ಬಾಗಲಕೋಟೆ, ದಾವಣಗೆರೆ ಸೇರಿದಂತೆ ರಾಜ್ಯದ ಐದು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದೆ. ತಮಿಳುನಾಡಿನ ಘಟನೆಗೆ ಪ್ರತೀಕಾರವೆಂದು ಹೇಳಲಾದ ಈ ಬೆದರಿಕೆಯಿಂದಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿ, ತಪಾಸಣೆ ನಂತರ ಕಲಾಪಗಳು ಪುನಾರಂಭಗೊಂಡವು.

 ಬೆಂಗಳೂರು (ಜೂ.20): ಬಾಗಲಕೋಟೆ, ದಾವಣಗೆರೆ, ಧಾರವಾಡ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಶುಕ್ರವಾರ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆಗಳು(Bomb threat) ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಕಾಲ ನ್ಯಾಯಾಲಯಗಳ ಕಲಾಪ ಬಂದ್‌ ಮಾಡಿ, ತಪಾಸಣೆ ನಡೆಸಲಾಯಿತು. ತಪಾಸಣೆ ಬಳಿಕ ಇವು ಹುಸಿ ಕರೆಗಳು ಎಂಬುದು ಸಾಬೀತಾಯಿತು.

ಶುಕ್ರವಾರ ಬೆಳಗ್ಗೆ 7.47ಕ್ಕೆ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಇ-ಮೇಲ್‌ಗಳಿಗೆ Kurunanidhi.kundi@underworld dog ಎಂಬ ಹೆಸರಿನ ಐಡಿಯಿಂದ ಇ-ಮೇಲ್‌ಗಳು ಬಂದಿವೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸ್ಫೋಟಗೊಳ್ಳಲಿವೆ. ತಮಿಳುನಾಡಿನ ಶಿವಗಂಗೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಅಜಿತ್ ಕುಮಾರನ ಸಾವಿಗೆ ಪ್ರತೀಕಾರ ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಉದಯನಿಧಿ ಎಂಬಾತನ ಉಪಪತ್ನಿ, ಮಗನ ಬಂಧನಕ್ಕೂ ಇ-ಮೇಲ್‌ನಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ 468 ಹುಸಿ ಬಾಂಬ್ ಕರೆ, 14 ಆರೋಪಿಗಳ ಬಂಧನ, ಇಬ್ಬರಿಗೆ ಮಾತ್ರವೇ ಶಿಕ್ಷೆ!

ಸುದ್ದಿ ಗೊತ್ತಾದ ಕೂಡಲೇ ನ್ಯಾಯಾಲಯದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರನ್ನು ಆವರಣದಿಂದ ಹೊರಕ್ಕೆ ಕಳುಹಿಸಿ ಬಿಗಿ ಭದ್ರತೆ ಒದಗಿಸಲಾಯಿತು. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಆಗಮಿಸಿ, ನ್ಯಾಯಾಲಯಗಳ ಆವರಣದಲ್ಲಿ ತಪಾಸಣೆ ನಡೆಸಿದರು. ನಂತರ ಇವೆಲ್ಲವೂ ಹುಸಿ ಕರೆ ಎಂದು ಗೊತ್ತಾದ ನಂತರ ಮಧ್ಯಾಹ್ನ 3ರ ನಂತರ ಎಂದಿನಂತೆ ಕಲಾಪಗಳು ಮುಂದುವರಿದವು. ಫೆಬ್ರವರಿಯಲ್ಲೂ ಹೈಕೋರ್ಟ್‌ ಧಾರವಾಡ ಪೀಠ, 9 ಜಿಲ್ಲಾ ಕೋರ್ಟ್‌ಗಳಿಗೆ ಹುಸಿ ಬಾಂಬ್ ಕರೆಗಳು ಬಂದಿದ್ದವು.