ಶಕ್ತಿ ಯೋಜನೆ ಕುರಿತು ನಡೆದ ಮಹತ್ವದ ಸಭೆಯಲ್ಲಿ ಸಾರಿಗೆ ನಿಗಮಗಳು ಸ್ಫೋಟಕ ವರದಿ ನೀಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ವರದಿ ನೀಡಿದ್ದಾರೆ. ಅಷ್ಟಕ್ಕೂ ಈ ವರದಿಯಲ್ಲಿ ಏನಿದೆ?
ಬೆಂಗಳೂರು (ಜೂ.19) ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ವಿಶೇಷ ಸೌಲಭ್ಯ ನೀಡಲಾಗಿತ್ತು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಘೋಷಣೆ ಮಾಡಿದ್ದಾರೆ. ಇದೀಗ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಾರಿಗೆ ಸಭೆಯಲ್ಲಿ ಅಧಿಕಾರಿಗಳು ಮಹತ್ವದ ವರದಿ ನೀಡಿದ್ದಾರೆ. ಶಕ್ತಿ ಯೋಜನೆಯ ಶಾಕಿಂಗ್ ಸತ್ಯಗಳನ್ನು ಸಾರಿಗೆ ನಿಗಮದ ಅಧಿಕಾರಿಗಳು ತೆರೆದಿಟ್ಟಿದ್ದಾರೆ. ಈ ಪೈಕಿ ಪ್ರಮುಖವಾಗಿ ಪುರುಷ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದು ಆತಂಕಕ್ಕೆ ಕಾರಣಾಗಿದೆ.
ಪುರುಷ ಪ್ರಯಾಣಿಕರ ಸಂಖ್ಯೆ ಕುಸಿತ
ಶಕ್ತಿ ಯೋಜನೆ ಜಾರಿಯಾದ ಬಳಿಕ ಪುರುಷ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗೆ ಏಕೈಕ ಆದಾಯ ಮೂಲ ಪುರುಷ ಪ್ರಯಾಣಿಕರಾಗಿದ್ದಾರೆ. ಯೋಜನೆ ಜಾರಿಯಾಗುವಾಗ ಶೇಕಡಾ 48ರಷ್ಟಿದ್ದ ಪುರುಷ ಪ್ರಯಾಣಿಕರ ಸಂಖ್ಯೆ ಇದೀಗ ಶೇಕಡಾ 36ಕ್ಕೆ ಇಳಿಕೆಯಾಗಿದೆ. ಪರಿಣಾಮ ಸಾರಿಗೆ ನಿಗಮಕ್ಕೆ ತೀವ್ರ ಆರ್ಥಿಕ ಕೊರತೆ ಎದುರಾಗುತ್ತಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.
ಶಕ್ತಿ ಯೋಜನೆಯ ಶಾಕಿಂಗ್ ಸತ್ಯಗಳು..!
- ಶೇ.12.5 ರಷ್ಟು ವೇತನ ಹೆಚ್ಚಳದಿಂದಾಗಿ ಸಂಸ್ಥೆಗಳಿಗೆ ರೂ.873.64 ಕೋಟಿ ಹೆಚ್ಚುವರಿ ಹೊರೆ
- ಇಂಧನ ವೆಚ್ಚ ಹೆಚ್ಚಳದಿಂದಾಗಿ (ರೂ 7.81/ಲೀ) ಸಂಸ್ಥೆಗಳಿಗೆ ರೂ.395.00 ಕೋಟಿ ಹೆಚ್ಚುವರಿ ಹೊರೆ
- ಸಿಬ್ಬಂದಿಗಳ ವೇತನ ಬಾಕಿ ಪಾವತಿಗಾಗಿ ರೂ.1271.00 ಕೋಟಿ ಅಗತ್ಯವಿದ್ದು, ರೂ.450.00 ಕೋಟಿ ಬಿಡುಗಡೆಯಾಗಿದೆ. ರೂ.821.00 ಕೋಟಿ ಬಾಕಿ.
- ಸಂಸ್ಥೆಗಳ ಪ್ರಯಾಣ ದರಗಳನ್ನು ದಿನಾಂಕ 05-01-2025 ರಿಂದ ಜಾರಿಗೆ ಬರುವಂತೆ ಹೆಚ್ಚಿಸಿದ್ದು, ಪ್ರಸ್ತುತ ಡಿಸೇಲ್ ದರ ಮತ್ತು ಸಿಬ್ಬಂದಿಗಳ ವೇತನ ಹೆಚ್ಚಳವಾಗಿರುವುದರಿಂದ ಪ್ರಯಾಣ ದರ ಹೆಚ್ಚಿಸಲು ಅನುಮತಿಸುವುದು.
- ಶಕ್ತಿ ಯೋಜನೆ ಜಾರಿಯಾದ ನಂತರ, ಶಕ್ತಿಯೇತರ (ಪುರುಷರು) ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ (ಶೇ.48 ರಿಂದ ಶೇ 36 ) . ಇದರಿಂದಾಗಿ ಸಂಸ್ಥೆಗಳ ದೈನಂದಿನ ಕಾರ್ಯಾಚರಣೆಗೆ ನಗದು ಹರಿವಿನ ಕೊರತೆ
- ನಾಲ್ಕು ನಿಗಮಗಳು ಸೇರಿ ಅಂದಾಜು ರೂ.6000.00 ಕೋಟಿ ಹೊಣೆಗಾರಿಕೆ ಇದೆ (ಪಿ.ಎಫ್, ಡಿಸೇಲ್ ವೆಚ್ಚ, ಗ್ರಾಚ್ಯುಟಿ, ನಿವೃತ್ತ ನೌಕರರ ಬಾಕಿ, ಇತ್ಯಾದಿ)
- ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಶಕ್ತಿ ಯೋಜನೆ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರೆಂಟಿಯಲ್ಲಿ ಒಂದಾಗಿದೆ. ಇದೀಗ ಶಕ್ತಿ ಯೋಜನೆ ಅಂಕಿ ಅಂಶಗಳನ್ನು ಅಧಿಕಾರಿಗಳು ಡಿಕೆ ಶಿವಕುಮಾರ್ ಮುಂದೆ ತೆರದಿಟ್ಟಿದ್ದಾರೆ


