನು ಇರುವ ಲಸಿಕೆ ಬಳಸಲು ಉದ್ದೇಶಿಸಲಾಗಿತ್ತು. ಆದರೆ ವಯಲ್ ಮೇಲಿರುವ ಬಳಕೆಯ ದಿನಾಂಕದವರೆಗೆ ಮಾತ್ರ ಲಸಿಕೆ ಬಳಸಲು ಅವಕಾಶ ಎಂಬ ಸರ್ಕಾರದ ಸುತ್ತೋಲೆಯಿಂದ ಖಾಸಗಿ ಆಸ್ಪತ್ರೆಗಳು ಮತ್ತೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ.
