Asianet Suvarna News Asianet Suvarna News

ರಾಜ್ಯವನ್ನು ಬೆಚ್ಚಿ ಬೀಳಿಸಿದ 4 ಕೇಸ್‌ಗಳು!

ಚಿಕ್ಕಬಳ್ಳಾಪುರ, ಮೈಸೂರಿನ ವೃದ್ಧರು, ಬಾಗಲಕೋಟೆಯ ಕಾನ್ಸ್‌ಟೇಬಲ್‌, ಕಲಬುರಗಿಯಲ್ಲಿ ಮಗುವಿಗೆ ಸೋಂಕು| ಈ ನಾಲ್ಕೂ ಪ್ರಕರಣಗಳಲ್ಲಿ ಸೋಂಕು ಹೇಗೆ ತಗುಲಿತು ಎನ್ನುವುದನ್ನು ಪತ್ತೆ ಹಚ್ಚುವುದೇ ಅಧಿಕಾರಿಗಳಿಗೆ ತಲೆನೋವು| ಚಿಕ್ಕಬಳ್ಳಾಪುರದಲ್ಲಿ ವೃದ್ಧನ ಸಾವು, ಸೋಂಕು| ತಗುಲಿದ್ದು ಹೇಗೆನ್ನುವುದೇ ನಿಗೂಢ| 300 ಮಂದಿಗೆ ಇತ್ತೀಚೆಗಷ್ಟೇ ಆಹಾರದ ಕಿಟ್‌ ವಿತರಿಸಿದ್ದ ಮೃತನ ಕುಟುಂಬ

4 Coronavirus Cases In Karnataka Creates Panic Situation
Author
Bangalore, First Published Apr 16, 2020, 7:49 AM IST

1. 300 ಮಂದಿಗೆ ಇತ್ತೀಚೆಗಷ್ಟೇ ಆಹಾರದ ಕಿಟ್‌ ವಿತರಿಸಿದ್ದ ಮೃತನ ಕುಟುಂಬ: ಬೆಂಗಳೂರಿನ ಆಸ್ಪತ್ರೆಯಲ್ಲಿ ಇತ್ತೀಚೆಗೆ ಚಿಕಿತ್ಸೆ ಪಡೆದಿದ್ದ 65 ವರ್ಷದ ವೃದ್ಧ

ಚಿಕ್ಕಬಳ್ಳಾಪುರ: ಕೊರೋನಾ ಸೋಂಕಿಗೆ ಬುಧವಾರ ಜಿಲ್ಲೆಯ 65 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದ ಈ ವ್ಯಕ್ತಿಗೆ ಸೋಂಕು ತಗುಲಿದ್ದು ಹೇಗೆನ್ನುವುದೇ ನಿಗೂಢ. ಆತಂಕದ ವಿಚಾರವೆಂದರೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದ ಈ ವ್ಯಕ್ತಿಯ ಕುಟುಂಬ ಇತ್ತೀಚೆಗಷ್ಟೇ 300 ಬಡವರಿಗೆ ಆಹಾರದ ಕಿಟ್‌ ವಿತರಿಸಿತ್ತು. ಇದೀಗ ಆ ಕಿಟ್‌ ಪಡೆದವರನ್ನೆಲ್ಲ ಪತ್ತೆಹಚ್ಚಿ ಕ್ವಾರಂಟೈನ್‌ ಮಾಡುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

"

ಮಧುಮೇಹ ಸೇರಿ ವಿವಿಧ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಈ ವ್ಯಕ್ತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನು ಬಿಟ್ಟರೆ ಜಿಲ್ಲೆಯಿಂದ ಹೊರಗೆಲ್ಲೂ ಹೋಗಿಲ್ಲ. ಇವರ ಪುತ್ರ ಬೆಂಗಳೂರಿನ ಶಿವಾಜಿನಗರದ ಮದರಸಾವೊಂದರಲ್ಲಿ ಅರೇಬಿಯಾ ಭಾಷೆ ಕಲಿಯುತ್ತಿದ್ದ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಪಸಾಗಿದ್ದ.

ಲಾಕ್‌ಡೌನ್‌ನಿಂದ ಸುಧಾರಿಸಿದ ವೃಷಭಾವತಿ ನೀರಿನ ಗುಣಮಟ್ಟ!

ನಗರಸಭೆಗೂ ಬಂದಿದ್ದರು: ಆಹಾರದ ಕಿಟ್‌ ವಿತರಿಸಲು ಅನುಮತಿ ಪಡೆಯುವ ಉದ್ದೇಶದಿಂದ ಸೋಂಕಿತ ಕುಟುಂಬದ ವ್ಯಕ್ತಿ ನಗರಸಭೆಗೂ ಆಗಮಿಸಿದ್ದರು. ಹೀಗಾಗಿ ನಗರಸಭೆ ಆಯುಕ್ತರು ಸೇರಿ ಕಚೇರಿಯ ಸಿಬ್ಬಂದಿಗೂ ಆತಂಕ ಶುರುವಾಗಿದೆ.

2. ಮೈಸೂರಲ್ಲಿ ವೃದ್ಧನಿಗೆ ಸೋಂಕು, ಎಲ್ಲಿಂದ ಎಂಬುವುದೇ ಗೊತ್ತಿಲ್ಲ: ಫಾರ್ಮ ಕಂಪನಿ, ತಬ್ಲೀಘಿ, ವಿದೇಶ ಪ್ರವಾಸಯಾವುದೇ ನಂಟಿಲ್ಲ ಆದರೂ ಕೊರೋನಾ

ಮೈಸೂರು: ಮೈಸೂರಲ್ಲಿ ಪತ್ತೆಯಾಗಿರುವ ಬಹುತೇಕ ಕೊರೋನಾ ಪ್ರಕರಣ ನಂಜನಗೂಡಿನ ಜುಬಿಲಿಯಂಟ್‌ ಕಾರ್ಖಾನೆಗೆ ಸಂಬಂಧಿಸಿದ್ದು. ಆದರೆ, ಬುಧವಾರ 72 ವರ್ಷದ ವೃದ್ಧರೊಬ್ಬರಿಗೆ ಸೋಂಕು ದೃಢಪಟ್ಟಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ತೀವ್ರ ಆತಂಕ ಸೃಷ್ಟಿಸಿದೆ.

ತೀವ್ರ ಉಸಿರಾಟದಿಂದ ಬಳಲುತ್ತಿದ್ದ ಆಸ್ಪತ್ರೆಗೆ ದಾಖಲಾಗಿರುವ ಈ ವ್ಯಕ್ತಿ ವಿದೇಶಕ್ಕೆ ಹೋಗಿಲ್ಲ, ವಿದೇಶಕ್ಕೆ ಹೋಗಿಬಂದವರ ಜತೆ ಸಂಪರ್ಕವೂ ಇರಲಿಲ್ಲ. ಆದರೂ, ಈ ವ್ಯಕ್ತಿಗೆ ಸೋಂಕು ಹೇಗೆ ತಗುಲಿತು ಎನ್ನುವ ಮಾಹಿತಿ ಇನ್ನೂ ಜಿಲ್ಲಾಡಳಿತ ಬಳಿ ಇಲ್ಲ. ಈ ಕುರಿತು ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ.

ಜಿಲ್ಲೆಯಲ್ಲಿ ಹೊಸದಾಗಿ 10 ಪ್ರಕರಣ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 9 ಮಂದಿ ಜ್ಯುಬಿಲಿಯಂಟ್‌ ಕಾರ್ಖಾನೆ ನೌಕರರು. ಒಟ್ಟಾರೆ ಜಿಲ್ಲೆಯಲ್ಲಿ 58 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 12 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 46 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಮತ್ತೆ 1120 ಮಂದಿಗೆ ಕೊರೋನಾ: 12,000 ಗಡಿದಾಟಿದ ಸೋಂಕಿತರು!

3. 14 ತಿಂಗಳ ಹಸುಳೆಗೂ ಕೊರೋನಾ ಸೋಂಕು: ಶೀತ- ಜ್ವರ ಎಂದು ಮಗು ಆಸ್ಪತ್ರೆಗೆ ದಾಖಲಾಗಿದ್ದ ಮಗು

ಕಲಬುರಗಿ: ಕಲಬುರಗಿಯಲ್ಲಿ 14 ತಿಂಗಳ ಹಸುಳೆಗೂ ಕೊರೋನಾ ಹೆಮ್ಮಾರಿ ಗಂಟು ಬಿದ್ದಿದೆ! ವಿಷಮಶೀತ ಜ್ವರದಿಂದ ನರಳುತ್ತಿದ್ದ ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮದ 14 ತಿಂಗಳ ಗಂಡು ಮಗುವಿನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮಗು ಶೀತ ಹಾಗೂ ಜ್ವರದಿಂದ ನರಳುತ್ತಿತ್ತು, ಪೋಷಕರು ತಕ್ಷಣ ಮಗುವನ್ನು ಕಲಬುರಗಿ ಆಸ್ಪತ್ರೆಗೆ ತಂದು ತೋರಿಸಿದ್ದಾರೆ, ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುವ ಜೊತೆಗೆ ಮಗುವಿನಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದ ಕಾರಣ ಜಿಮ್ಸ್‌ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಅಲ್ಲಿ ಕೊರೋನಾ ದೃಢಪಟ್ಟಿದೆ.

ಮಗುವಿನ ತಂದೆ ಊರು ಕವಲಗಾ(ಬಿ), ತಾಯಿ ಊರು ಸವರಡಗಿ (ಬಿ). ವಾರದ ಹಿಂದಷ್ಟೆತಾಯಿ ಈ ಮಗುವಿನ ಜೊತೆಗೆ ತನ್ನ ತವರು ಸರಡಗಿಯಲ್ಲಿ ವಾಸವಿದ್ದರು, ದೇವರ ದರ್ಶನಕ್ಕೆಂದು ಬಳವಾಡಕ್ಕೂ ಭೇಟಿ ನೀಡಿದ್ದರು. ಆದರೆ ಪೋಷಕರು ಯಾವುದೇ ಪ್ರಯಾಣ ಹಿನ್ನೆಲೆ ಹೊಂದಿಲ್ಲ. ಊರಲ್ಲೇ ಕಿರಾಣಿ ಅಂಗಡಿ ಹೊಂದಿರುವ ಪೋಷಕರು ಲಾಕ್ಡೌನ್‌ನಿಂದಾಗಿ ಅಂಗಡಿಗೆ ಬಾಗಿಲು ಹಾಕಿದ್ದರು.

ನಗುತ್ತಿದೆ ನಿಸರ್ಗ: ಗಂಗೆ ಸ್ವಚ್ಛವಾದ ಬೆನ್ನಲ್ಲೇ ಅಪರೂಪದ ಪ್ರಾಣಿ ಪ್ರತ್ಯಕ್ಷ!

ಮಗುವಿಗೆ ಸೋಂಕು ದೃಢವಾಗುತ್ತಿದ್ದಂತೆ ಕವಲಗಾ ಗ್ರಾಮದಲ್ಲಿ ಬಿಗಿ ಬಂದೋಬಸ್‌್ತ ಕೈಗೊಳ್ಳಲಾಗಿದೆ. ಪೋಷಕರ ಜತೆಗೆ ಮಗುವಿನ ಜತೆಗೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ನಿಗಾದಲ್ಲಿಡಲಾಗಿದೆ.

4. ಮುಧೋಳ ಠಾಣೆ ಕಾನ್ಸ್‌ಟೇಬಲ್‌ವೊಬ್ಬರಿಗೆ ಸೋಂಕು ದೃಢ|  ಪೊಲೀಸ್‌ ಸಿಬ್ಬಂದಿಗೆ ಸೋಂಕು ತಗುಲಿದ ಮೊದಲ ಪ್ರಕರಣ ಇದು|  ತಬ್ಲೀಘಿಗಳ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೇದೆ

ಜಮಖಂಡಿ(ಬಾಗಲಕೋಟೆ): ಮುಧೋಳದ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರಿಗೆ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, ಈ ಮೂಲಕ ಪೊಲೀಸರೊಬ್ಬರಿಗೆ ಸೋಂಕು ತಗಲಿದ ರಾಜ್ಯದ ಮೊದಲ ಪ್ರಕರಣ ಇದಾಗಿದೆ. ಬಂದೋಬಸ್‌್ತ ಕಾರ್ಯದಲ್ಲಿ ಪಾಲ್ಗೊಂಡಿದ್ದ ಈ ಕಾನ್‌ಸ್ಟೇಬಲ್‌ಗೆ ಅಂಟಿಕೊಂಡ ಸೋಂಕಿನ ಮೂಲ ಹುಡುಕುವುದು ಇದೀಗ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಮಸೀದಿಯೊಂದರಲ್ಲಿ ಉಳಿದಿದ್ದ ತಬ್ಲೀಘಿಗಳ ತೆರವು ಕಾರ್ಯಾಚರಣೆ ವೇಳೆ ಸೋಂಕು ತಗುಲಿತೇ ಎನ್ನುವ ಅನುಮಾನ ಈಗ ಕಾಡಲಾರಂಭಿಸಿದೆ.

'ಜಾನಿ'ಯಂತಾಗಿ ಮನೆಯಲ್ಲಿರಿ ಎಂದ ಪೊಲೀಸ್, ಅಷ್ಟಕ್ಕೂ ಈ ಜಾನಿ ಯಾರು?

ಜಮಖಂಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೇಬಲ್‌ 3 ತಿಂಗಳ ಹಿಂದಷ್ಟೇ ಮುಧೋಳ ಠಾಣೆಗೆ ವರ್ಗವಾಗಿದ್ದರು. ದೆಹಲಿಗೆ ಹೋಗಿ ಬಂದಿದ್ದ ತಬ್ಲೀಘಿಗಳು ಮುಧೋಳ ಮಸೀದಿಯಲ್ಲಿದ್ದಾರೆಂಬ ಮಾಹಿತಿ ಮೇರೆಗೆ ಮಾ.27ರಂದು ಪೊಲೀಸರು ದಾಳಿ ನಡೆಸಿ ಲಾಠಿ ಪ್ರಹಾರ ನಡೆಸಿದ್ದರು. ಠಾಣೆಯಲ್ಲಿ ರೈಟರ್‌ ಆಗಿದ್ದ ಈ ಕಾನ್‌ಸ್ಟೇಬಲ್‌ ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸೋಂಕಿತ ಕಾನ್‌ಸ್ಟೇಬಲ್‌ ಜಮಖಂಡಿ ಪೊಲೀಸ್‌ ಕ್ವಾರ್ಟರ್ಸ್‌ನಲ್ಲೇ ಉಳಿದುಕೊಂಡಿದ್ದ ಕಾರಣ ಪತ್ನಿ, ಮಕ್ಕಳು ಹಾಗೂ ಇಡೀ ಕ್ವಾರ್ಟರ್ಸ್‌ನ ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಸಹೋದ್ಯೋಗಿಗಳ ಆರೋಗ್ಯ ತಪಾಸಣೆ ಮಾಡಲಾಗಿದೆ.

Follow Us:
Download App:
  • android
  • ios