Asianet Suvarna News Asianet Suvarna News

ತಬ್ಲೀಘಿ: ಧರ್ಮಪ್ರಚಾರ ನಡೆಸಿದ 19 ವಿದೇಶಿಗರಿಗೆ ಜಾಮೀನು

ಪ್ರವಾಸಿ ವೀಸಾ ಮೇಲೆ ಬಂದು ಧರ್ಮಪ್ರಚಾರ| ಬಂಧನಕ್ಕೆ ಒಳಗಾಗಿದ್ದ 19 ವಿದೇಶಿಯರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ| ತಲಾ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ನೀಡಬೇಕು. ಹಾಗೆಯೇ, 10 ಸಾವಿರ ನಗದು ಅಥವಾ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು|

37th ACMM Court Granted Bail to 19 People Foreigners
Author
Bengaluru, First Published Jul 17, 2020, 11:26 AM IST

ಬೆಂಗಳೂರು(ಜು.17):  ಪ್ರವಾಸಿ ವೀಸಾದಡಿ ಭಾರತಕ್ಕೆ ಆಗಮಿಸಿ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ 19 ವಿದೇಶಿಯರಿಗೆ ನಗರದ 37ನೇ ಎಸಿಎಂಎಂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 

ಪ್ರಕರಣ ಸಂಬಂಧ ಜಾಮೀನು ಕೋರಿ ಅಹ್ಮದ್‌ ಜೈನಿ ಮತ್ತು ಮಹ್ಮದ್‌ ಫೈಸಲ್‌ ಸೇರಿದಂತೆ ಇಂಡೋನೇಷ್ಯಾದ 10 ಮತ್ತು ಕಜಕಿಸ್ತಾನದ 9 ಮಂದಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಪುರಸ್ಕರಿಸಿದ ಎಸಿಎಂಎಂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. ಆರೋಪಿಗಳು ಪ್ರವಾಸಿ ವೀಸಾದ ಮೇಲೆ ದೆಹಲಿಗೆ ಬಂದು ಜಮಾತ್‌ ಧರ್ಮ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಂತರ ಬೆಂಗಳೂರಿಗೆ ಬಂದು ಪಾದರಾಯನಪುರ ಮಸೀದಿಯಲ್ಲಿ ಆಶ್ರಯ ಪಡೆದಿದ್ದರು. ಭಾರತೀಯ ವಿದೇಶಾಂಗ ಕಾಯ್ದೆ ಉಲ್ಲಂಘನೆ ಮತ್ತು ಧರ್ಮ ಪ್ರಚಾರದಲ್ಲಿ ತೊಡಗಿದ್ದ ಆರೋಪದ ಮೇಲೆ ಜೆ.ಜೆ.ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಿತ್ತು.

ತಬ್ಲಿಗ್ ಜಮಾತ್‌ನಲ್ಲಿ ಪಾಲ್ಗೊಂಡ 76 ಮಂದಿ ವಿದೇಶಿಗರಿಗೆ ಜಾಮೀನು!

ಈಗ ಜಾಮೀನು ನೀಡಿಕೆ ವೇಳೆ ತಲಾ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ನೀಡಬೇಕು. ಹಾಗೆಯೇ, 10 ಸಾವಿರ ನಗದು ಅಥವಾ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಇದೇ ಮಾದರಿಯ ಪ್ರಕರಣಗಳಲ್ಲಿ ಭಾಗಿಯಾಗಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ನ್ಯಾಯಾಲಯ ಆರೋಪಿಗಳಿಗೆ ಷರತ್ತು ವಿಧಿಸಿದೆ. ಅಲ್ಲದೆ, ಜೈಲಿನಿಂದ ಬಿಡುಗಡೆ ಮಾಡಿದ ನಂತರ ತನಿಖಾಧಿಕಾರಿಗಳು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವವರೆಗೆ ಬೆಂಗಾವಲಿನೊಂದಿಗೆ ಡಿಟೆನ್ಷನ್‌ ಕೇಂದ್ರ ಅಥವಾ ಇತರೆ ಯಾವುದಾದರೂ ಪ್ರದೇಶದಲ್ಲಿ ಇರಿಸಬೇಕು ಎಂದು ನಿರ್ದೇಶಿಸಿದೆ.
 

Follow Us:
Download App:
  • android
  • ios