ಬೆಂಗಳೂರು(ಜು.09): ಕೊರೋನಾ ಸೋಂಕಿನಿಂದಾಗಿ ಶಾಲೆಗಳ ಆರಂಭ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಿಬಿಎಸ್‌ಇ ಪಠ್ಯಕ್ರಮದ ಮಾದರಿಯಲ್ಲಿ ರಾಜ್ಯದಲ್ಲಿಯೂ ಶೇ.30 ರಿಂದ 35ರಷ್ಟುಪಠ್ಯವನ್ನು ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ತಿಳಿಸಿದ್ದಾರೆ.

ಬುಧವಾರ ‘ಸುವರ್ಣ ನ್ಯೂಸ್‌’ ವಾಹಿನಿಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೇಂದ್ರೀಯ ಪಠ್ಯಕ್ರಮದಂತೆಯೇ ರಾಜ್ಯದಲ್ಲಿಯೂ ಆಗಸ್ಟ್‌, ಸೆಪ್ಟಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಶಾಲೆಗಳು ಆರಂಭವಾದರೆ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಪ್ರತಿ ವರ್ಷದ ತರಗತಿಗಳಲ್ಲಿ ಪುನರಾವರ್ತಿತವಾಗಿರುವ ಪಾಠಗಳನ್ನು ಕೈಬಿಡುವ ಮೂಲಕ ಕನಿಷ್ಠ ಶೇ.30ರಿಂದ 35ರಷ್ಟುಕಡಿತಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಿದರು.

ಶಾಲೆ ಆರಂಭ ಚಿಂತನೆಯಿಲ್ಲ:

ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವ ಯಾವುದೇ ರೀತಿಯ ಚಿಂತನೆಗಳು ಸರ್ಕಾರದ ಮುಂದಿಲ್ಲ. ಪೋಷಕರಿಗೆ ವಿಶ್ವಾಸ ಬರುವ ತನಕ ಶಾಲೆಗಳನ್ನು ಆರಂಭಿಸುವುದಿಲ್ಲ. ಒಂದು ವೇಳೆ ಆರಂಭಿಸಿದರೂ ಮೊದಲು ಪ್ರೌಢಶಾಲೆ, ನಂತರ ಹಿರಿಯ ಪ್ರಾಥಮಿಕ ಶಾಲೆ, ಕೊನೆಗೆ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಲಾಗುತ್ತದೆ ಎಂದರು.

ಸಾಂವಿಧಾನಿಕ ಹಕ್ಕು ಅಧ್ಯಾಯಕ್ಕೆ CBSE ಕೊಕ್‌: ಶೇ. 30 ಪಠ್ಯಕ್ಕೆ ಕತ್ತರಿ

ಆನ್‌ಲೈನ್‌ ಶಿಕ್ಷಣ ಕುರಿತು ತಜ್ಞರ ಸಮಿತಿ ನೀಡಿರುವ ವರದಿಯ ಸಾಧಕ-ಬಾಧಕ ಚರ್ಚಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರನ್ನು ಒಳಗೊಂಡ ಸಮಿತಿಗಳು ಸಾಕಷ್ಟುವರದಿಗಳನ್ನು ಸಲ್ಲಿಸಿವೆ. ಎಲ್ಲ ವರದಿಗಳನ್ನು ಅನುಷ್ಠಾನ ಮಾಡಿಲ್ಲ, ಅದೇ ರೀತಿ ಪ್ರೊ. ಎಂ.ಕೆ. ಶ್ರೀಧರ್‌ ನೇತೃತ್ವದ ಸಮಿತಿ ವರದಿಯ ಸಾಧಕ-ಬಾಧಕಗಳನ್ನು ಚಚಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ತಜ್ಞರ ವರದಿಯಲ್ಲಿ ಆನ್‌ಲೈನ್‌ ಶಿಕ್ಷಣ ಪೂರಕ ಶಿಕ್ಷಣವೇ ಹೊರತು, ಪರಾರ‍ಯಯವಲ್ಲ ಎಂದು ಹೇಳಿದೆ. ಇದೇ ವಿಷಯವನ್ನು ನ್ಯಾಯಾಲಯಕ್ಕೂ ಮನದಟ್ಟು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

1 ತಿಂಗಳೊಳಗೆ ಗುತ್ತಿಗೆ ವೈದ್ಯರು ಕಾಯಂ, ಮುಷ್ಕರ ನಿಲ್ಲಿಸಿ ವೈದ್ಯರು ಇಂದು ಕೆಲಸಕ್ಕೆ ಹಾಜರ್

ಆನ್‌ಲೈನ್‌ ಶಿಕ್ಷಣವನ್ನು ಪ್ರಮುಖವಾಗಿ ಕೇಂದ್ರ ಪಠ್ಯಕ್ರಮ ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಈ ಪೈಕಿ ಐಸಿಎಸ್‌ಇನಲ್ಲಿ ಶೇ.2.5ರಷ್ಟುಮತ್ತು ಸಿಬಿಎಸ್‌ಇನಲ್ಲಿ ಶೇ.4ರಷ್ಟುಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ. ಆದರೆ, ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿ ಯಾವುದೇ ರೀತಿಯಲ್ಲಿ ಆನ್‌ಲೈನ್‌ ಶಿಕ್ಷಣ ಆರಂಭಿಸಿಲ್ಲ. ಸರ್ಕಾರ ಕೂಡ ಇದಕ್ಕೆ ಅನುಮತಿ ನೀಡಿಲ್ಲ. ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ಪಡೆಯುತ್ತಿರುವ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದೂರದರ್ಶನ ಮೂಲಕ ಶಿಕ್ಷಣ:

ರಾಜ್ಯದಲ್ಲಿ ಆನ್‌ಲೈನ್‌ ಶಿಕ್ಷಣವನ್ನು ಸಂಪೂರ್ಣ ನೀಡಲು ಸಾಧ್ಯವಿಲ್ಲ. ಆದ್ದರಿಂದಲೇ ಪೂರಕವಾಗಿ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಶಿಕ್ಷಣ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ವಿದ್ಯಾರ್ಥಿಗಳು ಸ್ಮಾರ್ಟ್‌ ಪೋನ್‌ ಹೊಂದಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಸಮೀಕ್ಷೆ ನಡೆಸಲಾಗಿದ್ದು, ಶೇ.80 ರಿಂದ 90 ರಷ್ಟುಮಕ್ಕಳ ಮನೆಯಲ್ಲಿ ಟಿವಿ ಇದೆ. ಶೇ.55ರಿಂದ 60ರಷ್ಟುಮನೆಯಲ್ಲಿ ಸ್ಮಾರ್ಟ್‌ಫೋನ್‌ಗಳಿವೆ. ಉಳಿದ ಮಕ್ಕಳ ಮನೆಯಲ್ಲಿ ಸ್ಮಾರ್ಟ್‌ ಫೋನ್‌ಗಳಿಲ್ಲ. ಆದ್ದರಿಂದ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಶಿಕ್ಷಣ ನೀಡಲು ಚಿಂತನೆ ನಡೆಸುತ್ತಿದ್ದೇವೆ. ಇದನ್ನು ಯೂಟ್ಯೂಬ್‌ ಚಾನೆಲ್‌ಗಳಿಗೂ ಅಪ್‌ಲೋಡ್‌ ಮಾಡಲಾಗುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳು ತಮಗೆ ಸಮಯ ಸಿಕ್ಕಾಗ ನೋಡಬಹುದು ಎಂದು ಹೇಳಿದರು.