ವಯಸ್ಸಾದವರಿಗೆ ಮನೆಯಿಂದ ಮತದಾನ ವ್ಯವಸ್ಥೆ, ಮೊದಲ ದಿನ ಭರ್ಜರಿ ಯಶಸ್ಸು, ಮೇ 6ರವರೆಗೂ ಅವಕಾಶ, 12 ಜಿಲ್ಲೆಗಳಲ್ಲಿ 2 ದಿನದ ನಂತರ ಆರಂಭ: ಚುನಾವಣಾ ಆಯೋಗ. 

ಬೆಂಗಳೂರು(ಏ.30): ಇದೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಿರುವ ಚುನಾವಣಾ ಆಯೋಗವು ಮನೆಯಿಂದಲೇ ಮತದಾನ ಕಾರ್ಯ ಪ್ರಾರಂಭಿಸಿದ್ದು, ಸುಮಾರು 33 ಸಾವಿರಕ್ಕೂ ಹೆಚ್ಚು ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

ಶನಿವಾರ ಬ್ಯಾಲೆಟ್‌ ಪೇಪರ್‌ ಮೂಲಕ ನೋಂದಾಯಿತ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಂಗವಿಕಲರು ಮತ ಚಲಾಯಿಸಿದರು. ಮೇ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ನಟಿ ಲೀಲಾವತಿ ಸೇರಿದಂತೆ ರಾಜ್ಯದ ಹಲವೆಡೆ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಂಗವಿಕಲರು ಮತದಾನ ಮಾಡಿದರು. 22 ಚುನಾವಣಾ ಜಿಲ್ಲೆಯಲ್ಲಿ ಮತದಾನ ಕಾರ್ಯ ಆರಂಭಗೊಂಡಿದೆ. ಇನ್ನುಳಿದ 12 ಚುನಾವಣಾ ಜಿಲ್ಲೆಯಲ್ಲಿ ಇನ್ನೆರಡು ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿಯು ತಿಳಿಸಿದೆ.

80 ವರ್ಷ ಮೇಲ್ಪಟ್ಟವರಿಂದ ಮತದಾನ ಆರಂಭ: ಕಲಬುರಗಿ ಜಿಲ್ಲೆಯಲ್ಲಿ 1011 ಮತದಾನ

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಗೌಪ್ಯ ಮತದಾನ ನಡೆಯಿತು. ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಯಲ್ಲಿ 2,542 ತಂಡಗಳು ಭಾಗಿಯಾಗಲಿದ್ದು, 2706 ಮಾರ್ಗಗಳಲ್ಲಿ ಈ ತಂಡಗಳು ತೆರಳಲಿದೆ. ಈ ಪೈಕಿ ಶನಿವಾರ 1,627 ತಂಡಗಳು 1627 ಮಾರ್ಗಗಳಲ್ಲಿ ಪ್ರಯಾಣಿಸಿ 33 ಸಾವಿರಕ್ಕೂ ಹೆಚ್ಚು 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಂಕವಿಕಲರಿಂದ ಮತದಾನ ಮಾಡಿಸಿಕೊಂಡಿವೆ. ಇಬ್ಬರು ಚುನಾವಣಾಧಿಕಾರಿ, ಒಬ್ಬರು ವಿಡಿಯೋಗ್ರಾಫರ್‌, ಒಬ್ಬರು ಪೊಲೀಸ್‌ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳ ಏಜೆಂಟ್‌ಗಳ ಉಪಸ್ಥಿತಿಯಲ್ಲಿ ಮತದಾನ ನಡೆಯಿತು. ಮನೆಯಿಂದ ಮತದಾನ ಮಾಡಿದ ಬಳಿಕ ಯಾರಿಂದ, ಎಲ್ಲಿ, ಯಾವ ಕ್ಷೇತ್ರದಲ್ಲಿ ಮತದಾನವಾಗಿದೆ ಎಂಬುದನ್ನು ಗುರುತಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.

ಮನೆಯಿಂದಲೇ ಮತದಾನ ಮಾಡಲು 99,529 ಮತದಾರರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 80 ವರ್ಷಕ್ಕೂ ಅಧಿಕ ಮೇಲ್ಪಟ್ಟಹಿರಿಯ ಮತದಾರರು 12.15 ಲಕ್ಷ ಮತದಾರರಿದ್ದಾರೆ. ಈ ಪೈಕಿ 5.46 ಲಕ್ಷ ಪುರುಷರು, 6.69 ಲಕ್ಷ ಮಹಿಳೆಯರು ಮತ್ತು ಇತರೆ 16 ಮಂದಿ ಇದ್ದಾರೆ. ಈ ಮತದಾರರ ಪೈಕಿ 80,250 ಮತದಾರರು ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. 5.71 ಲಕ್ಷ ಅಂಗವಿಕಲ ಮತದಾರರಿದ್ದು, 3.35 ಲಕ್ಷ ಪುರುಷರು, 2.35 ಲಕ್ಷ ಮಹಿಳೆಯರು, 61 ಇತರೆ ಮತದಾರರಿದ್ದಾರೆ. ಇವರಲ್ಲಿ 19,279 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ.