Asianet Suvarna News Asianet Suvarna News

ಐವರು ಶಾಸಕರಿಂದ ರಾಜೀನಾಮೆ?

ವಿಧಾ​ನ​ಮಂಡ​ಲದ ಜಂಟಿ ಅಧಿ​ವೇ​ಶ​ನ​ಕ್ಕೆ ಕಾಂಗ್ರೆ​ಸ್‌-ಜೆಡಿ​ಎ​ಸ್‌ನ 11 ಮಂದಿ ಶಾಸ​ಕರು ಗೈರು ಹಾಜ​ರಾ​ಗುವ ಮೂಲಕ ಆತಂಕ ಮುಗಿಲು ಮುಟ್ಟಿದೆ. ಈ ಘಟ್ಟದ ಮುಂದಿನ ಹಂತ​ದಲ್ಲಿ ಅತೃಪ್ತ ಶಾಸ​ಕರ ಪೈಕಿ ಐವರು ಗುರು​ವಾರ ರಾಜೀ​ನಾಮೆ ನೀಡುವ ಸಾಧ್ಯ​ತೆಗಳಿವೆ ಎನ್ನಲಾಗುತ್ತಿದೆ. 

5 Dissident MLAs May Quit Party
Author
Bengaluru, First Published Feb 7, 2019, 7:36 AM IST

ಬೆಂಗ​ಳೂರು :  ರಾಜ್ಯ ಸಮ್ಮಿಶ್ರ ಸರ್ಕಾ​ರ​ವನ್ನು ತುದಿ​ಗಾಲ ಮೇಲೆ ನಿಲ್ಲಿ​ಸಿ​ರುವ ‘ಅತೃಪ್ತರ ಆಪರೇಷನ್‌’ನ ಕೊನೆಯ ಘಟ್ಟಅನಾ​ವ​ರ​ಣ​ಗೊ​ಳ್ಳ​ಲಾ​ರಂಭಿ​ಸಿದ್ದು, ಬುಧ​ವಾರ ನಡೆದ ವಿಧಾ​ನ​ಮಂಡ​ಲದ ಜಂಟಿ ಅಧಿ​ವೇ​ಶ​ನ​ಕ್ಕೆ ಕಾಂಗ್ರೆ​ಸ್‌-ಜೆಡಿ​ಎ​ಸ್‌ನ 11 ಮಂದಿ ಶಾಸ​ಕರು ಗೈರು ಹಾಜ​ರಾ​ಗುವ ಮೂಲಕ ಆತಂಕ ಮುಗಿಲು ಮುಟ್ಟಿದೆ. ಈ ಘಟ್ಟದ ಮುಂದಿನ ಹಂತ​ದಲ್ಲಿ ಅತೃಪ್ತ ಶಾಸ​ಕರ ಪೈಕಿ ಐವರು ಗುರು​ವಾರ ರಾಜೀ​ನಾಮೆ ನೀಡುವ ಸಾಧ್ಯ​ತೆಗಳಿವೆ ಎನ್ನ​ಲಾ​ಗಿ​ದೆ.

ಬುಧ​ವಾರ ಆರಂಭ​ಗೊಂಡ ಜಂಟಿ ಅಧಿ​ವೇ​ಶ​ನದಲ್ಲಿ ಅತೃಪ್ತರ ಆಪರೇಷನ್‌ನ ಅಂತಿಮ ಘಟ್ಟವು ಸ್ಪಷ್ಟ​ವಾಗಿ ಅನಾ​ವ​ರ​ಣ​ಗೊ​ಳ್ಳ​ಲಾ​ರಂಭಿ​ಸಿತು. ಬಿಜೆ​ಪಿಯು ತನ್ನ ಕಾರ್ಯ​ತಂತ್ರ​ದಂತೆ ಯಶ​ಸ್ವಿ​ಯಾಗಿ ರಾಜ್ಯ​ಪಾ​ಲರ ಭಾಷ​ಣಕ್ಕೆ ಅಡ್ಡಿ​ಪಡಿ​ಸಿತು. ಜಂಟಿ ಸದ​ನ ಸಮಾ​ವೇ​ಶ​ಗೊಂಡ 5 ನಿಮಿ​ಷಕ್ಕೆ ಮುಕ್ತಾ​ಯ​ಗೊಂಡಿತು. ರಾಜ್ಯ​ಪಾ​ಲರು ಸದ​ನ​ವನ್ನು ಉದ್ದೇ​ಶಿಸಿ ಮಾತ​ನಾ​ಡಲು ತಂದಿದ್ದ 22 ಪುಟ​ಗಳ ಭಾಷ​ಣದ ಪೈಕಿ ಎರಡು ಪುಟ​ಗ​ಳನ್ನು ಸಮ​ರ್ಪ​ಕ​ವಾಗಿ ಓದಲು ಸಾಧ್ಯ​ವಾ​ಗ​ದಂತೆ ಸದ​ನ​ದಲ್ಲಿ ಕೋಲಾ​ಹ​ಲ​ಕಾರಿ ಸನ್ನಿ​ವೇ​ಶ​ವನ್ನು ಬಿಜೆಪಿ ಸೃಷ್ಟಿ​ಸಿತು.

ಸದ​ನ​ದಲ್ಲಿ ಕಾಂಗ್ರೆ​ಸ್‌-ಜೆಡಿ​ಎಸ್‌ ಶಾಸ​ಕರ ಗೈರು ಹಾಜ​ರಾ​ತಿ​ಯನ್ನು ಮುಂದೊ​ಡ್ಡಿದ ಬಿಜೆ​ಪಿಯು ಬಹು​ಮ​ತ​ವಿ​ಲ್ಲದ ಸರ್ಕಾರ ರಾಜ್ಯ​ಪಾ​ಲ​ರಿಂದ ಸುಳ್ಳು ಹೇಳಿ​ಸಲು ಹೊರ​ಟಿದೆ. ಇದಕ್ಕೆ ಅವ​ಕಾಶ ನೀಡು​ವು​ದಿಲ್ಲ ಎಂದು ವಾದಿಸಿ ರಾಜ್ಯ​ಪಾ​ಲರ ಭಾಷ​ಣಕ್ಕೆ ಅಡ್ಡಿ ಉಂಟುಮಾಡಿತು. ಇದಕ್ಕೆ ಪೂರಕವಾಗಿ, ಬಿಜೆ​ಪಿ​ಯತ್ತ ವಾಲಿ​ರುವ ಕಾಂಗ್ರೆ​ಸ್‌ನ ನಾಲ್ಕು ಮಂದಿ ಅತೃಪ್ತ ಶಾಸ​ಕರಾದ ಗೋಕಾಕ್‌ನ ರಮೇಶ್‌ ಜಾರಕಿಹೊಳಿ, ಅಥಣಿಯ ಮಹೇಶ್‌ ಕುಮಟಳ್ಳಿ, ಬಳ್ಳಾರಿ ಗ್ರಾಮೀಣದ ಬಿ.ನಾಗೇಂದ್ರ ಮತ್ತು ಚಿಂಚೋ​ಳಿಯ ಡಾ

ಉಮೇಶ್‌ ಜಾಧವ್‌ ಅವರು ಸದನಕ್ಕೆ ಗೈರುಹಾಜರಾಗಿದ್ದುದು ಸರ್ಕಾರಕ್ಕೆ ಇಕ್ಕಟ್ಟಿನ ಸ್ಥಿತಿ ತಂದೊಡ್ಡಿತು.

ಕಾಂಗ್ರೆಸ್‌ ನಾಯ​ಕತ್ವ ಸತ​ತ​ವಾಗಿ ನೀಡಿ​ರುವ ನೋಟಿ​ಸ್‌ ಹಾಗೂ ವಿಪ್‌ಗೂ ಕ್ಯಾರೆ ಎನ್ನ​ದಿ​ರುವ ಮೂಲಕ ಈ ನಾಲ್ಕು ಮಂದಿ ಅತೃ​ಪ್ತರು ಸದನಕ್ಕೆ ಗೈರಾಗುವ ಮೂಲಕ ತಮ್ಮ ನಿಲು​ವನ್ನು ಬಹು​ತೇಕ ಸ್ಪಷ್ಟ​ಗೊ​ಳಿ​ಸಿ​ದ್ದಾರೆ. ಈಗ ಕಾಂಗ್ರೆ​ಸ್‌ಗೆ ಇರುವ ಆತಂಕ​ವೆಂದರೆ, ಈ ನಾಲ್ಕು ಮಂದಿ ತಮ್ಮೊಂದಿಗೆ ಇನ್ನೊಂದಿಬ್ಬರು ಶಾಸ​ಕ​ರನ್ನು ಸೆಳೆ​ದು​ಕೊಂಡು ರಾಜೀ​ನಾಮೆ ನೀಡು​ವಂತಹ ನಿರ್ಣಾಯಕ ಹೆಜ್ಜೆ ಇಡು​ವರೇ ಎಂಬುದು. ಈ ಅನು​ಮಾ​ನ​ವಿ​ರು​ವು​ದ​ರಿಂದಲೇ ಈ ನಾಲ್ಕು ಮಂದಿ ಅತೃ​ಪ್ತ​ರಿಗೆ ಪಾಠ ಕಲಿ​ಸಲು ಶುಕ್ರ​ವಾರ ಮತ್ತೊಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ​ಯನ್ನು ದಿಢೀರ್‌ ಆಗಿ ಆಯೋ​ಜಿ​ಸ​ಲಾ​ಗಿದೆ. ಈ ಸಭೆಗೂ ಅತೃ​ಪ್ತರು ಗೈರು ಹಾಜ​ರಾ​ದರೆ ಪಕ್ಷಾಂತರ ನಿಷೇ​ಧ ಕಾಯ್ದೆ ಅಡಿ ಕ್ರಮ ಕೈಗೊ​ಳ್ಳುವ ಉದ್ದೇಶ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ಇದೆ ಎನ್ನ​ಲಾ​ಗು​ತ್ತಿ​ದೆ.

ಕಾಂಗ್ರೆಸ್‌ ನಾಯ​ಕತ್ವ ಇಂತ​ಹ​ದೊಂದು ಕ್ರಮಕ್ಕೆ ಮುಂದಾ​ಗ​ಬ​ಹುದು ಎಂಬ ನಿರೀ​ಕ್ಷೆಯ ಹಿನ್ನೆ​ಲೆ​ಯಲ್ಲಿ ತಮ್ಮೊಂದಿಗೆ ಇನ್ನಿ​ಬ್ಬರು ಶಾಸ​ಕ​ರನ್ನು ಸೆಳೆ​ದು​ಕೊ​ಳ್ಳ​ಲಿ​ರುವ ಈ ಅತೃಪ್ತ ಶಾಸ​ಕರು ಗುರು​ವಾ​ರವೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀ​ನಾಮೆ ನೀಡು​ವರು ಎಂದು ಹೇಳ​ಲಾ​ಗು​ತ್ತಿ​ದೆ. ಈಗ ಕುತೂ​ಹಲ ಮೂಡಿ​ಸಿ​ರುವ ಪ್ರಶ್ನೆ​ಯೆಂದರೆ, ಈ ಘೋಷಿತ ಅತೃ​ಪ್ತ​ರೊಂದಿಗೆ ರಾಜೀ​ನಾ​ಮೆಗೆ ಮುಂದಾ​ಗ​ಲಿ​ರುವ ಅಘೋ​ಷಿತ ಅತೃಪ್ತರು ಯಾರು ಎಂಬುದು.

ಬುಧ​ವಾರ ನಡೆದ ವಿಧಾ​ನ​ಮಂಡಲ ಜಂಟಿ ಅಧಿ​ವೇ​ಶ​ನಕ್ಕೆ ದೋಸ್ತಿ ಪಕ್ಷ​ಗಳ 11 ಮಂದಿ ಗೈರು ಹಾಜ​ರಾ​ಗಿ​ದ್ದರು. ಇದ​ರಲ್ಲಿ ನಾಲ್ಕು ಮಂದಿ ಅತೃಪ್ತ ಶಾಸ​ಕ​ರು ಹಾಗೂ ಬಹು​ತೇಕ ಅತೃ​ಪ್ತ​ರೊಂದಿಗೆ ಇರುವ ಹಾಗೂ ರೆಸಾ​ರ್ಟ್‌ ಬಡಿ​ದಾ​ಟದ ಪರಿ​ಣಾ​ಮ​ವಾಗಿ ಪರಾ​ರಿ​ಯಾ​ಗಿ​ರುವ ಕಂಪ್ಲಿ ಗಣೇಶ್‌ ಜೊತೆಗೆ ಇನ್ನೂ ಆರು ಮಂದಿ ಇತರೆ ಶಾಸ​ಕರು ಗೈರು ಹಾಜ​ರಾ​ಗಿ​ದ್ದರು. ಈ ಆರು ಮಂದಿಯ ಪೈಕಿ ಸೌಮ್ಯಾರೆಡ್ಡಿ ಹಾಗೂ ರೋಷನ್‌ ಬೇಗ್‌ ಅವರನ್ನು ಅತೃ​ಪ್ತರ ಪಟ್ಟಿ​ಯಲ್ಲಿ ಪರಿ​ಗ​ಣಿ​ಸಲು ಸಾಧ್ಯ​ವಿಲ್ಲ. ಏಕೆಂದರೆ, ಅವರು ನಾಯ​ಕ​ತ್ವಕ್ಕೆ ಕಾರಣ ನೀಡಿಯೇ ಸದ​ನಕ್ಕೆ ಗೈರು ಹಾಜರಾ​ಗಿದ್ದರು.

ಉಳಿ​ದಂತೆ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದೊರೆ​ಯದೇ ಅಸ​ಮಾ​ಧಾ​ನ​ಗೊಂಡಿ​ರುವ ಚಿಕ್ಕ​ಬ​ಳ್ಳಾ​ಪು​ರದ ಡಾ.ಸುಧಾ​ಕರ್‌ ಹಾಗೂ ಸಚಿವ ಸ್ಥಾನದ ಆಕಾಂಕ್ಷಿ​ಯಾ​ಗಿದ್ದ ಹಿರೇ​ಕೆ​ರೂರು ಶಾಸಕ ಬಿ.ಸಿ. ಪಾಟೀಲ್‌ ಅವರ ಗೈರು ಹಾಜರಿ ಕಾಂಗ್ರೆಸ್‌ ಪಾಳ​ಯ​ದಲ್ಲಿ ಆತಂಕ ಮೂಡಿ​ಸಿದೆ. ಇನ್ನು ಹರಿ​ಹರ ಶಾಸಕ ಎಸ್‌.ರಾಮ​ಪ್ಪ ಅವರು ತಮ್ಮ ಗೈರು ಹಾಜ​ರಾ​ತಿಗೆ ಕಾರಣ ನೀಡಿ​ದರೂ, ಈ ಬಗ್ಗೆ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ಅನು​ಮಾ​ನ​ಗ​ಳಿವೆ ಎನ್ನ​ಲಾ​ಗಿ​ದೆ.

ಯಾರ್ಯಾರು ಗೈರು?

ಬಂಡೆದ್ದ ನಾಲ್ವರು: ರಮೇಶ್‌ ಜಾರಕಿಹೊಳಿ (ಗೋಕಾಕ ಶಾಸಕ), ಮಹೇಶ್‌ ಕುಮಟಳ್ಳಿ (ಅಥಣಿ ಶಾಸಕ), 

ಉಮೇಶ್‌ ಜಾಧವ್‌ (ಚಿಂಚೋಳಿ ಶಾಸಕ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ ಶಾಸಕ)

ಅತೃಪ್ತರೆನ್ನಲಾದ ಇತರರು: ಜೆ.ಎನ್‌.ಗಣೇಶ್‌ (ಕಂಪ್ಲಿ ಶಾಸಕ), ಡಾ

ಕೆ.ಸುಧಾಕರ್‌ (ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್‌ (ಹಿರೇಕೆರೂರು), ಎಸ್‌.ರಾಮಪ್ಪ (ಹರಿಹರ ಶಾಸಕ)

ಜೆಡಿಎಸ್‌ ಶಾಸಕ: ನಾರಾಯಣಗೌಡ (ಕೆ.ಆರ್‌.ಪೇಟೆ)

ಇನ್ನೂ ಇಬ್ಬರು: ಸೌಮ್ಯಾ ರೆಡ್ಡಿ (ಜಯನಗರ), ರೋಷನ್‌ ಬೇಗ್‌ (ಶಿವಾಜಿ ನಗರ). ಇವರಿಬ್ಬರೂ ಪಕ್ಷದ ಅನುಮತಿ ಪಡೆದು ಗೈರು


ರಾಜೀನಾಮೆ ಏಕೆ?

1. ಕಲಾಪಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಅತೃಪ್ತರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಸಿದ್ಧತೆ

2. ವಿಪ್‌ ಉಲ್ಲಂಘಿಸಿದ ಕಾರಣ ಗೈರಾದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪ್ರಹಾರ

3. ಇದಕ್ಕಾಗಿಯೇ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಕಾಂಗ್ರೆಸ್‌ ನಾಯಕತ್ವ

4. ಇದಕ್ಕೂ ಗೈರು ಹಾಜರಾದರೆ ಶಾಸಕತ್ವದಿಂದ ಅನರ್ಹಗೊಳಿಸಲು ಸ್ಪೀಕರ್‌ಗೆ ಮೊರೆ

5. ಪಕ್ಷದ ಈ ದಾಳದಿಂದ ತಪ್ಪಿಸಿಕೊಳ್ಳಲು ಸಭೆಗೆ ಮುನ್ನವೇ ರಾಜೀನಾಮೆ: ಅತೃಪ್ತರ ತಂತ್ರ

Follow Us:
Download App:
  • android
  • ios