Asianet Suvarna News Asianet Suvarna News

Bengaluru: ಐಟಿ ಕಂಪನಿಗಳು ಮಾಡಿರುವ ಒತ್ತುವರಿ ತೆರವುಗೊಳಿಸಿ: ಪೈಗೆ ರಮೇಶ್‌ ಸವಾಲು

ಐಟಿ ಉದ್ಯಮಿ ಮೋಹನ್‌ದಾಸ್‌ ಪೈಗೆ ಬಹಿರಂಗ ಪತ್ರ, ‘ಸೇವ್‌ ಬೆಂಗಳೂರು’ ಅಭಿಯಾನಕ್ಕೆ ಆಕ್ರೋಶ, ಸಿಎಸ್‌ಆರ್‌ ನಿಧಿನಿಂದ ಬಿಡುಗಡೆ ಮಾಡಿರುವ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಎನ್‌.ಆರ್‌.ರಮೇಶ್‌ 

Clear the IT Companies Encroached Land NR Ramesh Letter to Mohandas Pai grg
Author
First Published Sep 9, 2022, 5:49 AM IST

ಬೆಂಗಳೂರು(ಸೆ.09):  ಐಟಿ-ಬಿಟಿ ಕಂಪನಿಗಳು ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ಕೆರೆ-ರಾಜಕಾಲುವೆಗಳನ್ನು ತೆರವುಗೊಳಿಸಿ ಕೊಡಬೇಕು ಮತ್ತು ಕಾನೂನು ರೀತ್ಯ ಸಿಎಸ್‌ಆರ್‌ ನಿಧಿಯಿಂದ ಬಿಡುಗಡೆ ಮಾಡಿರುವ ಹಣದ ಬಗ್ಗೆ ಶ್ವೇತಪತ್ರ ಬಿಡುಗಡೆಗೊಳಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ. ಈ ಸಂಬಂಧ ರಮೇಶ್‌ ಅವರು ಐಟಿ ಉದ್ಯಮಿ ಮೋಹನ್‌ದಾಸ್‌ ಪೈ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ‘ಸೇವ್‌ ಬೆಂಗಳೂರು’ ಎಂಬ ಅಭಿಯಾನ ಆರಂಭಿಸಿರುವ ಪೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂಬ ಸವಾಲನ್ನೂ ಎಸೆದಿದ್ದಾರೆ.

ಎಲೆಕ್ಟ್ರಾನಿಕ್ಸ್‌ ಸಿಟಿ ಇಂಡಸ್ಟ್ರೀಸ್‌ ಅಸೋಸಿಯೇಷನ್‌ (ಇಎಲ್‌ಸಿಐಎ) ಮತ್ತು ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ (ಓಆರ್‌ಆರ್‌ಸಿಎ) ಹೆಸರಿನಲ್ಲಿ ಎರಡು ಸಂಘಟನೆಗಳನ್ನು ಮಾಡಿಕೊಡಿರುವ ಬೆಂಗಳೂರು ಐಟಿ-ಬಿಟಿ ಕಂಪನಿಗಳು ಹಾಗೂ ಟೆಕ್‌ ಪಾರ್ಕ್ಗಳು ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ವಿಶ್ವದ ಏಕೈಕ ನಗರ ಎಂಬ ಖ್ಯಾತಿ ಪಡೆದಿರುವ ಮತ್ತು ಮೇಲ್ಕಂಡ ಸಂಸ್ಥೆಗಳಿಗೆ ಎಲ್ಲವನ್ನೂ ನೀಡಿರುವ ಬೆಂಗಳೂರು ಮಹಾನಗರದ ಬಗ್ಗೆ ಜಾಗತಿಕವಾಗಿ ಕಪ್ಪು ಚುಕ್ಕೆ ತರುವ ರೀತಿಯಲ್ಲಿ ವರ್ತಿಸುತ್ತಿವೆ. ಮಹಾನಗರದ ಇಂದಿನ ಮಳೆ ನೀರಿನ ಅವಾಂತರಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ನಗರದ ಐಟಿ-ಬಿಟಿ ಕಂಪನಿಗಳು ಮತ್ತು ಟೆಕ್‌ ಪಾರ್ಕ್ಗಳೂ ಕಾರಣ ಎಂಬ ಸತ್ಯವನ್ನು ಉದ್ದೇಶಪೂರ್ವಕವಾಗಿ ಮರೆತಿದ್ದೀರಿ ಎಂದು ಅವರು ಹರಿಹಾಯ್ದಿದ್ದಾರೆ.

Bengaluru Rains: ಮಳೆಯಿಂದಾಗಿ ಭಾರೀ ನಷ್ಟ: ಬೆಂಗ್ಳೂರಿಂದ ಐಟಿ ಕಂಪನಿಗಳ ಗುಳೆ ಎಚ್ಚರಿಕೆ..!

ವಿಶೇಷವಾಗಿ ಓಆರ್‌ಆರ್‌ಸಿಎ ಅಡಿಯಲ್ಲಿ ಅಡಿಯಲ್ಲಿ ಇರುವಂಥ 79 ಟೆಕ್‌ ಪಾರ್ಕ್ಗಳು, ಇಎಲ್‌ಸಿಐಎ ಅಡಿಯಲ್ಲಿರುವ 250ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳು, ಮಹದೇವಪುರದ ಐಟಿಪಿಎಲ್‌ನಲ್ಲಿರುವ 100ಕ್ಕೂ ಹೆಚ್ಚು ಐಟಿ ಕಂಪನಿಗಳು ತಾವು ನಿರ್ಮಾಣ ಮಾಡಿರುವ ತಮ್ಮ ತಮ್ಮ ಸಂಸ್ಥೆಯ ಕಟ್ಟಡಗಳ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿ ಇದ್ದ ರಾಜಕಾಲುವೆಗಳನ್ನು ಮತ್ತು ರಾಜಕಾಲುವೆಗಳ ಬಫರ್‌ ಜೋನ್‌ಗಳನ್ನು ಬಹುತೇಕ ಒತ್ತುವರಿ ಮಾಡಿಕೊಂಡಿರುವ ಸತ್ಯವನ್ನು ತಾವು ಮರೆತಂತಿದೆ ಎಂದು ಹೇಳಿದ್ದಾರೆ.

ಉದಾಹರಣೆಗೆ ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದ ಅನೇಕ ಪ್ರಸಿದ್ಧ ಸಂಸ್ಥೆಗಳು ತಾವು ನಿರ್ಮಾಣ ಮಾಡಿರುವ ಕಟ್ಟಡಗಳ ವ್ಯಾಪ್ತಿಯಲ್ಲಿದ್ದ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವುದು ಅಥವಾ ರಾಜಕಾಲುವೆಗಳ ಬೃಹತ್‌ ಮಳೆ ನೀರುಗಾಲುವೆ ಮತ್ತು ದ್ವಿತೀಯ ಹಂತದ ರಾಜಕಾಲುವೆಗಳ ಅಗಲವನ್ನು ಕಡಿತಗೊಳಿಸಿ ಮಾರ್ಗಾಂತರ ಮಾಡಿರುವುದು ತಮಗೂ ತಿಳಿದಿದೆ ಎಂದು ಭಾವಿಸಿರುತ್ತೇನೆ.

ಹಾಗೆಯೇ, ಹೊರ ವರ್ತುಲ ರಸ್ತೆ ಸೇರಿದಂತೆ ಮಹಾನಗರದಲ್ಲಿರುವ 79 ಟೆಕ್‌ ಪಾರ್ಕ್ಗಳು 90,85,000 ಚ.ಅಡಿಗಳಷ್ಟುಒಟ್ಟು ನಿರ್ಮಿತ ಪ್ರದೇಶಗಳ ಪೈಕಿ ಶೇ.25ರಷ್ಟುನಿರ್ಮಿತ ಪ್ರದೇಶವನ್ನು ಸಂಪೂರ್ಣವಾಗಿ ರಾಜಕಾಲುವೆಗಳು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡೇ ನಿರ್ಮಿಸಿರುವ ಕಟ್ಟಡಗಳಾಗಿವೆ. ಕೇವಲ ಈ 79 ಟೆಕ್‌ ಪಾರ್ಕ್ಗಳು ಮಾತ್ರವೇ ಕನಿಷ್ಠ ಆರು ಲಕ್ಷ ಚ.ಅಡಿಗಳಷ್ಟುವಿಸ್ತೀರ್ಣದ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಕಬಳಿಕೆ ಮಾಡಿರುವ ವಿಷಯ ದಾಖಲೆಗಳಿಂದ ಈಗಾಗಲೇ ಸಾಬೀತಾಗಿದೆ. ಈ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್‌ ಪ್ರಕರಣಗಳೂ ಸಹ ದಾಖಲಿಸಲ್ಪಟ್ಟಿದೆ ಎಂದು ವಿವರಿಸಿದ್ದಾರೆ.

ಅಲ್ಲದೇ ಮಹದೇವಪುರದ ಐಟಿಪಿಎಲ್‌ನಲ್ಲಿರುವ ಐಟಿ ಸಂಸ್ಥೆಗಳು ಅವುಗಳಿಗೆ ಹೊಂದಿಕೊಂಡಂತಿರುವ ಗಿಡ್ಡನಕೆರೆ ಮತ್ತು ಕುಂದಲ ಹಳ್ಳಿ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿವೆ. ಈ ಕಂಪನಿಗಳು ನಿರ್ಮಾಣಗೊಂಡ ಆಯಾ ಕಾಲದ ಭ್ರಷ್ಟಅಧಿಕಾರಿಗಳು ಮತ್ತು ಕೆಲವು ವಂಚಕ ಜನ ಪ್ರತಿನಿಧಿಗಳ ಕಾನೂನುಬಾಹಿರ ಸಹಕಾರಗಳಿಂದಲೇ ಇಷ್ಟೊಂದು ಬೃಹತ್‌ ಮಟ್ಟದ ಒತ್ತುವರಿ ಕಾರ್ಯಗಳು ನಡೆದಿವೆ ಎಂಬುದೂ ಬಹಿರಂಗ ಸತ್ಯ ಎಂದು ಹೇಳಿದ್ದಾರೆ.

'300 ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಜಮೀರ್‌ ಯತ್ನ’

ಈ ಎಲ್ಲ ವಿಷಯಗಳ ಬಗ್ಗೆ ತಮಗೆ ಅರಿವಿದ್ದೂ ಸಹ ಉದ್ದೇಶಪೂರ್ವಕವಾಗಿ ಇಂತಹ ವಿಷಯಗಳನ್ನು ಮರೆಮಾಚಿ ಬೆಂಗಳೂರು ಮಹಾನಗರದಂತಹ ಐತಿಹಾಸಿಕ ನಗರಕ್ಕೆ ಜಾಗತಿಕ ಮಟ್ಟದಲ್ಲಿ ಮಸಿ ಬಳಿಯುವಂಥ ಕೆಲಸವನ್ನು ತಾವು ಮಾಡುವ ಮೂಲಕ ಬೆಂಗಳೂರು ನಗರದ ವಿರೋಧಿ ಧೋರಣೆಯನ್ನು ನಿರಂತರವಾಗಿ ಪ್ರದರ್ಶನ ಮಾಡಿದ್ದೀರಿ ಎಂದು ಖಾರವಾಗಿ ಹೇಳಿದ್ದಾರೆ.

ಸಿಎಆರ್‌ ಹಣದಲ್ಲಿ ವಂಚನೆ ಆರೋಪ

ಮೂರೂ ಪ್ರದೇಶಗಳ ಸಂಸ್ಥೆಗಳೇ ವಾರ್ಷಿಕವಾಗಿ ಸಿಎಸ್‌ಆರ್‌ ನಿಯಮಗಳಿಗೆ ಅನುಗುಣವಾಗಿ ಕನಿಷ್ಠ .2,500 ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಸಿಎಸ್‌ಆರ್‌ ನಿಧಿಯಿಂದ ಸಂಬಂಧಪಟ್ಟಸ್ಥಳೀಯ ಸಂಸ್ಥೆಯ ಮೂಲಕ ಸಾರ್ವಜನಿಕ ಕೆಲಸಗಳಿಗೆ ಬಳಸಬೇಕಿದ್ದರೂ ಕೇವಲ ಹತ್ತಾರು ಕೋಟಿ ರು.ಗಳನ್ನು ಮಾತ್ರ ವಿನಿಯೋಗಿಸಿ ವಂಚನೆ ಎಸಗಿವೆ. ಈ ಬಗ್ಗೆ ಪ್ರತಿ ವರ್ಷ ಬಿಡುಗಡೆ ಮಾಡಿರುವ ಬಗ್ಗೆ ಐಟಿ-ಬಿಟಿ ಕಂಪನಿಗಳು ಶ್ವೇತ ಪತ್ರ ಬಿಡುಗಡೆ ಮಾಡಬೇಕು ಎಂದು ರಮೇಶ್‌ ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios