ನಗರದಲ್ಲಿ ಪ್ರವಾಹ ಸೃಷ್ಟಿಗೆ ಕಾರಣವಾದ ಒತ್ತುವರಿ ತೆರವಿಗೆ ಚಾಲನೆ ನೀಡಿರುವ ಬಿಬಿಎಂಪಿಯು ಕಳೆದ 9 ದಿನದಲ್ಲಿ 34 ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದೆ.

ಬೆಂಗಳೂರು (ಸೆ.10) : ನಗರದಲ್ಲಿ ಪ್ರವಾಹ ಸೃಷ್ಟಿಗೆ ಕಾರಣವಾದ ಒತ್ತುವರಿ ತೆರವಿಗೆ ಚಾಲನೆ ನೀಡಿರುವ ಬಿಬಿಎಂಪಿಯು ಕಳೆದ 9 ದಿನದಲ್ಲಿ 34 ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದೆ. ಮಳೆಯಿಂದಾಗಿ ನಗರ ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿನ ಬಹುತೇಕ ಬಡಾವಣೆಗಳು ಪ್ರವಾಹಕ್ಕೆ ಸಿಲುಕಿದ್ದವು. ಈ ವೇಳೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಅದರಂತೆ ಸೆ.1ರಿಂದ 9ರವರೆಗೆ ಕಾರ್ಯಾಚರಣೆ ನಡೆಸಿದ್ದ ಬಿಬಿಎಂಪಿ, 34 ಕಡೆ ಒತ್ತುವರಿ ತೆರವುಗೊಳಿಸಿ 21,963 ಚದರ ಅಡಿ ರಾಜಕಾಲುವೆ ಭೂಮಿಯನ್ನು ವಶಕ್ಕೆ ಪಡೆದಿದೆ.

Bengaluru: ಐಟಿ ಕಂಪನಿಗಳು ಮಾಡಿರುವ ಒತ್ತುವರಿ ತೆರವುಗೊಳಿಸಿ: ಪೈಗೆ ರಮೇಶ್‌ ಸವಾಲು

ಬಿಬಿಎಂಪಿ(BBMP) ತೆರವು ಮಾಡಿರುವ 34 ಕಡೆಗಳಲ್ಲಿ 14 ಕಡೆ ಖಾಲಿ ಜಾಗವಾಗಿದೆ. ಉಳಿದಂತೆ 15ಕ್ಕೂ ಹೆಚ್ಚು ಕಡೆ ಕಾಂಪೌಂಡ್‌ ಗೋಡೆಗಳನ್ನು ಕೆಡವಿ ಭೂಮಿ ವಶಕ್ಕೆ ಪಡೆಯಲಾಗಿದೆ. ನಾಲ್ಕೈದು ಕಡೆ ಮಾತ್ರ ರಾಜಕಾಲುವೆ ಮೇಲ್ಭಾಗ ಮುಚ್ಚಿರುವುದು ಹಾಗೂ ಶೆಡ್‌, ಕಟ್ಟಡವನ್ನು ತೆರವು ಮಾಡಲಾಗಿದೆ.

126 ಕೆರೆಗಳು ಭರ್ತಿ: ಮಳೆಯ ಪರಿಣಾಮ ನಗರದಲ್ಲಿನ 209 ಕರೆಗಳಲ್ಲಿ 126 ಕೆರೆಗಳು ಭರ್ತಿಯಾಗಿವೆ. ಅದರಲ್ಲಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 42, ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 30 ಕೆರೆಗಳು ತುಂಬಿ ಪ್ರವಾಹಕ್ಕೆ ಕಾರಣವಾಗಿವೆ. ಸದ್ಯ ಕೆರೆಗಳಿಂದ ನೀರು ಹರಿವು ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಮತ್ತೆ ಮಳೆಯಾದರೆ ಕೆರೆಯ ಹೊರಹರಿವು ಹೆಚ್ಚಾಗಿ ಮತ್ತೆ ಪ್ರವಾಹ ಸೃಷ್ಟಿಯಾಗುವ ಸಂಭವವಿದೆ.

ಸೆ.1ರಿಂದ 8ವರೆಗೆ ಒತ್ತುವರಿ ತೆರವಿನ ವಿವರ:

ವಲಯ ಒತ್ತುವರಿ ತೆರವು ಸಂಖ್ಯೆ

  • ಬೊಮ್ಮನಹಳ್ಳಿ 4
  • ದಾಸರಹಳ್ಳಿ 2
  • ಪೂರ್ವ 1
  • ಮಹದೇವಪುರ 14
  • ಆರ್‌.ಆರ್‌.ನಗರ 3
  • ಪಶ್ಚಿಮ 1
  • ಯಲಹಂಕ 9
  • ಒಟ್ಟು 34 

ಶೀಘ್ರ ರಾಜಕಾಲುವೆ ಒತ್ತುವರಿ ತೆರವಿಗೆ ಲಿಂಬಾವಳಿ ಸೂಚನೆ:

ಕೆ.ಆರ್‌.ಪುರ: ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಡುಗೋಡಿಯ ರಾಮಯ್ಯ ಗಾರ್ಡನ್‌, ಬೆಳತೂರಿನ ಜೀವನ್‌ ಎಕ್ಸಾಟಿಕಾ, ಮಹಾವೀರ್‌ ಅಪಾಟ್ರ್ಮೆಂಟ್‌, ಶಿಗೇಹಳ್ಳಿಯ ಚೈತನ್ಯ ಗ್ರೀನ್‌ಫೀಲ್ಡ್‌ ವಿಲ್ಲಾಗಳಲ್ಲಿನ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಅರವಿಂದ ಲಿಂಬಾವಳಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ನೀರು ಸುಗಮವಾಗಿ ಹರಿದು ಹೋಗುವಂತೆ ಮಾಡಲು ಅಗತ್ಯ ಕ್ರಮ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ಮಾಡಿದವರಿಗೆ ಬಿಗ್ ಶಾಕ್ !

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಾಡುಗುಡಿ, ಬೆಳತೂರು, ಶಿಗೇಹಳ್ಳಿ ಭಾಗದಲ್ಲಿನ ಬಡಾವಣೆಗಳು, ವಿಲ್ಲಾ, ಅಪಾಟ್ರ್ಮೆಂಟ್‌ಗಳಲ್ಲಿ ನೀರು ತುಂಬಿ ಇಲ್ಲಿನ ನಿವಾಸಿಗಳು ಸಾಕಷ್ಟುತೊಂದರೆ ಅನುಭವಿಸಿದ್ದರು. ಕಳೆದೆರಡು ದಿನಗಳಿಂದ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಕೆಸರು ನೀರು, ದುರ್ವಾಸನೆಯಿಂದ ರೋಗಗಳು ಹರಡುವ ಭೀತಿಯಲ್ಲಿ ಜನರು ಜೀವಿಸುತ್ತಿದ್ದಾರೆ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಗ್ರಾಮಾಂತರ ಅಧ್ಯಕ್ಷ ನಟರಾಜ್‌, ಮುಖಂಡರಾದ ರಾಮಾಂಜನೇಯ, ಯಲ್ಲಪ್ಪ, ಚನ್ನಸಂದ್ರ ಚಂದ್ರಶೇಖರ್‌, ಪಿಳ್ಳಪ್ಪ, ಮಂಜುನಾಥ ಇದ್ದರು.

ಸುದ್ದಿಚಿತ್ರ: ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಡುಗೋಡಿಯ ರಾಮಯ್ಯ ಗಾರ್ಡನ್‌ನಲ್ಲಿ ಶಾಸಕ ಅರವಿಂದ ಲಿಂಬಾವಳಿ ಅಧಿಕಾರಿಗಳೊಂದಿಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶದ ಪರಿವೀಕ್ಷಣೆ ನಡೆಸಿದರು. ಬಿಬಿಎಂಪಿ ಅಧಿಕಾರಿಗಳು, ಬಿಜೆಪಿ ಮುಖಂಡರಾದ ನಟರಾಜ್‌, ರಾಮಾಂಜನೇಯ ಇದ್ದರು.