ಉಡುಪಿ ಸೇರಿದಂತೆ 21 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. 

ಉಡುಪಿ (ಜೂ.25): ಉಡುಪಿ ಶಾಲೆ ಸೇರಿ ನೆರೆ ರಾಜ್ಯದ 21 ಶಾಲೆಗಳಿಗೆ ಹುಸಿ ಬಾಂಬ್‌ ಇಮೇಲ್ ಕಳುಹಿಸಿದ್ದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. 

ರೀನಾ ಜೋಶಿಲ್ದಾ ಬಂಧಿತ ಆರೋಪಿ. ರೀನಾ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಚೆನ್ನೈಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಸೀನಿಯರ್ ಕನ್ಸಲ್‌ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೂ.16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಗೆ ಬಾಂಬ್ ಇಟ್ಟಿದ್ದೇವೆ ಎಂದು ಇಮೇಲ್ ಬಂದಿತ್ತು. ಪೊಲೀಸರು ಶಾಲೆಯಲ್ಲಿ ತಪಾಸಣೆ ನಡೆಸಿದಾಗ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿರಲಿಲ್ಲ. ಘಟನೆ ಬಗ್ಗೆ ಉಡುಪಿ ಪೊಲೀಸರು ದೆಹಲಿಯ ಸೈಬರ್ ಕ್ರೈಂ ಸೆಲ್‌ಗೆ ಮಾಹಿತಿ ನೀಡಿದ್ದರು. 

ಅಹಮದಾಬಾದ್ ಶಾಲೆಯೊಂದಕ್ಕೆ ಇಂತಹದ್ದೇ ಬೆದರಿಕೆ ಬಂದಿದ್ದು, ಅಲ್ಲಿನ ಪೊಲೀಸರು ಈ ಪ್ರಕರಣವನ್ನು ಭೇದಿಸಿ ಯುವತಿಯನ್ನು ಬಂಧಿಸಿದ್ದಾರೆ. ಆರೋಪಿಯು 2022ರಿಂದ ಡಾರ್ಕ್ ವೆಬ್ ಮೂಲಕ ನಕಲಿ ಇಮೇಲ್ ವಿಳಾಸದಿಂದ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್‌ಗಳನ್ನು ಕಳಹಿಸಿದ್ದಳು ಎಂದು ತಿಳಿದು ಬಂದಿದೆ.